ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಸಲು 21 ದಿನ ಕಾಲಾವಕಾಶ ಕೋರಿದ ಎಎಸ್‌ಐ

ದೆಹಲಿ : ಜ್ಞಾನವಾಪಿ ಮಸೀದಿಯ ಆವರಣದಲ್ಲಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಹೆಚ್ಚುವರಿ ಮೂರು ವಾರಗಳ ಕಾಲಾವಕಾಶ ಕೋರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಇಂದು (ನ. 28) ಅರ್ಜಿ ಸಲ್ಲಿಸಿದೆ. ಸಮಗ್ರ ವರದಿಯನ್ನು ಹೊಂದಿಸಲು ಮತ್ತು ಅಂತಿಮಗೊಳಿಸಲು ಹೆಚ್ಚಿನ ಸಮಯವನ್ನು ಕೋರಿ ಎಎಸ್‌ಐ ಅನ್ನು ಪ್ರತಿನಿಧಿಸುವ ಸ್ಥಾಯಿ ಸರಕಾರಿ ವಕೀಲ ಅಮಿತ್ ಶ್ರೀವಾಸ್ತವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

100 ದಿನಗಳ ಅವಧಿಯ ವ್ಯಾಪಕ ಸಮೀಕ್ಷೆಯು ಸುಮಾರು ಒಂದು ತಿಂಗಳ ಹಿಂದೆ ಮುಕ್ತಾಯಗೊಂಡಿದೆ. ಆದಾಗ್ಯೂ, ಎಎಸ್ಐ ಈ ಅವಧಿಯಲ್ಲಿ ಹಲವಾರು ವಿಸ್ತರಣೆಗಳನ್ನು ಕೋರಿದ್ದು, ವರದಿಯನ್ನು ಸಿದ್ಧಪಡಿಸುವಲ್ಲಿ ಅಗತ್ಯವಿರುವ ಸಂಕೀರ್ಣತೆಯನ್ನು ಉಲ್ಲೇಖಿಸಿದೆ. ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಈ ಹಿಂದೆ ನ. 18 ರಂದು ಜ್ಞಾನವಾಪಿ ಮಸೀದಿ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಎಎಸ್‌ಐಗೆ ಇನ್ನೂ 10 ದಿನಗಳ ಕಾಲಾವಕಾಶ ನೀಡಿದ ನಂತರ ಇತ್ತೀಚಿನ ವಿಸ್ತರಣೆ ವಿನಂತಿಯು ಬಂದಿದೆ. ವೈಜ್ಞಾನಿಕ ಸಮೀಕ್ಷಾ ವರದಿ ಸಲ್ಲಿಕೆಗೆ ವಿಸ್ತೃತ ಗಡುವು ಇಂದಿಗೆ ಮುಕ್ತಾಯವಾಗಲಿದೆ.

ದೇವಾಲಯದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ನಾಲ್ವರು ಮಹಿಳೆಯರು ಸಲ್ಲಿಸಿದ ಅರ್ಜಿಯ ನಂತರ ಜುಲೈ 21 ರಂದು ವಾರಣಾಸಿ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದಿಂದ ಸೀಲ್ ಆಗಿರುವ ವುಜುಖಾನಾ ಪ್ರದೇಶವನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ.

ಆ ಆದೇಶಕ್ಕೆ ಅನುಸಾರವಾಗಿ, ಎಎಸ್‌ಐ ಜು. 24 ರಂದು ನಾಲ್ಕೂವರೆ ಗಂಟೆಗಳ ಕಾಲ ಸಮೀಕ್ಷೆಯನ್ನು ನಡೆಸಿತು. ಆಮೇಲೆ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಗೆ (AIMC) ಅಲಹಾಬಾದ್ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶ ನೀಡಿತ್ತು. ಜು. 25 ರಂದು ಮಸೀದಿ ಸಮಿತಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ, ಅದು ಸಮೀಕ್ಷೆಗೆ ತಡೆಯಾಜ್ಞೆಯನ್ನು ವಿಸ್ತರಿಸಿತು. ಆಗಸ್ಟ್ 3 ರಂದು ಹೈಕೋರ್ಟ್ ತನ್ನ ತೀರ್ಪನ್ನು ನೀಡಿ, ಸಮೀಕ್ಷೆ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಿತು. ಹೈಕೋರ್ಟ್ ಆದೇಶದ ವಿರುದ್ಧ ಎಐಎಂಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಆಗಸ್ಟ್ 4 ರಂದು ಸಮೀಕ್ಷೆಗೆ ತಡೆ ನೀಡಲು ಕೋರ್ಟ್ ನಿರಾಕರಿಸಿತು.

ಆಗಸ್ಟ್ 3 ರಂದು ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡಿದ ನಂತರ ಮತ್ತು ಸಮೀಕ್ಷೆಗೆ ಚಾಲನೆ ನೀಡಿದ ನಂತರ ಆಗಸ್ಟ್ 4 ರಂದು ಬಿಗಿ ಭದ್ರತೆಯ ನಡುವೆ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಪುನರಾರಂಭವಾಯಿತು. ವಾರಣಾಸಿ ನ್ಯಾಯಾಲಯವು ಆರಂಭದಲ್ಲಿ ಜುಲೈ 21 ರಂದು ಸಮೀಕ್ಷೆಗೆ ಆದೇಶಿಸಿದ್ದು ಆಗಸ್ಟ್ 4 ರೊಳಗೆ ವರದಿಯನ್ನು ಸಲ್ಲಿಸುವಂತೆ ಕೇಳಿತ್ತು.

























































































































error: Content is protected !!
Scroll to Top