ಆರೋಗ್ಯ ಧಾರ : ತಣ್ಣೀರು ಹಾಗು ಬಿಸಿನೀರಿನ ಲಾಭಗಳು

ನೀರನ್ನು ಜೀವಜಲವೆಂದು ಕರೆಯುತ್ತಾರೆ. ಜೀವಿಸಲು ಅತ್ಯಗತ್ಯವಾದದ್ದು ಈ ನೀರು. ಆಯುರ್ವೇದದಲ್ಲಿ ನೀರಿನ ಗುಣ ಮಾತ್ರವಲ್ಲದೆ ಬಿಸಿ ನೀರಿನ ಬಗ್ಗೆ ಹಾಗೂ ತಣ್ಣೀರು ಅಂದರೆ ಸಾಮಾನ್ಯ ನೀರಿನ ಗುಣಗಳ ಬಗ್ಗೆ ವಿವರಿಸಿದ್ದಾರೆ. ನೀರಿನಿಂದ ನಮ್ಮ ದೇಹದ ಮೇಲೆ ಆಗುವ ಪರಿಣಾಮವನ್ನು ತಿಳಿಸಿದ್ದಾರೆ. ಇದರ ಬಗ್ಗೆ ತಿಳಿದುಕೊಳ್ಳೋಣ.

ಸಾಮಾನ್ಯ ನೀರಿನ ಸೇವನೆಯಿಂದ ಲಾಭಗಳು :

  • ಸುಸ್ತು, ತಲೆ ಸುತ್ತನ್ನು ದೂರ ಮಾಡುತ್ತದೆ.
  • ಪಿತ್ತ ಲಕ್ಷಣಗಳಿದ್ದರೆ ಅಂದರೆ ಉರಿ, ಅಧಿಕ ಬೆವರು, ಬಾಯಾರಿಕೆ ಇತರ ಪಿತ್ತ ಲಕ್ಷಣವನ್ನು ಕಡಿಮೆ ಮಾಡುತ್ತದೆ.
  • ರಕ್ತ ಶುದ್ಧಿಯನ್ನು ಮಾಡುತ್ತದೆ. ಮೊಡವೆ, ಕಪ್ಪು ಕಲೆಯನ್ನು ಕಡಿಮೆ ಮಾಡುತ್ತದೆ.
  • ವಿಷಕರ ಅಂಶವನ್ನು ಹೊರಹಾಕುತ್ತದೆ.

ಬಿಸಿ ನೀರಿನ ಸೇವನೆಯಿಂದ ಲಾಭಗಳು :

  • ದೀಪನ- ಅಂದರೆ ನಮ್ಮ ಜಠರಾಗ್ನಿಯನ್ನು ಪ್ರಜ್ವಲಿಸುತ್ತದೆ.
  • ಪಾಚನ- ಅಂದರೆ ಆಹಾರವನ್ನು ಜೀರ್ಣಸಲು ಸಹಾಯ ಮಾಡುತ್ತದೆ.
  • ಕಂಠ್ಯ -ಅಂದರೆ ಗಂಟಲಿಗೆ ಒಳ್ಳೆಯದು. ಗಂಟಲು ನೋವು, ಇನ್ಫೆಕ್ಷನ್ ಅನ್ನು ದೂರ ಮಾಡುತ್ತದೆ. ಸ್ವರ ಶುದ್ದಿ ಮಾಡುತ್ತದೆ.
  • ಲಘು- ಬೇಗ ಜೀರ್ಣವಾಗುತ್ತದೆ.
  • ಬಿಸಿನೀರು ಕುಡಿಯುವುದರಿಂದ ಸುಲಭವಾಗಿ ಮೂತ್ರ ವಿಸರ್ಜನೆಯಾಗುತ್ತದೆ.
  • ಬಿಕ್ಕಳಿಕೆಯನ್ನು ಕಡಿಮೆ ಮಾಡುತ್ತದೆ.
  • ಹೊಟ್ಟೆ ಒಳಗಿನ ಗ್ಯಾಸ್ ಅನ್ನು ಕಡಿಮೆ ಮಾಡುತ್ತದೆ.
  • ವಾತ ಹಾಗೂ ಕಫ ದೋಷವನ್ನು ಕಮ್ಮಿ ಮಾಡುತ್ತದೆ. ಕೆಮ್ಮು, ನೆಗಡಿ, ಕಫವನ್ನು ಕರಗಿಸುತ್ತದೆ.
  • ನವ ಜ್ವರದಲ್ಲಿ ಇದರ ಉಪಯೋಗ ಬಹಳ ಪರಿಣಾಮಕಾರಿ .
  • ಪಂಚಕರ್ಮದ ನಂತರ ಬಿಸಿ ನೀರಿನ ಸೇವನೆ ಒಳ್ಳೆಯದು.

