ಕೊನೆಗೂ ಸಂಪುಟ ರಚನೆಗೆ ಗ್ರೀನ್‌ ಸಿಗ್ನಲ್‌ : ಭಾನುವಾರ ಪ್ರಮಾಣ ವಚನ

ಹರಿಪ್ರಸಾದ್‌ ಸಹಿತ ಹಲವರಿಗೆ ಕೈ ತಪ್ಪಿದ ಅವಕಾಶ

ಬೆಂಗಳೂರು: ಸಚಿವ ಸಂಪುಟ ರಚನೆ ಕಗ್ಗಂಟನ್ನು ಕೊನೆಗೂ ಕಂಗ್ರೆಸ್‌ ಹೈಕಮಾಂಡ್‌ ಬಗೆಹರಿಸಿದೆ. ಗುರುವಾರ ತಡರಾತ್ರಿ ತನಕ ದಿಲ್ಲಿಯ ಕಾಂಗ್ರೆಸ್ ವಾರ್‌ರೂಮ್​ನಲ್ಲಿ ಭಾರಿ ಕಸರತ್ತು ನಡೆದು ಸಚಿವರಾಗುವವರ ಪಟ್ಟಿ ಅಂತಿಮಗೊಳಿಸಲಾಗಿದೆ. ಸಂಪುಟ ವಿಸ್ತರಣೆಯಲ್ಲೂ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ. ಹೊಸಮುಖ- ಹಳೆಮುಖಗಳ ಸಮತೋಲನದ ವಿಚಾರದಲ್ಲಿ ಉಭಯ ನಾಯಕರ ಮಧ್ಯೆ ಹೊಂದಾಣಿಕೆ ಸುಸೂತ್ರವಾಗದೆ ಇದ್ದುದರಿಂದ ತತ್‌ಕ್ಷಣದ ನಿರ್ಧಾರಕ್ಕೆ ಹೈಕಮಾಂಡ್‌ ಹಿಂದೇಟು ಹಾಕಿತು ಎನ್ನಲಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಒಮ್ಮತದ ನಿರ್ಧಾರ ಬಾರದ ಹಿನ್ನೆಲೆ ಸಚಿವ ಸಂಪುಟ ರಚನೆ ಹೈಕಮಾಂಡ್​ಗೆ ತಲೆನೋವಾಗಿ ಪರಿಣಮಿಸಿತ್ತು. ನೂತನ ಸಚಿವರ ಪ್ರಮಾಣವಚನ ಮೇ 28ರಂದು ನಡೆಯಲಿದ್ದು, ಸಚಿವರ ಪಟ್ಟಿಯೂ ಅಂತಿಮಗೊಂಡಿದೆ. ಅಧಿಕೃತ ಘೋಷಣೆ ಬಾಕಿ ಇದೆ. ಆದರೆ ಕೆಲವು ಪ್ರಮುಖರಿಗೆ ಸಚಿವ ಸ್ಥಾನ ಕೈತಪ್ಪಿದೆ.
ಎಚ್‌.ಕೆ.ಪಾಟೀಲ್‌, ಮಂಕಾಳ ವೈದ್ಯ, ಶಿವಾನಂದ ಪಾಟೀಲ್‌, ಭೈರತಿ ಸುರೇಶ್‌, ಕೃಷ್ಣ ಭೈರೇಗೌಡ, ಡಾ.ಶರಣಪ್ರಕಾಶ್‌ ಪಾಟೀಲ್, ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್‌, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್‌, ಕೆ.ವೆಂಕಟೇಶ್‌, ಮಧು ಬಂಗಾರಪ್ಪ, ಸಂತೋಷ್ ಲಾಡ್‌, ವಿನಯ್ ಕುಲಕರ್ಣಿ, ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ. ವಿಧಾನಸಭೆ ಉಪಸಭಾಪತಿ ಸ್ಥಾನ ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್‌ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಹಿರಿಯ ಶಾಸಕರಾದ ಆರ್‌.ವಿ. ದೇಶಪಾಂಡೆ ಹಾಗೂ ಬಿ.ಕೆ. ಹರಿಪ್ರಸಾದ್‌ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಬಿ.ಕೆ.ಹರಿಪ್ರಸಾದ್‌ ಬದಲು ಎಂಎಲ್‌ಸಿ ಬೋಸರಾಜು ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ.
ಹಿರಿಯರ ಸಂಪುಟ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಒಮ್ಮತ ಮೂಡಿಬಂದಿಲ್ಲ. ಆರ್‌.ವಿ.ದೇಶಪಾಂಡೆ ಸೇರಿ ಹಲವು ಹಿರಿಯರ ಸೇರ್ಪಡೆಗೆ ಡಿ.ಕೆ. ಶಿವಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಧು ಬಂಗಾರಪ್ಪ, ಬಿ.ಕೆ.ಹರಿಪ್ರಸಾದ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಆದರೆ ಒಂದೇ ಸಮುದಾಯದ ಮಧು, ಹರಿಪ್ರಸಾದ್ ಸೇರ್ಪಡೆಗೆ ಸಿದ್ದರಾಮಯ್ಯ ಅವರು ಅಸಮ್ಮತಿ ಸೂಚಿಸಿದ್ದಾರೆ. ಸದ್ಯ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಒಲಿದುಬಂದಿದ್ದು, ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.

error: Content is protected !!
Scroll to Top