ಕಾರ್ಕಳ : 2023ರ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏ. 6 ರಂದು ಪ್ರಾರಂಭಗೊಂಡು ಏ. 21 ಕ್ಕೆ ಫಲಿತಾಂಶ ಪ್ರಕಟಗೊಂಡಿದೆ. ಮೌಲ್ಯಮಾಪನ ಮುಗಿದು ಮೂರು ತಿಂಗಳಾದರೂ ಮೌಲ್ಯಮಾಪಕರಿಗೆ ಸಿಗಬೇಕಾದ ಮೌಲ್ಯಮಾಪನ ಸಂಭಾವನೆ ಇನ್ನೂ ಅವರ ಕೈ ಸೇರಿಲ್ಲ ಎಂಬುದು ಶೋಚನೀಯ.
ಪ್ರತಿ ಮೌಲ್ಯಮಾಪಕರು ಸರಾಸರಿ 200 ಪ್ರಶ್ನೆ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಒಂದು ಪತ್ರಿಕೆ ಮೌಲ್ಯಮಾಪನಕ್ಕೆ 34 ರೂ. ಮತ್ತು ದಿನಭತ್ಯೆ ಹಾಗೂ ಸಂಚಾರ ವೆಚ್ಚ ಸೇರಿ ದಿನಕ್ಕೆ ಒಬ್ಬ ಮೌಲ್ಯಮಾಪಕರಿಗೆ 800 ರೂ. ನೀಡಲಾಗುತ್ತದೆ. ಅಂದರೆ ಎಲ್ಲಾ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ, ದಿನಭತ್ಯೆ ಹಾಗೂ ಸಂಚಾರ ವೆಚ್ಚ ಸೇರಿ ಕೊನೆಗೆ 20 ರಿಂದ 30 ಸಾವಿರ ರೂ. ಒಬ್ಬ ಮೌಲ್ಯಮಾಪಕರಿಗೆ ದೊರೆಯುತ್ತದೆ.
ಕಳೆದ ಮೂರು ವರ್ಷಗಳಿಂದ ವಿಳಂಬ
ಕಳೆದ ಮೂರು ವರ್ಷಗಳ ಹಿಂದೆ ಮೌಲ್ಯಮಾಪನ ಮುಗಿದ ಕೂಡಲೇ ಸಂಭಾವನೆ ಚೆಕ್ ಮೂಲಕ ಮೌಲ್ಯಮಾಪಕರಿಗೆ ಸಿಗುತ್ತಿತ್ತು. ಆದರೆ ಆ ಬಳಿಕ ಸಂಭಾವನೆಯನ್ನು ಆನ್ಲೈನ್ ಮೂಲಕ ಪೇ ಮಾಡಲು ಪ್ರಾರಂಭಿಸಿದ್ದು, ಅಂದಿನಿಂದ ಸಂಭಾವನೆ ವಿಳಂಬವಾಗಿ ಸಿಗುತ್ತಿದೆ ಎನ್ನುತ್ತಾರೆ ಪಿಯುಸಿ ಉಪನ್ಯಾಸಕರು.

ತಕ್ಷಣ ಕ್ರಮ
ದುಡಿಮೆಯ ಸಂಭಾವನೆಯನ್ನು ನೀಡುವಲ್ಲಿ ಇಷ್ಟೊಂದು ವಿಳಂಬ ಒಳಿತಲ್ಲ. ಮೌಲ್ಯಮಾಪಕರಿಗೆ ದೊರೆಯಬೇಕಾದ ಮೌಲ್ಯಮಾಪನ ಸಂಭಾವನೆ ಸರಿಯಾದ ಸಮಯಕ್ಕೆ ಅವರಿಗೆ ದೊರೆಯುವಂತೆ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖಾ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು.







































