ಅನ್ನಭಾಗ್ಯ ಅಕ್ಕಿ ಹಣ ವರ್ಗಾವಣೆ ಜಟಿಲ ಸಮಸ್ಯೆ

ಪಡಿತರ ಕಾರ್ಡಿನಲ್ಲಿ ಇಲ್ಲ ಬ್ಯಾಂಕ್‌ ಖಾತೆ ಸಂಖ್ಯೆ

ಬೆಂಗಳೂರು: ಅನ್ನಭಾಗ್ಯದಡಿ 5 ಕೆಜಿ ಅಕ್ಕಿ ಹೆಚ್ಚುವರಿಯಾಗಿ ನೀಡಲು ಅಕ್ಕಿ ಸಿಗದಿರುವ ಹಿನ್ನೆಲೆಯಲ್ಲಿ ಸರಕಾರ ಇದರ ಬದಲಾಗಿ ಹಣ ಕೊಡಲು ನಿರ್ಧರಿಸಿದೆ. ಆದರೆ ಹಣ ಹೇಗೆ ಕೊಡುವುದು ಎಂಬ ಚಿಂತೆ ಅಧಿಕಾರಿಗಳಿಗೆ ಶುರುವಾಗಿದೆ. ಸಂಪುಟದ ನಿರ್ಧಾರದಂತೆ 5 ಕೆಜಿ ಅಕ್ಕಿಯ ಬದಲು 170 ರೂ. ಫಲಾನುಭವಿಗಳಿಗೆ ಕೊಡಬೇಕು. ಒಂದು ಮನೆಯಲ್ಲಿ ನಾಲ್ಕು ಮಂದಿ ಇದ್ದರೆ 680 ರೂ. ಫಲಾನುಭವಿಗಳಿಗೆ ಪ್ರತಿ ತಿಂಗಳು ವರ್ಗಾವಣೆಯಾಗಬೇಕು. ಜುಲೈ 1ರಿಂದಲೇ ಹಣ ನೀಡಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವುದು ಹೇಗೆ ಎಂಬ ಸಮಸ್ಯೆ ಎದುರಾಗಿದೆ.
ಬಿಪಿಎಲ್ ಕಾರ್ಡ್‌ನಲ್ಲಿ ಕಾರ್ಡುದಾರರ ಹೆಸರು, ಕುಟುಂಬದಲ್ಲಿರುವ ಫಲಾನುಭವಿಗಳ ಹೆಸರು, ಆಧಾರ್ ಸಂಖ್ಯೆ, ವಿಳಾಸ ಮತ್ತು ಇತರ ವಿವರಗಳಿವೆ. ಆದರೆ ಬ್ಯಾಂಕ್ ಅಥವಾ ಪ್ಯಾನ್ ಕಾರ್ಡ್ ವಿವರಗಳಿಲ್ಲ. ಇಲಾಖೆಯಲ್ಲೂ ಈ ಮಾಹಿತಿ ಇಲ್ಲ. ಇದರಿಂದ ಸಮಸ್ಯೆಯಾಗಿದೆ. ಈ ಕುರಿತಾಗಿ ಸರಕರವೂ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ.
ಸರಕಾರ ಗೃಹಜ್ಯೋತಿ ಅಥವಾ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಂತೆ ಅನ್ನಭಾಗ್ಯಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಪ್ರಾರಂಭಿಸಿಲ್ಲ ಅಥವಾ ಯಾವುದೇ ಅಪ್ಲಿಕೇಶನ್ ಅಭಿವೃದ್ಧಿಪಡಿಸಿಲ್ಲ. ಬಿಪಿಎಲ್ ಕಾರ್ಡ್‌ಗಳು ಮತ್ತು ಖಾತೆ ಸಂಖ್ಯೆಗಳನ್ನು ಲಿಂಕ್ ಮಾಡುವುದು ದೊಡ್ಡ ಕೆಲಸವಾಗಿರುವುದರಿಂದ ಜುಲೈ ತಿಂಗಳಲ್ಲೇ ಫಲಾನುಭವಿಗಳೀಗೆ ಹಣ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಕೇಂದ್ರ ಸರಕಾರದ ಹಲವು ಸ್ಕೀಂನ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಇದಕ್ಕಾಗಿಯೇ ಕೇಂದ್ರ ಸರಕಾರ ಜನಧನ್‌ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಇಲ್ಲದವರಿಗೂ ಖಾತೆ ಮಾಡಿಸಿದೆ. ಈ ಡೇಟಾ ಪಡೆದುಕೊಂಡು ಫಲಾನುಭವಿಗಳನ್ನು ಗುರುತಿಸಿ ಹಣ ಜಮೆ ಮಾಡುವ ಮಾರ್ಗವೊಂದಿದೆ. ಆದರೆ ಇದು ಅಂತರ್‌ ಇಲಾಖಾ ವಿಚಾರವಾಗಿರುವುದರಿಂದ ಬೇರೆ ಬೇರೆ ಇಲಾಖೆಗಳ ಜತೆ ಸಮನ್ವಯ ಸಾಧಿಸುವ ಅಗತ್ಯವಿರುವುದರಿಂದ ವಿಳಂಬವಾಗುವ ಸಾಧ್ಯತೆಯಿದೆ.
ಇದಲ್ಲದಿದ್ದರೆ ಗೃಹಲಕ್ಷ್ಮೀ ಯೋಜನೆಯ ಡೇಟಾ ಬಳಸಿ ಮಾಡುವ ಆಯ್ಕೆಯಿದೆ. ಅದರೆ ಇದರ ಪ್ರಕ್ರಿಯೆ ಈಗಷ್ಟೇ ಪ್ರಾರಂಭವಾಗಿರುವುದರಿಂದ ಇದು ಕೂಡ ತಕ್ಷಣಕ್ಕೆ ಲಭ್ಯವಾಗುದು ಕಷ್ಟ.





























































































































error: Content is protected !!
Scroll to Top