ಒಂದು ಜಿಲ್ಲೆ, ಒಂದು ಕ್ರೀಡೆ ಯೋಜನೆ ಜಾರಿಗೆ ಚಿಂತನೆ – ಸಚಿವ ಬಿ. ನಾಗೇಂದ್ರ

ಬೆಂಗಳೂರು : ರಾಜ್ಯದಲ್ಲಿ ವಿವಿಧೆಡೆ ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಕ್ರೀಡೆಗಳನ್ನು ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಒಂದು ಜಿಲ್ಲೆ ಒಂದು ಕ್ರೀಡೆ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದ್ದು, ಶೀಘ್ರ ಜಾರಿಗೊಳಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದರು.

ಅವರು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ಒಂದೊಂದು ಪ್ರದೇಶದಲ್ಲಿ ಒಂದೊಂದು ಕ್ರೀಡೆಗಳು ಹೆಸರುವಾಸಿ. ಆ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೋಬಳಿ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಸನ್ನದ್ಧಗೊಳಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲಿಯೇ ಅತ್ಯುತ್ತಮವಾದ ಬಜೆಟ್ ಮಂಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಸಿಎಂ ಅವರು ಒದಗಿಸಿದ್ದು, ಈ ಅನುದಾನದ ಸದ್ಭಳಕೆ ಮಾಡಿಕೊಂಡು ಸಮಗ್ರ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಲಾಗುವುದು ಎಂದರು. ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕೆ 2013ರಿಂದ ಇಲ್ಲಿಯವರೆಗೆ ಸಾವಿರಾರು ಕೋಟಿ ರೂ. ಗಳು ಖರ್ಚು ಮಾಡಲಾಗಿದ್ದು, ಸರಕಾರದ ಪ್ರಯೋಜನ ಪಡೆದುಕೊಂಡಿರುವ ಪರಿಶಿಷ್ಟ ಪಂಗಡದ ಫಲಾನುಭವಿಗಳ ಜೀವನಮಟ್ಟದಲ್ಲಿ ಸುಧಾರಣೆಯಾಗಿದೆಯೇ ಎಂಬುದರ ಕುರಿತು ಇಲಾಖೆಯಿಂದ ಮೌಲ್ಯಮಾಪನ ನಡೆಸಲಾಗುವುದು ಎಂದು ಹೇಳಿದರು.

ಪರಿಶಿಷ್ಟ ಪಂಗಡಗಳ ಜನಾಂಗದಲ್ಲಿ ಸೋಲಿಗ ಸಮುದಾಯ ಒಳಗೊಂಡ ಜೇನುಕುರುಬ, ಕಾಡುಕುರುಬ, ಕೊರಗ, ಇರುಳಿಗ, ಬೆಟ್ಟಕುರುಬ ಇತ್ಯಾದಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ 50 ಕೋಟಿ ಮೀಸಲಿಡಲಾಗುತ್ತಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ 11 ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯನ್ನು 6 ತಿಂಗಳ ಬದಲು 12 ತಿಂಗಳಿಗೆ ವಿಸ್ತರಿಸಿ 50 ಕೋಟಿ ರೂ. ಗಳ ಮೀಸಲಿಡಲಾಗುತ್ತಿದೆ ಎಂದರು.















































































error: Content is protected !!
Scroll to Top