The world is full of opportunities ಎಂಬುದೇ ಈ ಉದ್ಯಮಿಯ ಮಂತ್ರ
ತನ್ನ ಏಳು ಜನ ಗೆಳೆಯರ ಜೊತೆ ಸೇರಿ 1976ರಲ್ಲಿ MICRO COMP ಎಂಬ ಡಿಜಿಟಲ್ ಕ್ಯಾಲ್ಕುಲೇಟರ್ ಮಾರಾಟ ಸಂಸ್ಥೆಯನ್ನು ಆರಂಭ ಮಾಡಿದ ಶಿವ ನಾಡಾರ್ ಇಂದು ಭಾರತದ ಮಹೋನ್ನತ ಉದ್ಯಮಿಗಳ ಸಾಲಿನಲ್ಲಿ ತಲೆ ಎತ್ತಿ ನಿಲ್ಲುವಂತಾದದ್ದು ಹೇಗೆ? ತನಗೆ ಎದುರಾದ ನೂರಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದದ್ದು ಹೇಗೆ? ಕಲಿಕೆಯಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಅವರು ಭಾರತದ ಒಂದು ಶ್ರೇಷ್ಠವಾದ ಯೂನಿವರ್ಸಿಟಿ ಸ್ಥಾಪನೆ ಮಾಡಿದ್ದು ಹೇಗೆ? ಶಿವ ನಾಡಾರ್ ಫೌಂಡೇಷನ್ ಸ್ಥಾಪನೆ ಮಾಡಿ ಅದರ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳ ಶಿಕ್ಷಣದ ನೆರವಿಗೆ ನಿಂತದ್ದು ಹೇಗೆ?
ಅವರ ಯಶೋಗಾಥೆ ಆರಂಭವಾದದ್ದು ತಮಿಳುನಾಡಿನ ಮೂಲೈ ಪೊಳಿ ಎಂಬ ಪುಟ್ಟ ಗ್ರಾಮದಿಂದ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನತದೃಷ್ಟ ಹುಡುಗ ಆತ. ಶಾಲೆಗೆ ಹೋಗುವಾಗ ಬೇರೆ ಬೇರೆ ಉದ್ಯೋಗಗಳನ್ನು ಮಾಡಿ ಶಾಲೆಯ ಖರ್ಚು ಹೊಂದಿಸಬೇಕಾಯಿತು. ಅವರೇ ಹೇಳುವಂತೆ ಕಲಿಕೆಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಆತ. ಕಲಿತದ್ದು ತಮಿಳು ಮಾಧ್ಯಮದಲ್ಲಿ. ಇಂಗ್ಲಿಷ್ ಆತನಿಗೆ ಅರ್ಥವೇ ಆಗಲಿಲ್ಲ. ಬಹಳ ಪರಿಶ್ರಮ ಪಟ್ಟು ಕೊಯಂಬತ್ತೂರು ಪಿ.ಎಸ್.ಜಿ ಕಾಲೇಜಿನಿಂದ ಇಂಜಿನಿಯರಿಂಗ್ (E&E) ಮುಗಿಸಿದರು.
ತನ್ನ ಕನಸು ಪೂರ್ತಿ ಮಾಡಲು ಉದ್ಯೋಗ ತೊರೆದರು
ಮನೆಯ ಆರ್ಥಿಕ ಸಮಸ್ಯೆಗಳಿಗೆ ಅವರು ಉದ್ಯೋಗ ಮಾಡಲೇ ಬೇಕಿತ್ತು. ಅದಕ್ಕಾಗಿ ವಾಲ್‌ಚಂದ್ ಗ್ರೂಪ್ ಕಂಪನಿಯ ಉದ್ಯೋಗ ಮಾಡಿದರು. ನಂತರ ಒಂದು ವರ್ಷ DCM (ಡೆಲ್ಲಿ ಕ್ಲಾತ್ ಆಂಡ್ ಜನರಲ್ ಮಿಲ್ಸ್) ಎಂಬ ಕಂಪನಿಯಲ್ಲಿ ಕ್ಯಾಲ್ಕುಲೇಟರ್ ಸಿದ್ಧಪಡಿಸುವ ತಂತ್ರಜ್ಞಾನ ಕಲಿತರು. ಒಂದು ದಿನ ಅದಕ್ಕೂ ರಾಜೀನಾಮೆ ಕೊಟ್ಟು ತನ್ನ ಏಳು ಜನ ಸ್ನೇಹಿತರನ್ನು ಸೇರಿಸಿಕೊಂಡು MICRO COMP ಎಂಬ ಕ್ಯಾಲ್ಕುಲೇಟರ್ ಸಿದ್ಧಪಡಿಸುವ ಸಣ್ಣ ಕಂಪನಿ ಆರಂಭ ಮಾಡಿದರು. ಕೆಲಸ ಯಾಕೋ ಬಿಟ್ಟದ್ದು? ಎಂದು ಅಮ್ಮ ಕೇಳಿದಾಗ ಶಿವ ಕೊಟ್ಟ ಉತ್ತರ ಮಾರ್ಮಿಕ ಆಗಿತ್ತು-ನಾನು ಯಾರದೋ ಕಂಪನಿಯಲ್ಲಿ ಸಂಬಳಕ್ಕೆ ದುಡಿದು ಅವರ ಕನಸುಗಳನ್ನು ಪೂರ್ತಿ ಮಾಡುವುದು ನಿಮಗೆ ಇಷ್ಟವಾ? ನಾನು ನನ್ನ ಕನಸುಗಳ ಕಂಪನಿ ಆರಂಭ ಮಾಡಬೇಕು.

