ಏಷ್ಯನ್ ಗೇಮ್ಸ್​ : ಭಾರತಕ್ಕೆ 12 ನೇ ಪದಕ – ಬೆಳ್ಳಿಗೆ ಮುತ್ತಿಕ್ಕಿದ ನೇಹಾ ಠಾಕೂರ್

ಹ್ಯಾಂಗ್‌ಝೌ : ಭಾರತದ ನೇಹಾ ಠಾಕೂರ್ ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಬಾಲಕಿಯರ ಡಿಂಗಿ ILCA-4 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಇದು ನೌಕಾಯಾನದಲ್ಲಿ ಭಾರತದ ಮೊದಲ ಪದಕ ಮತ್ತು ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ 12 ನೇ ಪದಕವಾಗಿದೆ. ಭೋಪಾಲ್‌ನ ನ್ಯಾಷನಲ್ ಸೈಲಿಂಗ್ ಸ್ಕೂಲ್‌ನಿಂದ ಹೊರಹೊಮ್ಮಿದ ನೇಹಾ, ಒಟ್ಟು 32 ಅಂಕಗಳೊಂದಿಗೆ ಮುಗಿಸುವ ಮೂಲಕ ತನ್ನ ಪರಾಕ್ರಮ ಪ್ರದರ್ಶಿಸಿದರು. 11 ರೇಸ್​ಗಳಲ್ಲಿ ಒಟ್ಟು 27 ಅಂಕ ಗಳಿಸಿ ಬೆಳ್ಳಿ ಪದಕ ತಮ್ಮದಾಗಿಸಿದರು.

ನೇಹಾ ಅವರಿಗಿಂತ ಕೇವಲ ಒಂದು ಅಂಕ ಕಡಿಮೆ ಗಳಿಸಿದ ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಥಾಯ್ಲೆಂಡ್‌ನ ನೊಪಾಸ್ಸೋರ್ನ್ ಖುನ್‌ಬೂಂಜಾನ್‌ ಚಿನ್ನದ ಪದಕ ವಿಜೇತರಾದರು. ನೌಕಾಯಾನದಲ್ಲಿ, ನಾವಿಕನು ಭಾಗವಹಿಸಿದ ಎಲ್ಲಾ ರೇಸ್‌ಗಳನ್ನು ಗಣನೆಗೆ ತೆಗೆದುಕೊಂಡು ಜಯಶಾಲಿಯನ್ನು ತೀರ್ಮಾನಿಸಲಾಗುತ್ತದೆ.

ಬಾಲಕಿಯರ ಡಿಂಗಿ ILCA-4 ವಿಭಾಗದಲ್ಲಿ 11 ಕಠಿಣ ರೇಸ್‌ಗಳು ಇದ್ದವು. ತೀವ್ರ ಪೈಪೋಟಿಯ ನಡುವೆಯೂ ನೇಹಾ ಪ್ರಾಬಲ್ಯ ಮೆರೆದರು, ಒಟ್ಟು 32 ಅಂಕಗಳನ್ನು ಕಲೆಹಾಕಿದರು. ಆದಾಗ್ಯೂ, ಇವರ ಪ್ರಯಾಣವು ಸಂಪೂರ್ಣವಾಗಿ ಸುಗಮವಾಗಿರಲಿಲ್ಲ. ಐದನೇ ರೇಸ್‌ನಲ್ಲಿ ಕೇವಲ ಐದು ಅಂಕಗಳನ್ನು ಗಳಿಸಿದರು. ಈ ಸ್ಕೋರ್ ಅನ್ನು ಕಡೆಗಣಿಸಿ ಒಟ್ಟು ಅಂಕಗಳಿಂದ ಕಳೆದಾಗ ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.

19ನೇ ಏಷ್ಯನ್ ಗೇಮ್ಸ್​ನ ಮೊದಲ ದಿನ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಶೂಟಿಂಗ್‌ನಲ್ಲಿ ಮಹಿಳಾ ತಂಡ ವಿಭಾಗದಲ್ಲಿ ಭಾರತ ಆ ಪದಕ ಗೆದ್ದಿತ್ತು. ಮೊದಲ ದಿನ 3 ಬೆಳ್ಳಿ ಹಾಗೂ 2 ಕಂಚು ಬಾಚಿಕೊಂಡಿತು. ಎರಡನೇ ದಿನವನ್ನು ಚಿನ್ನದ ಪದಕದೊಂದಿಗೆ ಆರಂಭಿಸಿದ ಭಾರತದ ಶೂಟರ್‌ಗಳು ವಿಶ್ವ ದಾಖಲೆಯನ್ನೂ ಮುರಿದಿದರು. ರೋಯಿಂಗ್‌ನಲ್ಲೂ ಭಾರತಕ್ಕೆ ಕಂಚಿನ ಪದಕ ಲಭಿಸಿತು. ಇಲ್ಲಿ ಪುರುಷರ ನಾಲ್ಕರ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ 6:10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಭಾರತ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧ ಫೈನಲ್​ನಲ್ಲಿ ಗೆಲ್ಲುವ ಮೂಲಕ ಚಿನ್ನ ಗೆದ್ದರು.







































error: Content is protected !!
Scroll to Top