ಖಾಸಗಿ ಬಸ್‌ಗಳ ಟಿಕೆಟ್ ದರ ಸಿಕ್ಕಾಪಟ್ಟೆ ಏರಿಕೆ
ಬೆಂಗಳೂರು: ಒಂದೆಡೆ ಬೇಸಿಗೆ ರಜೆ, ಇನ್ನೊಂದೆಡೆ ಚುನಾವಣೆ…ಹೀಗಾಗಿ ಬಸ್ ರೈಲುಗಳೆಲ್ಲ ಈಗ ಫುಲ್. ಮುಂಗಡ ಕಾದಿರಿಸಿದರಷ್ಟೇ ಪ್ರಯಾಣ ಭಾಗ್ಯ. ಈಗಿಂದೀಗ ಹೋಗಿ ಟಿಕೆಟ್ ತೆಗೆದುಕೊಂಡು ಪ್ರಯಾಣಿಸುವ ಸ್ಥಿತಿ ಇಲ್ಲ. ಇಷ್ಟು ಮಾತ್ರವಲ್ಲ ದೂರುದೂರುಗಳ ಎಲ್ಲ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಸಿಕ್ಕಾಪಟ್ಟೆ ಏರಿಸಿಕೊಂಡಿವೆ. ಪ್ರತಿ ಬೇಸಿಗೆಯಲ್ಲಿ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆ ಇದ್ದದ್ದೇ ಆದರೂ ಈ ಸಲ ಚುನಾವಣೆಯ ಕಾವು ಕೂಡ ಇರುವುದರಿಂದ ಟಿಕೆಟ್ ದರ ಮಿತಿಮೀರಿ ಹೆಚ್ಚಾಗಿದೆ ಎಂದು ಜನ ದೂರುತ್ತಿದ್ದಾರೆ.
ಜನರು ಮತದಾನದ ದಿನಾಂಕಕ್ಕೆ ಸರಿಹೊಂದುವಂತೆ ಊರಿಗೆ ಹೋಗಿ ರಜಾ ದಿನಗಳನ್ನು ಕಳೆಯಲು ರಜೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದರಿಂದ ಮೇ 5ರ ಬಳಿಕದ ಟಿಕೆಟ್‌ಗಳು ದೊರೆಯುತ್ತಿಲ್ಲ. ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಿಗೆ ಟಿಕೆಟ್ ಬುಕ್ಕಿಂಗ್ ಶುರುವಾಗಿತ್ತು. ಈಗಂತೂ ಸರಕಾರಿ ಮತ್ತು ಖಾಸಗಿ ಎರಡೂ ಬಸ್‌ಗಳಲ್ಲಿ ಮೇ 5ರ ಬಳಿಕ ಟಿಕೆಟ್ ಇಲ್ಲ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಬುಕ್ಕಿಂಗ್ ಪ್ರಮಾಣದಲ್ಲಿ ಹಿಂದೆಂದಿಗಿಂತಲೂ ಬುಕ್ಕಿಂಗ್ ಹೆಚ್ಚಳ ಕಂಡುಬಂದಿದೆ. ಹೆಚ್ಚಿನ ಜನರು ಮತದಾನಕ್ಕೂ ಎರಡು ದಿನಗಳ ಮೊದಲು ತಮ್ಮ ಸ್ವಂತ ಊರಿಗೆ ತೆರಳಲು ಮುಂಗಡ ಟಿಕೆಟ್ ಕಾದಿರಿಸಿದ್ದಾರೆ.
ಮುಂಬಯಿಯಿಂದ ಮತ್ತು ಬೆಂಗಳೂರಿನಿಂದ ಊರಿಗೆ ಹೋಗುವವರ ಸಂಖ್ಯೆ ಅಧಿಕವಿದೆ. ಬೇಸಿಗೆಯಲ್ಲಿ ಮುಂಬಯಿ-ಮಂಗಳೂರು ಖಾಸಗಿ ಸ್ಲೀಪರ್ ಕೋಚ್ ಬಸ್ ಟಿಕೆಟ್ ದರ 2000-2500 ರೂ. ಇರುವುದು ಮಾಮೂಲು. ಆದರೆ ಈ ಸಲ ಏಕಾಏಕಿ 3000-3500 ರೂ. ಮಾಡಿದ್ದಾರೆ. ಇಷ್ಟು ಕೊಟ್ಟರೂ ಟಿಕೆಟ್ ಸಿಗುತ್ತಿಲ್ಲ. ಬೆಂಗಳೂರು-ಮಂಗಳೂರು ಟಿಕೆಟ್ ದರ ಕೂಡ ಏರಿಕೆಯಾಗಿದೆ. ಮಾಮೂಲು ದಿನಗಳಲ್ಲಿ 1000-1200 ಇರುವ ಟಿಕೆಟ್ ದರ ಈಗ 2500 ರೂ. ತನಕ ಏರಿಕೆಯಾಗಿದೆ. ಆದರೂ ಟಿಕೆಟ್ ಸಿಗದೆ ಜನ ಪರದಾಡುತ್ತಿದ್ದಾರೆ. ಕುಂದಾಪುರ, ಮಂಗಳೂರು, ಶಿವಮೊಗ್ಗ, ಶೃಂಗೇರಿ ಊರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಮಾರ್ಗದ ಬಸ್‌ಗಳು ಬಹುತೇಕ ಭರ್ತಿಯಾಗಿವೆ. ಈ ಕಾರಣಕ್ಕೆ ಬಸ್ ದರದಲ್ಲೂ ಹೆಚ್ಚಳ ಮಾಡಲಾಗಿದೆ ಎಂದು ಖಾಸಗಿ ಬಸ್ ಆಪರೇಟರ್‌ಗಳು ಹೇಳುತ್ತಾರೆ. ಕೆಲವು ಖಾಸಗಿ ಬಸ್ ಸಂಸ್ಥೆಗಳು ತಮ್ಮ ಪ್ರಯಾಣ ದರವನ್ನು ಶೇ.50ರಷ್ಟು ಹೆಚ್ಚಿಸಿವೆ.
