ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರು ಅಥವಾ ತನಿಖಾಧಿಕಾರಿಯವರು ಕ್ರಿಮಿನಲ್ ಕೃತ್ಯಕ್ಕೆ ಅಂದರೆ ಅಪರಾಧಕ್ಕೆ ಸಂಬಂಧಪಟ್ಟ ವಿಚಾರಣೆಯ ಸಂದರ್ಭದಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ಅಥವಾ ವಾಹನವನ್ನು ಪ್ರಕರಣದ ತನಿಖೆಯು ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಮುಕ್ತಾಯಗೊಳ್ಳುವ ತನಕ, ಸಂದರ್ಭಕ್ಕೆ ಅನುಸಾರವಾಗಿ ನೇರವಾಗಿ ಅಥವಾ ಸಂಬಂಧಪಟ್ಟ ನ್ಯಾಯಾಲಯದ ಮುಖಾಂತರ ಸ್ವತ್ತಿನ ಅಭಿರಕ್ಷೆಗಾಗಿ ಕೆಲವು ನಿಬಂದನೆಗೊಳಪಡಿಸಿ ಸಂಬಂಧಪಟ್ಟ ವ್ಯಕ್ತಿಗಳ ತಾತ್ಕಾಲಿಕ ಸ್ವಾಧೀನತೆಗೆ ನೀಡಬೇಕಾಗುತ್ತದೆ.
ಇಂತಹ ಸಂದರ್ಭದಲ್ಲಿ ನ್ಯಾಯಾಲಯವು ಅಂತಹ ಸ್ವತ್ತಿನ ಅಭಿರಕ್ಷೆಗಾಗಿ ತಾನು ಸೂಕ್ತವೆಂದು ಭಾವಿಸುವ ಆದೇಶವನ್ನು ಮಾಡಬಹುದಾಗಿದೆ ಮತ್ತು ವಶಪಡಿಸಿಕೊಂಡ ಸ್ವತ್ತು ಶೀಘ್ರವಾಗಿ ಮತ್ತು ಸ್ವಾಭಾವಿಕ ಕ್ಷೀಣತೆಗೊಳಪಡುವಂತಹ ಸ್ವತ್ತು ಆಗಿರುವ ಸಂದರ್ಭದಲ್ಲಿ ನ್ಯಾಯಾಲಯವು ತಾನು ಅವಶ್ಯಕವೆಂದು ಭಾವಿಸುವಂತಹ ಕಾರಣಕ್ಕಾಗಿ ಸ್ವತ್ತನ್ನು ಮಾರಾಟ ಮಾಡಲು ಅಥವಾ ನಿಯಮಾನುಸಾರವಾಗಿ ವಿಲೇವಾರಿ ಮಾಡಲು ಸೂಕ್ತ ಆದೇಶವನ್ನು ಸಹ ಮಾಡಬಹುದಾಗಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ ಕಲಂ 451ರ ಪ್ರಕಾರ ಪೊಲೀಸ್ ತನಿಖಾಧಿಕಾರಿಯು ತನ್ನ ವರದಿಯೊಂದಿಗೆ ತಾನು ವಶಪಡಿಸಿಕೊಂಡ ಸ್ವತ್ತುಗಳ ವಿವರವನ್ನ ನ್ಯಾಯಾಲಯಕ್ಕೆ ಸಲ್ಲಿಸಿದಾಗ ಮತ್ತು ಆ ಸ್ವತ್ತನ್ನು ತನಿಖಾಧಿಕಾರಿಯು ನ್ಯಾಯಾಲಯಕ್ಕೆ ಹಾಜರುಪಡಿಸದೆ ಇರುವ ಸಂದರ್ಭದಲ್ಲಿ ಸ್ವತ್ತಿನ ಮಾಲಕನು ಅಥವಾ ಯಾರಿಂದ ವಶಪಡಿಸಿಕೊಂಡಿದ್ದಾರೆಯೋ ಅಂತಹ ವ್ಯಕ್ತಿಯು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದಾಗ ನ್ಯಾಯಾಲಯವು ಪೊಲೀಸರ ಅಥವಾ ತನಿಖಾಧಿಕಾರಿಯ ವಶದಲ್ಲಿರುವ ಸ್ವತ್ತನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಬಹುದಾಗಿದೆ ಮತ್ತು ಅದೇ ಪ್ರಕಾರ ಕ್ರಿಮಿನಲ್ ಪ್ರೊಸೀಜರ್ ಕೋಡ್ ಕಲಂ 451ರ ಪ್ರಕಾರ ನ್ಯಾಯಾಲಯವು ತಾನು ಹೊಂದಿರುವ ಅಧಿಕಾರವನ್ನು ಚಲಾಯಿಸಿ ಸ್ವತ್ತಿನ ವಿಲೇವಾರಿಗಾಗಿ ಸೂಕ್ತ ಆದೇಶವನ್ನು ಮಾಡಬಹುದಾಗಿದೆ.

ಒಂದು ವೇಳೆ ಸ್ವತ್ತಿನ ಮಾಲೀಕತ್ವದ ಬಗ್ಗೆ ಯಾವುದೇ ರೀತಿಯ ವರದಿಯು ನ್ಯಾಯಾಲಯಕ್ಕೆ ಸಲ್ಲಿಕೆಯಾಗದಿದ್ದಲ್ಲಿ ಮತ್ತು ಸ್ವತ್ತನ್ನು ತನ್ನ ವಶ ನೀಡಬೇಕೆಂದು ಯಾವೊಬ್ಬ ವ್ಯಕ್ತಿಯು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸದಿದ್ದಪಕ್ಷದಲ್ಲಿ ಅಂತಹ ಸ್ವತ್ತನ್ನು ನ್ಯಾಯಾಲಯವು ತನ್ನ ಅಭಿರಕ್ಷೆಯಲ್ಲಿ ಇಟ್ಟುಕೊಂಡು ಸಾರ್ವಜನಿಕರ ಅವಗಾಹನೆಗಾಗಿ ಸೂಕ್ತ ಪ್ರಕಟಣೆಯನ್ನು ಪ್ರಕಟಿಸಿ 6 ತಿಂಗಳ ಅವಧಿಯವರೆಗೆ ಸಂಬಂಧಪಟ್ಟ ವ್ಯಕ್ತಿಗೆ ಸ್ವತ್ತಿನ ಸ್ವಾಧೀನತೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗುತ್ತದೆ.
ಅಲ್ಲಿಯವರೆಗೂ ಯಾವುದೇ ವ್ಯಕ್ತಿ ನ್ಯಾಯಾಲಯವನ್ನು ಸಂಪರ್ಕಿಸದಿದ್ದಲ್ಲಿ ನ್ಯಾಯಾಲಯವು ಸ್ವತ್ತಿನ ವಿಲೇವಾರಿಗಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಪ್ರಕರಣದ ತನಿಖೆ ಅಥವಾ ಅಭಿಯೋಜನೆಯ ಕ್ರಮ ಇಲ್ಲದೇ ಇರುವಾಗ ಸ್ವತ್ತನ್ನು ಯಾವ ವ್ಯಕ್ತಿಯಿಂದ ವಶಪಡಿಸಿಕೊಳ್ಳಲಾಯಿತೋ ಅಂತಹ ವ್ಯಕ್ತಿಯ ವಶಕ್ಕೆ ಸ್ವತ್ತನ್ನು ಹಿಂತಿರುಗಿಸುವುದು ಸಾಮಾನ್ಯವಾಗಿ ಅನುಸರಿಸುವ ನಿಯಮವಾಗಿರುತ್ತದೆ.



























