ಅಡ್ಜೆಸ್ಟ್‌ಮೆಂಟ್ ಸಾಬೀತಾದರೆ ರಾಜಕೀಯ ನಿವೃತ್ತಿ : ಯತ್ನಾಳ್‌ಗೆ ಸಿದ್ದರಾಮಯ್ಯ ಸವಾಲು

ಬೆಂಗಳೂರು : ನಾನು ರಾಜಕೀಯದಲ್ಲಿ ಅಡ್ಜೆಸ್ಟ್ ಮೆಂಟ್ ಮಾಡಿರುವುದು ಸಾಬೀತಾದರೆ ರಾಜಕೀಯವಾಗಿ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸವಾಲು ಹಾಕಿದರು. ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಹೊಂದಾಣಿಕೆ ರಾಜಕಾರಣದ ಆರೋಪ ಮಾಡಿದ ಯತ್ನಾಳ್‌ಗೆ ಅವರು ತಿರುಗೇಟು ನೀಡಿದರು.

ಐದು ಗ್ಯಾರಂಟಿ ಕುರಿತಾಗಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮಾತಿಗೆ ಬೆಂಬಲ ಸೂಚಿಸಿದ ಯತ್ನಾಳ್‌ಗೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ, ಯತ್ನಾಳ್ ಅವರೇ ನೀವು ತಿಂಗಳಿಗೆ 100, 110 ಯೂನಿಟ್ ವಿದ್ಯುತ್ ಸರಾಸರಿ ಬಳಸುತ್ತಿದ್ದೀರಿ ಅಂದುಕೊಳ್ಳಿ, ಒಂದು ವರ್ಷದಿಂದ ಬಳಸ್ತಿದ್ರೆ ಸರಾಸರಿ ಅಷ್ಟೇ ಬರುತ್ತೆ. ಹಾಗಾಗಿ ನಿಮಗೆ 200 ಯೂನಿಟ್ ವಿದ್ಯುತ್ ಕೊಡೋ ಅಗತ್ಯ ಇದೆಯಾ? ಎಂದು ಪ್ರಶ್ನಿಸಿದರು.

ನೀವು ಪದೇ ಪದೇ ಮಾತಾಡಿದ್ರೆ ಸಂಸದೀಯ ಪಟು ಆಗಲ್ಲ, ನಿಮ್ಮನ್ನು ವಿಪಕ್ಷ ನಾಯಕನಾಗಿಯೂ ಮಾಡಲ್ಲ.‌ ನನಗೆ ಇರುವ ಮಾಹಿತಿ ಪ್ರಕಾರ ನಿಮ್ಮನ್ನು ವಿಪಕ್ಷ ನಾಯಕ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಯತ್ನಾಳ್ ಅವರ ಕಾಲೆಳೆದರು. ನೀವು ಪದೇ ಪದೇ ಹೇಳ್ತಿದ್ದೀರಿ ಅಂದರೆ ನಾನೇ ವಿಪಕ್ಷ ನಾಯಕ ಆಗೋದು ಎಂದು ಯತ್ನಾಳ್ ತಿರುಗೇಟು ‌ನೀಡಿದರು.

ಇದಕ್ಕೆ, ‌ನನಗಿರುವ ಮಾಹಿತಿ ಪ್ರಕಾರ ಯತ್ನಾಳ್ ವಿರೋಧ ಪಕ್ಷದ ನಾಯಕ ಆಗುವುದಿಲ್ಲ. ಆರಗ ಜ್ಞಾನೇಂದ್ರ ಆಕಾಂಕ್ಷಿ ಅಲ್ಲ.‌ ಆದರೆ ಅಶ್ವತ್ಥ ನಾರಾಯಣ, ಬಸವರಾಜ ಬೊಮ್ಮಾಯಿ ಆಕಾಂಕ್ಷಿಗಳಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ‌ಯತ್ನಾಳ್, ನೀವೆಷ್ಟೇ ಬೆಂಕಿ‌ ಹಚ್ಚಿದರೂ ಹಚ್ಕೊಳ್ಳಲ್ಲ ಅದು. ನೀವು ನನಗೆ ಪದೇ ಪದೇ ವಿಪಕ್ಷ ನಾಯಕ ಆಗಲ್ಲ ಅಂತಿದ್ರೆ ನೀವು ಯಾರ ಜತೆಗೋ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿದೀರ ಅಂತಾಯ್ತು ಎಂದರು.

ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ಯಾರ ಜತೆಗೂ ನನ್ನ ಜೀವನದಲ್ಲಿ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ.‌ ಯಾರ ಜತೆಗಾದರೂ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿರೋದನ್ನು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.













































































error: Content is protected !!
Scroll to Top