ನೀರನ್ನು ಬಿಸಿ ಮಾಡುವುದು ಹೇಗೆ?
ಆಯುರ್ವೇದದಲ್ಲಿ ನಾಲ್ಕು ಪ್ರಕಾರಗಳನ್ನು ವಿವರಿಸಿದ್ದಾರೆ,

  1. ಅಷ್ಟಮಾಂಶಶೇಷ ಅಂದರೆ ಎಂಟನೇ ಒಂದು ಭಾಗ ಬರುವವರೆಗೆ ಕುದಿಸುವುದು. ಎಂಟು ಗ್ಲಾಸ್ ನೀರನ್ನು ಕುದಿಸಿದರೆ ಒಂದು ಗ್ಲಾಸ್ ಬರುವವರೆಗೆ ಕುದಿಸುವುದು.
  2. ಚತುರ್ತಾಂಶ ಶೇಷ- ಅಂದರೆ ಕಾಲು ಭಾಗ ಬರುವವರೆಗೂ ಕುದಿಸುವುದು ಒಂದು ಲೋಟ ನೀರು ಬಿಸಿ ಮಾಡಿದರೆ ಕಾಲು ಗ್ಲಾಸ್ ಆಗುವವರೆಗೆ ಬಿಸಿ ಮಾಡುವುದು.
  3. ಅರ್ಧಾಂಶ ಶೇಷ- ಒಂದು ಗ್ಲಾಸ್ ನೀರು ಅರ್ಧ ಗ್ಲಾಸ್ ಬರುವವರೆಗೆ ಕುದಿಸುವುದು.
  4. ಇನ್ನೊಂದು ಪ್ರಕಾರದಲ್ಲಿ ಕುದಿ ಬಂದ ತಕ್ಷಣ ನೀರನ್ನು ಬೆಂಕಿಯಿಂದ ಕೆಳಗಿಳಿಸುವುದು.

ಹೀಗೆ ಬಿಸಿ ಮಾಡಿದ ನೀರನ್ನು ಬಿಸಿ ಇರುವಾಗಲೇ ಅಥವಾ ಸ್ವಲ್ಪ ಬಿಸಿ ಇರುವಾಗ ಕುಡಿದರೆ ಒಳ್ಳೆಯದು. ಬಿಸಿ ಮಾಡಿದ ನೀರನ್ನು ಹನ್ನೆರಡು ಗಂಟೆಯೊಳಗೆ ಕುಡಿದರೆ ಒಳ್ಳೆಯದು. ಅವಶ್ಯಕತೆ ಇದ್ದರೆ ನೀರು ಬಿಸಿ ಮಾಡುವಾಗ ಕರಿಮೆಣಸು ಅಥವಾ ಲವಂಗ ಹಾಕಬಹುದು. ಈ ನಾಲ್ಕು ಪ್ರಕಾರಗಳಲ್ಲಿ ಅಷ್ಟಮಾಂಶ ಶೇಷ ಅಂದರೆ ಎಂಟನೇ ಒಂದು ಭಾಗ ಬರುವವರೆಗೆ ಕುದಿಸಿದ ನೀರು ಒಳ್ಳೆಯದು.
ವಾತ ಹಾಗೂ ಕಫ ಲಕ್ಷಣಗಳು ಇರುವಾಗ ಬಿಸಿ ನೀರನ್ನು ಸೇವಿಸಿ. ಪಿತ್ತ ಲಕ್ಷಣಗಳು ಇರುವಾಗ ಸಾಮಾನ್ಯ ನೀರನ್ನು ಸೇವಿಸಿ.

✒️ ಡಾ. ಹರ್ಷಾ ಕಾಮತ್





























































































































error: Content is protected !!
Scroll to Top