ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 9ನೇ ರೋಜ್‌ಗಾರ್ ಮೇಳದಲ್ಲಿ ಭಾಗವಹಿಸಿದ್ದು, ಹೊಸದಾಗಿ ನೇಮಕಗೊಂಡ ಸುಮಾರು 51 ಸಾವಿರ ಜನರಿಗೆ ನೇಮಕಾತಿ ಪತ್ರಗಳನ್ನು ನೀಡಿದ್ದಾರೆ. ದೆಹಲಿಯ ರೈಸಿನಾ ರಸ್ತೆಯಲ್ಲಿರುವ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಿಸಿದ್ದಾರೆ.
ಕಳೆದ ಬಾರಿ ಆ. 28 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು ಮತ್ತು ಇದರಲ್ಲೂ 51 ಸಾವಿರ ಯುವಕರಿಗೆ ದೇಶದಲ್ಲಿ ಸರಕಾರಿ ಉದ್ಯೋಗಗಳಿಗಾಗಿ ನೇಮಕಾತಿ ಪತ್ರಗಳನ್ನು ನೀಡಲಾಗಿತ್ತು. ಈ ದಿನದಂದು, ಮುಖ್ಯವಾಗಿ ಗೃಹ ಸಚಿವಾಲಯದ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಹೊಸದಾಗಿ ನೇಮಕಗೊಂಡವರಿಗೆ ಸೇರ್ಪಡೆ ಪತ್ರಗಳನ್ನು ನೀಡಲಾಯಿತು. ಇದರ ಅಡಿಯಲ್ಲಿ, ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಎಸ್‌ಬಿ, ಅಸ್ಸಾಂ ರೈಫಲ್ಸ್, ಸಿಐಎಸ್‌ಎಫ್, ಐಟಿಬಿಪಿ, ಎನ್‌ಸಿಬಿ ಮತ್ತು ದೆಹಲಿ ಪೊಲೀಸ್‌ಗೆ ಯುವಕರನ್ನು ನೇಮಿಸಿಕೊಳ್ಳಲಾಯಿತು. 9 ಉದ್ಯೋಗ ಮೇಳದಲ್ಲಿ ಇಲ್ಲಿಯವರೆಗೆ 6 ಲಕ್ಷ ಮಂದಿಗೆ ಸರಕಾರಿ ನೇಮಕಾತಿ ಪತ್ರ ವಿತರಿಸಲಾಯಿತು.
ರೋಜ್‌ಗಾರ್ ಮೇಳವು ಯುವಕರನ್ನು ಸಬಲೀಕರಣಗೊಳಿಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಇದೊಂದು ನಮ್ಮ ಪ್ರಯತ್ನವಾಗಿದೆ. ಇಂದು ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ ಯುವಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.