1.87 ಲ. ರೂ. ಬಂಡವಾಳದಲ್ಲಿ ಅವರ ಕಂಪನಿ ಆರಂಭವಾಗಿತ್ತು
ಆಗ ಭಾರತದಲ್ಲಿ ಬಟನ್ ಕ್ಯಾಲ್ಕುಲೇಟರ್ ಮಾತ್ರ ಇತ್ತು. ವೇಗವಾಗಿ ಲೆಕ್ಕ ಮಾಡುವ ಮತ್ತು ಮೆಮೊರಿ ಇರುವ ಡಿಜಿಟಲ್ ಕ್ಯಾಲ್ಕುಲೇಟರ್ ಇರಲಿಲ್ಲ. ಆ ತಂತಜ್ಞಾನ ಅಳವಡಿಸಿಕೊಂಡ ಅವರ ಕಂಪನಿಯ ಡಿಜಿಟಲ್ ಕ್ಯಾಲ್ಕುಲೇಟರಗಳು ಭಾರಿ ಜನಪ್ರಿಯ ಆದವು. ತಮಿಳು ಮಾಧ್ಯಮದಲ್ಲಿ ಇಂಜಿನಿಯರಿಂಗ್ ಓದಿದ (ಆ ಸೌಲಭ್ಯ ಈಗಲೂ ತಮಿಳುನಾಡಿನಲ್ಲಿ ಇದೆ) ಶಿವ ನಾಡಾರ್ ಅವರು ಈಗ ಇಂಗ್ಲಿಷ್ ಕಲಿಯಲೇ ಬೇಕಾಯಿತು. ಆಗ ಅನೇಕ ವಿದೇಶದ ಕಂಪ್ಯೂಟರ್ ಕಂಪನಿಗಳು ಡೆಸ್ಕ್ ಟಾಪ್ ಕಂಪ್ಯೂಟರ್‌ಗಳನ್ನು ಭಾರತದಲ್ಲಿ ಮಾರ್ಕೆಟ್ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿತು. ಕೆಲವೇ ವರ್ಷಗಳಲ್ಲಿ ಕ್ಯಾಲ್ಕುಲೇಟರ್ ಯುಗ ಮುಗಿದು ಕಂಪ್ಯೂಟರ್ ಯುಗ ಆರಂಭ ಆಗಲಿದೆ ಎಂದು ಅವರಿಗೆ ಮನವರಿಕೆ ಆಯಿತು.
