ದೇಶಾದ್ಯಂತ ಜಾರಿಯಲ್ಲಿರುವ ಮೋಟಾರು ವಾಹನಗಳ ಕಾಯ್ದೆ- 1988 ಎಂಬ ಕಾನೂನು ಸಾರ್ವಜನಿಕ ಸ್ಥಳದಲ್ಲಿನ ಮೋಟಾರು ವಾಹನ ಚಲಾವಣೆಯನ್ನು ನಿಯಂತ್ರಿಸುವ ಹಾಗೂ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸರಕಾರವು ಜಾರಿಗೊಳಿಸಿರುವ ನಿಯಮಗಳ ಅನುಸಾರ ಈ ಕೆಳ ಕಾಣಿಸಿರುವ ಸಂದರ್ಭಗಳಲ್ಲಿ ಸಂಬಂಧಪಟ್ಟ ವ್ಯಕ್ತಿಯು ಮೇಲ್ಕಾಣಿಸಿದ ಕಾನೂನಿನ ನಿಯಮಗಳ ಉಲ್ಲಂಘನೆಯ ಅಪರಾಧವನ್ನು ನಡೆಸಿದಂತಾಗಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
- ಸಾರ್ವಜನಿಕ ವಾಹನದಲ್ಲಿ ಪಾಸ್ ಅಥವಾ ಟಿಕೇಟ್ ಇಲ್ಲದೇ ಪ್ರಯಾಣಿಸಿದ ಸಂದರ್ಭದಲ್ಲಿ,
- ಮೇಲ್ಕಾಣಿಸಿದ ಅಧಿನಿಯಮದ ಮೇರೆಗೆ ಸರಕಾರವು ಕಾಲ ಕಾಲಕ್ಕೆ ಹೊರಡಿಸುವ ಆದೇಶಗಳ ಉಲ್ಲಂಘನೆಯನ್ನು ಮಾಡಿದರೆ ಅಥವಾ ಅಂತಹ ಆದೇಶಗಳ ಕಾನೂನುಬದ್ಧ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದರೆ, ಸರಕಾರದ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದರೆ ಅಥವಾ ಸರಿಯಾದ ಮಾಹಿತಿ ನೀಡಲು ತಿರಸ್ಕರಿಸಿದರೆ, ಇತ್ಯಾದಿ ಸಂದರ್ಭಗಳಲ್ಲಿ,
- ಮೋಟಾರು ವಾಹನ ಚಾಲನ ಲೈಸೆನ್ಸ್ ಹೊಂದಿರದ ವ್ಯಕ್ತಿಗೆ ವಾಹನ ಮಾಲಿಕನು ತನ್ನ ವಾಹನವನ್ನು ಚಲಾಯಿಸಲು ಅನುಮತಿ ನೀಡಿದರೆ, ಅಥವಾ ವಾಹನವನ್ನು ಹಸ್ತಾಂತರಿಸಿದರೆ,
- ವಾಹನ ಚಾಲನಾ ಲೈಸನ್ಸ್ ಹೊಂದಲು ಅಥವಾ ಪಡೆಯಲು ಅನರ್ಹನಾದ ವ್ಯಕ್ತಿ ವಾಹನ ಚಲಾಯಿಸಿದರೆ,
- ಸಾರ್ವಜನಿಕ ಸ್ಥಳದಲ್ಲಿ ಅತೀ ವೇಗವಾಗಿ ಅಥವಾ ಸಾರ್ವಜನಿಕರ ಸುರಕ್ಷತೆಗೆ ದಕ್ಕೆ ಉಂಟು ಮಾಡುವ ರೀತಿಯಲ್ಲಿ ಅಪಾಯಕಾರಿಯಾಗಿ ಅಥವಾ ನಿರ್ಲಕ್ಷತನದಿಂದ ವಾಹನವನ್ನು ಚಲಾಯಿಸಿದಲ್ಲಿ,
