ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 1,88,404 ಮತದಾರರು

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 90,356 ಪುರುಷರು, 98,048 ಮಹಿಳೆಯರು ಸೇರಿ 1,88,404 ಮತದಾರರಿದ್ದಾರೆ. 6,784 ಮಂದಿ ಹೊಸದಾಗಿ ