ಕಾನೂನು ಕಣಜ – ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯು ಹೊಂದಿರುವ ಕಾನೂನು ಬದ್ದ ಹಕ್ಕುಗಳು

1.    ಯಾವುದೇ ಒಂದು ಕ್ರಿಮಿನಲ್ ಅಪರಾಧದಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಪೋಲಿಸರು ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಿದಾಗ ತಾನು ನಿರಪರಾಧಿ ಎಂಬುವುದನ್ನು ಸಾಬೀತುಪಡಿಸುವ ಉದ್ದೇಶಕ್ಕಾಗಿ ಅಥವಾ ತನ್ನ ವಿರುದ್ದ ಯಾವನೇ ವ್ಯಕ್ತಿ ಅಪರಾಧ ಮಾಡಿದ್ದಾನೆ ಎಂಬುವುದನ್ನು ಸಾಬೀತು ಪಡಿಸುವ ಸಾಕ್ಷ್ಯಕ್ಕಾಗಿ ತನ್ನ ಶರೀರದ ವೈದ್ಯಕೀಯ  ಪರೀಕ್ಷೆಯು ಅಗತ್ಯವಿದ್ದಲ್ಲಿ ಅಥವಾ ತಾನು ಪೋಲಿಸರಿಂದ ಬಂಧಿಸಲ್ಪಟ್ಟ ಸಂದರ್ಭದಲ್ಲಿ ಪೋಲೀಸರು ತನ್ನ ವಿರುದ್ದ ದೈಹಿಕ ಹಿಂಸೆ, ಕಿರುಕುಳ ಹಲ್ಲೆ ಅಥವಾ ದೌರ್ಜನ್ಯ ಉಂಟು ಮಾಡಿರುವುದನ್ನು ಸಾಬೀತು ಪಡಿಸುವ ಕಾರಣಕ್ಕಾಗಿ ತನ್ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಂತ ಬಂಧನದಲ್ಲಿರುವ ವ್ಯಕ್ತಿಯು ನ್ಯಾಯಾಧೀಶರಲ್ಲಿ ವಿನಂತಿಸಿದಾಗ ನ್ಯಾಯಾಧೀಶರು ಅಂತಹ ವ್ಯಕ್ತಿಯನ್ನು ನೋಂದಾಯಿತ ವೈದ್ಯಾಧಿಕಾರಿಯವರಿಂದ ವೈದ್ಯಕೀಯ ತಪಾಸಣೆಗೆ ಆದೇಶಿಸಿ ಸೂಕ್ತ ವರದಿಯನ್ನು ಪಡೆಯಬೇಕಾಗುತ್ತದೆ. ಬಂಧಿತ ವ್ಯಕ್ತಿಯ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯಾಧಿಕಾರಿಯವರಿಂದ ವರದಿಯನ್ನು ಪಡೆದ ನಂತರ ನ್ಯಾಯಾಧೀಶರು ಬಂಧಿತ ವ್ಯಕ್ತಿಯ ವಿರುದ್ದ ದೈಹಿಕ ಹಿಂಸೆ, ಕಿರುಕುಳ ಅಥವಾ ದೌರ್ಜನ್ಯ ನಡೆಸಿದ ವ್ಯಕ್ತಿ ಅಥವಾ ಸಂಬಂಧಪಟ್ಟ ಅಧಿಕಾರಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಈ ರೀತಿಯ ಕಾನೂನು ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಮತ್ತು ಆರೋಪಿತ ವ್ಯಕ್ತಿಯ ವಿರುದ್ದ ಪೋಲೀಸರಿಂದ ದೈಹಿಕ ಹಿಂಸೆ, ಕಿರುಕುಳ ಮತ್ತು ದೌರ್ಜನ್ಯ ವನ್ನು ತಡೆಯುವ ಉದ್ದೇಶ ಹೊಂದಿರುತ್ತದೆ.

2.  ಆರೋಪಿತ ವ್ಯಕ್ತಿಯು ತಾನು ನಿರಪರಾಧಿ ಎಂಬುವುದನ್ನು ಸಾಬೀತು ಪಡಿಸುವ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲು ಸಮ್ಮನ್ಸ್ ಮೂಲಕ ನ್ಯಾಯಾಲಯಕ್ಕೆ ಕರೆಸಲು ನ್ಯಾಯಾಧೀಶರನ್ನು ವಿನಂತಿಸಿಕೊಳ್ಳಬಹುದಾಗಿದೆ. ಮಾತ್ರವಲ್ಲದೆ ಇತರರ ಸ್ವಾಧೀನದಲ್ಲಿರುವ ಯಾವುದೇ ಸೂಕ್ತ ದಾಖಲೆಯನ್ನು ಸಹ ನ್ಯಾಯಾಲಯಕ್ಕೆ ತರಿಸಿಕೊಳ್ಳಬಹುದು.

