ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸುವಾಗ ನಡೆದ ಘಟನೆ
ಉಡುಪಿ : ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಗುರುವಾರ ಭಾರಿ ಅಪಾಯದಿಂದ ಸ್ವಲ್ಪದರಲ್ಲೇ ಪಾರಾದರು. ಹಾಲಾಡಿ ಸಮೀಪ ಗಾಳಿಮಳೆಗೆ ಮರ ಉರುಳಿ ರಸ್ತೆಗೆ ಬಿದ್ದಿತ್ತು. ಆಗ ಆ ದಾರಿಯಾಗಿ ಬಂದ ಶಾಸಕರು ಮರ ತೆರವುಗೊಳಿಸಲು ಸ್ಥಳೀಯರ ಜತೆ ಕೈ ಜೋಡಿಸಿದರು. ಇದೇ ವೇಳೆ ಪಕ್ಕದಲ್ಲಿದ್ದ ಇನ್ನೊಂದು ಮರ ಉರುಳಿ ಶಾಸಕರಿದ್ದ ಸ್ಥಳಕ್ಕೆ ಬಿದ್ದಿದೆ. ಮರ ಉರುಳುತ್ತಿರುವುದನ್ನು ಕೊನೇ ಕ್ಷಣದಲ್ಲಿ ನೋಡಿದ ಶಾಸಕರು ಹಾಗೂ ಇತರರು ಓಡಿ ಬಚಾವಾದರು.
ಮರ ಉರುಳುವ ಸದ್ದಿಗೆ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಅವರ ಜತೆಗಿದ್ದವರು ಸ್ಥಳದಿಂದ ಓಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತರಂತೆ ತಮ್ಮ ಜತೆಗಿದ್ದವರೊಂದಿಗೆ ಮರವನ್ನು ರಸ್ತೆಯಿಂದ ಪೂರ್ತಿ ತೆರವುಗೊಳಿಸಿದ ಬಳಿಕವೇ ಗಂಟಿಹೊಳೆ ಪ್ರಯಾಣ ಮುಂದುವರಿಸಿದರು. ಈ ರಸ್ತೆಯುದ್ದಕ್ಕೂ ಅಕೇಶಿಯಾ ಮರಗಳಿದ್ದು, ಕೆಲವು ಹಳೆ ಮರಗಳು ಬುಡ ಸಡಿಲಗೊಂಡು ಮಳೆಗಾಲದಲ್ಲಿ ರಸ್ತೆ ಉರುಳುತ್ತಿವೆ.






























