- ಪಾನಮತ್ತನಾಗಿ (ಅಮಲು ಪದಾರ್ಥ ಸೇವಿಸಿ) ವಾಹನ ಚಲಾಯಿಸಿದರೆ
- ಮಾನಸಿಕವಾಗಿ ಅಥವಾ ದೈಹಿಕವಾಗಿ ಅಸಮರ್ಥನಾಗಿರುವ ವ್ಯಕ್ತಿ ವಾಹನ ಚಲಾಯಿಸಿದರೆ
- ಚಾಲನೆಗೆ ಸುರಕ್ಷಿತವಾಗಿರದ ಅಥವಾ ಯೋಗ್ಯವಾಗಿರದ ವಾಹನವನ್ನು ಚಲಾಯಿಸಿದರೆ ,
- ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುವ ರೀತಿಯ ಕರ್ಕಶ ಶಬ್ದ ಮತ್ತು ವಾಯುಮಾಲಿನ್ಯತೆ ಉಂಟುಮಾಡುವ ರೀತಿಯಲ್ಲಿ ವಾಹನವನ್ನು ಚಲಾಯಿಸಿದರೆ,
- ಕಾನೂನಿನ ನಿಯಮಾನುಸಾರವಾಗಿ ನೋಂದಾವಣೆಯಾಗದ ವಾಹನವನ್ನು ಉಪಯೋಗಿಸಿದರೆ,
- ಪರ್ಮಿಟ್ (ರಹದಾರಿ) ಇಲ್ಲದ ಸಾರ್ವಜನಿಕ ವಾಹನವನ್ನು ಚಲಾಯಿಸಿದರೆ,
- ನಿಯಮಾನುಸಾರವಾಗಿ ಹೊಂದಿರುವ ಅನುಮತಿಗಿಂತ ಅತೀ ಎತ್ತರದ ಅಥವಾ ಅತೀ ಹೆಚ್ಚಿನ ತೂಕದ ಸರಕನ್ನು ವಾಹನದಲ್ಲಿ ಸಾಗಿಸಿದರೆ ಮತ್ತು ಈ ಸಂದರ್ಭದಲ್ಲಿ ವಾಹನ ತಪಾಸಣೆಗಾಗಿ ಸಂಬಂದಪಟ್ಟ ಅಧಿಕಾರಿಗಳು, ವಾಹನವನ್ನು ನಿಲ್ಲಿಸುವಂತೆ ಅಥವಾ ಮುಂದಿನ ಕ್ರಮಕ್ಕಾಗಿ ಅವರ ಸ್ವಾಧೀನಕ್ಕೆ ಒಪ್ಪಿಸಲು ತಿರಸ್ಕರಿಸಿದರೆ,
- ಇನ್ಸೂರೆನ್ಸ್ ಹೊಂದಿರದ ವಾಹನವನ್ನು ಸಾರ್ವಜನಿಕ ಪ್ರದೇಶದಲ್ಲಿ ಚಲಾಯಿಸಿದರೆ
- ವಾಹನದ ಮಾಲೀಕ ಅಥವಾ ಕಾನೂನು ಬದ್ಧ ಅಧಿಕಾರಿಯ ಸಮ್ಮತಿ ಇಲ್ಲದೇ ವಾಹನವನ್ನು ಚಲಾಯಿಸಿದರೆ
- ಕಾನೂನು ಬದ್ಧ ಅಧಿಕಾರವಿಲ್ಲದೆ ನಿಂತಿರುವ ವಾಹನದೊಳಗೆ ಪ್ರವೇಶಿಸಿದರೆ ಅಥವಾ ವಾಹನದ ಬ್ರೇಕನ್ನು ಅಥವಾ ಇಂಜಿನನ್ನು ಕೆಡಿಸಿದರೆ
- ಸಾರ್ವಜನಿಕ ಪ್ರದೇಶದಲ್ಲಿ ಮುಕ್ತವಾದ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದರೆ

ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

