ಅವರ ಡ್ರೀಮ್ ಕಂಪನಿ HCLನ ಉದಯ

ಮೂರೇ ವರ್ಷಗಳಲ್ಲಿ ಅವರು ದೇಶದ ಮೊದಲ ದೇಸಿ ಕಂಪ್ಯೂಟರ್ ಸಿದ್ಧಪಡಿಸಿದರು. ಆಗ ಹುಟ್ಟಿಕೊಂಡದ್ದೇ ಅವರ ಡ್ರೀಮ್ ಕಂಪನಿ ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್ (HCL). ಶಿವ ನಾಡಾರ್ ಅವರಿಗೆ ದೇಶದ ನಾಡಿಮಿಡಿತವು ಚೆನ್ನಾಗಿ ಗೊತ್ತಿತ್ತು ಮತ್ತು ಅವರು ಅವರ ಕಾಲಕ್ಕಿಂತ ಮುಂದಿದ್ದರು. ಭಾರತದ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜುಗಳನ್ನು ಸುತ್ತಿ ಜೀನಿಯಸ್ ಆದ ಕಂಪ್ಯೂಟರ್ ಇಂಜಿನಿಯರ್ ಪದವೀಧರರನ್ನು ತನ್ನ ಕಂಪನಿಗೆ ಆಮಂತ್ರಿಸಿದರು. ಕಂಪ್ಯೂಟರ್‌ನಲ್ಲಿ ನಾವೀನ್ಯತೆ, ತಂತ್ರಜ್ಞಾನ ಮತ್ತು ಆಕರ್ಷಣೆಗಳನ್ನು ಧಾರೆ ಎರೆದರು. ಆರಂಭದಲ್ಲಿ ಹಾರ್ಡ್‌ವೇರ್ ಮಾತ್ರ ಡೆವಲಪ್ ಮಾಡುತ್ತಿದ್ದ ಕಂಪನಿ ಕೆಲವೇ ವರ್ಷಗಳಲ್ಲಿ ಪ್ರಸಿದ್ಧ IT ಕಂಪನಿಯಾಗಿ ರೂಪುಗೊಳ್ಳುವಲ್ಲಿ ಶಿವ ನಾಡಾರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಹಲವು ದೇಶಗಳನ್ನು ಸುತ್ತಿದ ಅವರು ವಿದೇಶದ ಮಾರ್ಕೆಟ್‌ಗಳಲ್ಲಿ ಭಾರತದ ಕಂಪ್ಯೂಟಋಗಳನ್ನು ಮಾರಾಟ ಮಾಡಿದರು.
ಈಗ HCL ಭಾರತದ ಅತ್ಯಂತ ದೊಡ್ಡ ಕಂಪ್ಯೂಟರ್ ಕಂಪನಿ
HCL ಬ್ರಾಂಡ್ ಕಂಪ್ಯೂಟರ್ ಹೊಂದಿರುವುದು ನನಗೆ ಹೆಮ್ಮೆಯ ಸಂಗತಿ. ಯಾಕೆಂದರೆ ಅದು ಭಾರತದಲ್ಲಿಯೇ ನಿರ್ಮಿತವಾದ ಭಾರತದ ಕಂಪ್ಯೂಟರ್ ಎಂದು ಕಾಲೇಜಿನ ಮಕ್ಕಳು ಹೇಳುವ ಜಾಹೀರಾತುಗಳು ಭಾರಿ ಇಂಪ್ಯಾಕ್ಟ್ ಮಾಡಿದವು. ಆ ಕಂಪನಿ ಕಾಲಕಾಲಕ್ಕೆ ಆಧುನಿಕ ಸಾಫ್ಟ್‌ವೇರ್ ಮತ್ತು ತಾಂತ್ರಿಕತೆಯನ್ನು ಒಳಗೊಂಡು ಅಪಡೇಟ್ ಆಗುತ್ತ ಹೋಯಿತು.
ಈ ಯೋಜನೆಗಳಿಂದ ಅವರ ಕಂಪನಿ ಭಾರತದ ಅತಿ ದೊಡ್ಡ IT ಕಂಪನಿಯಾಯಿತು. ಶಿವ ನಾಡಾರ್ ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಆದರು. ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 50ನೆಯ ಸ್ಥಾನ ಪಡೆದರು. ಇಂದವರ ಆಸ್ತಿಗಳ ನೆಟ್‌ವರ್ಥ್ 12,36,600 ಕೋಟಿಗೂ ಹೆಚ್ಚು.
45 ವರ್ಷಗಳ ಅವಧಿಯಲ್ಲಿ HCL ಕಂಪೆನಿಯ ಜನಪ್ರಿಯತೆಯ ಗ್ರಾಫ್ ಏರುಗತಿಯಲ್ಲಿಯೇ ಇದೆ.
