ದೇಹದ ಎಲ್ಲಾ ಅಂಗಾಂಗಗಳಿಗೆ ವಿಶೇಷವಾಗಿ ಕಿಡ್ನಿ, ಹೃದಯ, ಯಕೃತ್ತಿಗೆ ಅತ್ಯಂತ ಒಳ್ಳೆಯ ವನಸ್ಪತಿ ಇದು. ಪುನರ್‌ನವಾ ದೇಹದಲ್ಲಿರುವ ವಿಷಕಾರಕ ಅಂಶವನ್ನು ಹೊರಹಾಕುವ ಉಪಯುಕ್ತ ಔಷಧಿ ಸಸ್ಯ. ಮಳೆಗಾಲದಲ್ಲಿ ಅತ್ಯೇಚ್ಛವಾಗಿ ಬೆಳೆಯುವುದು. ಇದರ ಬಗ್ಗೆ ತಿಳಿದುಕೊಳ್ಳೋಣ. ಕನ್ನಡದಲ್ಲಿ ಇದನ್ನು ಕೊಮ್ಮೆ ಗಿಡ ಎಂದು ಹೆಸರು.
ಪುನರ್‌ನವದ ಗುಣಗಳು
ಇದು ಬೇಗ ಜೀರ್ಣವಾಗುವಂತದ್ದು ಹಾಗೂ ಶುಷ್ಕ ಸ್ವಭಾವದ್ದು. ರುಚಿಯಲ್ಲಿ ಸಿಹಿ, ಕಹಿ ಹಾಗೂ ಕಷಾಯ ರಸ ಹೊಂದಿದೆ. ಸ್ವಭಾವದಲ್ಲಿ ಉಷ್ಣ, ವಾತ, ಪಿತ್ತ ಹಾಗೂ ಕಫ ದೋಷವನ್ನು ಕಡಿಮೆ ಮಾಡುತ್ತದೆ. ಉಪಯೋಗಿಸುವ ಅಂಗ – ಪಂಚಾಂಗ ಅಂದರೆ ಎಲ್ಲಾ ಭಾಗಗಳನ್ನು ಉಪಯೋಗಿಸಲಾಗುವುದು.
ಆರೋಗ್ಯ ಲಾಭಗಳು
ಮೂತ್ರಕೋಶದ ರೋಗಗಳಲ್ಲಿ ಬಹಳ ಉಪಯುಕ್ತ. ವಿಷಕಾರಕ ವಸ್ತುಗಳನ್ನು ಹೊರ ಹಾಕುತ್ತದೆ. ದೇಹದಲ್ಲಿರುವ ಊತವನ್ನು ಕಡಿಮೆ ಮಾಡುತ್ತದೆ. ನಮ್ಮ ಜಠರಾಗ್ನಿಯನ್ನು ಉತ್ತೇಜಿಸುತ್ತದೆ. ಬಿಪಿಯನ್ನು( ರಕ್ತದೊತ್ತಡವನ್ನು) ಕಡಿಮೆ ಮಾಡುತ್ತದೆ. ಸಕ್ಕರೆ ಕಾಯಿಲೆಯವರಿಗೆ ಒಳ್ಳೆಯದು. ಬೊಜ್ಜುತನವನ್ನು ಹೋಗಲಾಡಿಸುತ್ತದೆ. ರಕ್ತಹೀನತೆಯನ್ನು ಸರಿಪಡಿಸುತ್ತದೆ. ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಕಾಲಿನ ಊತವನ್ನು ಕಡಿಮೆ ಮಾಡುತ್ತದೆ. ಜಾಂಡಿಸ್, ಲಿವರ್ ಡ್ಯಾಮೇಜ್‌ಗಳಲ್ಲಿ ಉಪಯೋಗಿಸುತ್ತಾರೆ. ಮಲಬದ್ಧತೆಯನ್ನು ಗುಣಪಡಿಸುತ್ತದೆ. ಶ್ವಾಸಕೋಶದ ತೊಂದರೆಗಳಲ್ಲಿ ಉಪಯುಕ್ತ. ಸಂದು ನೋವು ಊತವನ್ನು ಕಡಿಮೆ ಮಾಡುತ್ತದೆ. ದೇಹದ ಧಾತುಗಳನ್ನು ಹೆಚ್ಚಿಸುತ್ತದೆ ಪೋಷಣೆಯನ್ನು ನೀಡುತ್ತದೆ. ಹೊಟ್ಟೆ ಹುಳುವಿನ ನಿವಾರಣೆಯಾಗುತ್ತದೆ. ಒಳ್ಳೆಯ ನಿದ್ದೆ ಬರಲು ಸಹಾಯಮಾಡುತ್ತದೆ.

ಹೇಗೆ ಉಪಯೋಗಿಸುವುದು
ಬೇರಿನ ಸ್ವರಸ-ಐದರಿಂದ ಹತ್ತು ಎಂಎಲ್
ಎಲೆಯ ಸ್ವರಸ-ಹತ್ತರಿಂದ ಇಪ್ಪತ್ತು ಎಂಎಲ್
ಬೀಜದ ಚೂರ್ಣ-ಒಂದರಿಂದ ಮೂರು ಗ್ರಾಂ
ಆಯುರ್ವೇದ ಔಷಧಗಳು- ಪುನರ್‌ನವಾದಿ ಕ್ವಾಥ, ಪುನರ್‌ನವಾದಿ ಮಂಡೂರ, ಪುನರ್‌ನವಾದಿ ಅರಿಷ್ಟ, ಪುನರ್‌ನವಾಸವ.



























