ದೆಹಲಿ : ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಎದ್ದಿದ್ದ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೆರೆ ಎಳೆದಿದೆ. ಚುನಾವಣಾ ಆಯೋಗದ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಳ್ಳಿಹಾಕಿದ ನ್ಯಾಯಪೀಠ, SIR ಕ್ರಮವು ಕಾನೂನುಬದ್ಧವಾಗಿದ್ದು, ಇದು ಸ್ವಚ್ಛ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಹಕಾರಿಯಾಗುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ಚುನಾವಣಾ ಆಯೋಗಕ್ಕೆ ಈ ರೀತಿಯ SIR ನಡೆಸುವ ಸಂಪೂರ್ಣ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.
ಚುನಾವಣಾ ಆಯೋಗ ತನ್ನ ಅಧಿಕಾರ ವ್ಯಾಪ್ತಿ ಮೀರಿಲ್ಲ. ಬಿಹಾರ ಮತದಾರರ ಪಟ್ಟಿಯ SIR ಪ್ರಕ್ರಿಯೆ ಜನಪ್ರತಿನಿಧಿತ್ವ ಕಾಯ್ದೆ (RP Act) ಅಥವಾ ಸಂವಿಧಾನದ ಯಾವುದೇ ವಿಧಿಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿದೆ.

ತೀರ್ಪಿನಲ್ಲಿ, “ಮತದಾರರ ಪಟ್ಟಿಯ ಶುದ್ಧತೆ ಕಾಪಾಡುವುದು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಹೆಸರುಗಳನ್ನು ತೆಗೆದುಹಾಕುವ ಹಂತ ಹಂತದ ವಿಧಾನ, ಆಕ್ಷೇಪಣೆ ಸಲ್ಲಿಸಲು ಅವಕಾಶ ಹಾಗೂ ಇತರ ಭದ್ರತಾ ಕ್ರಮಗಳು ಈ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಏಕಪಕ್ಷೀಯವಲ್ಲದಂತಾಗಿಸುತ್ತವೆ ಎಂದು ಉಲ್ಲೇಖಿಸಿದೆ.
ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ SIR ಪ್ರಕ್ರಿಯೆಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು.
