ಬಿಯಾಂಡ್ ದ ಬಿಸಿನೆಸ್ ಚಿಂತನೆ

ಪರಿಶ್ರಮ, ಉತ್ಸಾಹ ಮತ್ತು ದೂರದರ್ಶಿತ್ವಗಳಿಂದ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಶಿವ ನಾಡಾರ್ 1994ರಲ್ಲಿ ತನ್ನ ‘ಬಿಯಾಂಡ್ ದ ಬಿಸಿನೆಸ್ ‘ (Beyond the business) ಚಿಂತನೆಯಿಂದ ಶಿವ ನಾಡಾರ್ ಫೌಂಡೇಷನ್ ಆರಂಭ ಮಾಡಿದರು. ತನ್ನ ಸಂಪತ್ತಿನ ಬಹು ದೊಡ್ಡ ಭಾಗವನ್ನು ಅವರು ಚಾರಿಟಿ ಉದ್ದೇಶಕ್ಕೆ ವಿನಿಯೋಗ ಮಾಡಿದರು.
ಮೊದಲು ಚೆನ್ನೈಯಲ್ಲಿ ತಂದೆಯ ಹೆಸರಿನಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಿದರು. ಮುಂದೆ ಉತ್ತರ ಪ್ರದೇಶದ ಐವತ್ತು ಜಿಲ್ಲೆಗಳಲ್ಲಿ ‘ವಿದ್ಯಾ ಜ್ಞಾನ್’ ಎಂಬ ಹೆಸರಿನ ಉಚಿತ ಪ್ರೈಮರಿ ಶಾಲೆಗಳನ್ನು ಸ್ಥಾಪನೆ ಮಾಡಿದರು. ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚಕ್ಕೆ ಹೆಗಲು ಕೊಟ್ಟರು. ನೂರಾರು ಶಾಲೆ, ಕಾಲೇಜುಗಳಿಗೆ ತಮ್ಮ ಕಂಪನಿಯ ಕಂಪ್ಯೂಟರ್‌ಗಳನ್ನು ಉಚಿತವಾಗಿ ಹಂಚಿದರು. ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ವಿದೇಶದ ಅಧ್ಯಯನಕ್ಕೆ ನೆರವಾದರು. ನೂರಾರು ಚಾರಿಟಿ ಶಾಲೆಗಳನ್ನು ಕಟ್ಟಿದರು. ಅವರು ಕಟ್ಟಿದ ಅಷ್ಟೂ ಕಾಲೇಜುಗಳು ಸೇರಿ ಮುಂದೆ ಶಿವ ನಾಡಾರ್ ಯೂನಿವರ್ಸಿಟಿಯು ನಿರ್ಮಾಣ ಆಯಿತು.
ಇದುವರೆಗೆ ಅವರು ತನ್ನ ಚಾರಿಟಿ ಫೌಂಡೇಷನ್ ಮೂಲಕ ಮಾಡಿದ ಸೇವಾಕಾರ್ಯಗಳ ಒಟ್ಟು ವೆಚ್ಚ 1.1 ಬಿಲಿಯನ್ ಡಾಲರಿಗಿಂತ ಹೆಚ್ಚು ಅಂದರೆ ನಮಗೆ ನಂಬಲು ಕಷ್ಟ ಆಗಬಹುದು. ಭಾರತದಲ್ಲಿ ಅಜೀಂ ಪ್ರೇಂಜಿ ಬಿಟ್ಟರೆ ಶಿಕ್ಷಣಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ವಿನಿಯೋಗ ಮಾಡಿದ ಬೇರೆ ಉದ್ಯಮಿ ನನಗೆ ಕಾಣುವುದಿಲ್ಲ. ಆದ್ದರಿಂದ ಅವರು ಗ್ರೇಟ್.
The world is full of opportunities ಎಂಬ ಮಂತ್ರವನ್ನು ತನ್ನ ಜೀವನದ ಉದ್ದಕ್ಕೂ ಪೋಷಣೆ ಮಾಡಿಕೊಂಡು ಬಂದ ಶಿವ ನಾಡಾರ್ ಅವರಿಗೆ 2008ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆಯಿತು.
ಇಂದು (ಜುಲೈ 14) ಅವರ 78ನೆಯ ಹುಟ್ಟಿದ ಹಬ್ಬ. ಕಂಪನಿಯ ಹೊಣೆಯನ್ನು ಮಗಳಿಗೆ ವಹಿಸಿ ಈಗ ಫೌಂಡೇಷನ್ ಕೆಲಸ ಮಾತ್ರ ಮಾಡುತ್ತಿರುವ ಶಿವ ನಾಡಾರ್ ಅವರಿಗೆ ಹ್ಯಾಪಿ ಬರ್ತ್ ಡೇ ಹೇಳೋಣ ಅಲ್ವಾ?
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.





