3.    ತನ್ನ ವಿರುದ್ದದ ಪ್ರಕರಣದಲ್ಲಿ ತನಿಖಾಧಿಕಾರಿಯು ವಶಪಡಿಸಿಕೊಂಡಿರುವ ಯಾವುದೇ  ಸ್ವತ್ತು ಪೋಲೀಸರ ವಶದಲ್ಲಿರುವ ಸಂದರ್ಭದಲ್ಲಿ ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸಿರುವ  ಸಂದರ್ಭದಲ್ಲಿ ಪ್ರಕರಣದ ಪೂರ್ತಿ ವಿಚಾರಣೆ ಮುಗಿಯುವ ತನಕ ಅಂತಹ ಸ್ವತ್ತನ್ನು ತನ್ನ ತಾತ್ಕಾಲಿಕ ಸ್ವಾಧೀನತೆಗೆ ನೀಡುವಂತೆ  ಆರೋಪಿತ ವ್ಯಕ್ತಿಯು ನ್ಯಾಯಾಧೀಶರನ್ನು ವಿನಂತಿಸಿಕೊಳ್ಳಬಹುದಾಗಿದೆ. ಈ ರೀತಿಯಾಗಿ ಸ್ವತ್ತನ್ನು ಆರೋಪಿಯ ಅಭಿರಕ್ಷೆಗೆ ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಸದರಿ ಸ್ವತ್ತಿನ ಸ್ವರೂಪವನ್ನು ಬದಲಾಯಿಸದಂತೆ ಅಥವಾ ಸ್ವತ್ತನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಇತರರಿಗೆ ಹಸ್ತಾಂತರಿಸದಂತೆ ಅಥವಾ ವಿಚಾರಣೆ ಸಮಯ ಸದರಿ ಸ್ವತ್ತನ್ನು ನ್ಯಾಯಾಲಯದ ಸಮಕ್ಷಮ ಹಾಜರು ಪಡಿಸುವಂತೆ ಇತ್ಯಾದಿ ಷರತ್ತುಗಳನ್ನು ವಿಧಿಸಿ ಆತನಿಂದ ಸೂಕ್ತ ಮುಚ್ಚಳಿಗೆಯನ್ನು (ಬಾಂಡ್) ನ್ನು ಪಡೆಯಬಹುದು.

4.    ಯಾವದೇ ವ್ಯಕ್ತಿಯ ವಿರುದ್ದ ಜಾಮೀನೀಯಲ್ಲದ (ನೋನ್ ಬೈಲೇಬಲ್) ಅಥವಾ ಜಾಮೀನೀಯವಾದ (ಬೈಲೇಬಲ್) ಅಪಾದನೆಯನ್ನು ಪೋಲಿಸರು ನೋಂದಾಯಿಸಿರುವ ಸಂದರ್ಭದಲ್ಲಿ  ಅಂತಹ ವ್ಯಕ್ತಿ ತನ್ನನ್ನು ಪೋಲೀಸರು ಬಂಧಿಸುವ ಸಂದರ್ಭದಲ್ಲಿ ತನ್ನ ವಿರುದ್ದ  ಅನಾವಶ್ಯಕವಾಗಿ  ದೈಹಿಕ ಹಿಂಸೆ, ಕಿರುಕುಳ ಅಥವಾ ದೌರ್ಜನ್ಯ ನಡೆಸುವ ಭೀತಿ ಅಥವಾ ಅನುಮಾನವನ್ನು ಹೊಂದಿದಲ್ಲಿ ಆತನು ತನ್ನ ರಕ್ಷಣೆಗಾಗಿ ನಿರೀಕ್ಷಣಾ ಜಾಮೀನನ್ನು ಸಂಬಂದಪಟ್ಟ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಪಡೆಯಬಹುದಾಗಿದೆ ಅಥವಾ  ನೇರವಾಗಿ ನ್ಯಾಯಾಧೀಶರ ಸಮಕ್ಷಮ ಹಾಜರಾಗಿ ತನ್ನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ವಿನಂತಿಸಿಕೊಳ್ಳಬಹುದಾಗಿದೆ.

✒️ ಕೆ. ವಿಜೇಂದ್ರ ಕುಮಾರ್ ವಕೀಲರು, ಕಾರ್ಕಳ
ಮೊ: 98452 32490/ 96116 82681

error: Content is protected !!
Scroll to Top