ಮತದಾರರನ್ನು ಕರೆತರಲು ರಾಜಕೀಯ ಪಕ್ಷಗಳೇ ಟಿಕೆಟ್ ಮುಂಗಡ ಕಾದಿರಿಸುತ್ತವೆ. ಮೇ 8 ಮತ್ತು 9ರಂದು ಬಹುತೇಕ ಟಿಕೆಟ್‌ಗಳನ್ನು ಕಾದಿರಿಸಿದ್ದು ಮತದಾರರೇ. ಇವುಗಳಲ್ಲಿ ಹೆಚ್ಚನವು ಪ್ರಾಯೋಜಿತ ಟಿಕೆಟ್‌ಗಳು. ಅಂದರೆ ಯಾರೋ ಈ ಟಿಕೆಟ್‌ಗೆ ಹಣ ಪಾವತಿಸಿರುತ್ತಾರೆ. ಇಡೀ ಬಸ್ಸನ್ನೇ ಕಾದಿರಿಸಿ ಜನರನ್ನು ಕರೆತರುವ ವಾಡಿಕೆಯೂ ಇದೆ. ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳಿಗೆ ಜನರು ತೆರಳಲು, ರಾಜಕೀಯ ಪಕ್ಷಗಳೇ ಬಸ್‌ಗಳನ್ನು ಬುಕ್ ಮಾಡುತ್ತಿರುವುದು ವಿಶೇಷವಾಗಿದೆ. ಆಯಾ ಕ್ಷೇತ್ರಗಳ ಅಭ್ಯರ್ಥಿಗಳೇ ತಮ್ಮ ಮತದಾರರನ್ನು ಕರೆತರುವ ವ್ಯವಸ್ಥೆ ಮಾಡುತ್ತಾರೆ.
ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್ ದರ ಏರಿಕೆಯಾಗದಿದ್ದರೂ ಅವುಗಳಲ್ಲಿ ಟಿಕೆಟ್ ಸಿಗುವುದು ದುರ್ಲಭ. ಜನರು ದೂರದೂರುಗಳಿಗೆ ಹೋಗಲು ಅಗ್ಗದ ಕೆಎಟ್‌ಆರ್‌ಟಿಸಿ ಬಸ್‌ಗಳನ್ನು ಆದ್ಯತೆಯಾಗಿ ಪರಿಗಣಿಸುತ್ತಾರೆ. ಅದರಲ್ಲಿ ಟಿಕೆಟ್ ಸಿಗದಿದ್ದರೆ ಮಾತ್ರ ಖಾಸಗಿ ಬಸ್‌ಗಳತ್ತ ಹೋಗುತ್ತಾರೆ. ಕೋವಿಡ್ ನಂತರ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ಆದರೆ ಚುನಾವಣಾ ಸಮಯದಲ್ಲಿ ಮತ್ತೆ ಬುಕ್ಕಿಂಗ್ ಪ್ರಮಾಣ ಏರಿಕೆ ಕಂಡುಬಂದಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಮತದಾನ ಮುಗಿದ ದಿನ(ಮೇ 10) ಮತ್ತು ಫಲಿತಾಂಶದ ದಿನ(ಮೇ 13)ದಂದೂ ಮರಳಿ ಬರುವ ಬುಕ್ಕಿಂಗ್ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ. ಅಂದರೆ ಜನರು ಮತದಾನ ಮಾಡಲೆಂದೇ ತಮ್ಮ ಸ್ವಂತ ಊರಿಗೆ ತೆರಳುತ್ತಿರುವುದು ಸ್ಪಷ್ಟವಾಗಿದೆ ಎನ್ನುತ್ತಾರೆ ಸರ್ಕಾರಿ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು.
ಚುನಾವಣಾ ಸಮಯವಾಗಿರುವುದರಿಂದ ರಾಜಕೀಯ ಪಕ್ಷಗಳೂ ಕೂಡ ಜನರು ತಮ್ಮ ಕ್ಷೇತ್ರಗಳಿಗೆ ತೆರಳಲು ಅನುವಾಗುವಂತೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳನ್ನು ಮುಂಗಡವಾಗಿ ಬುಕ್ ಮಾಡುತ್ತಿವೆ.
























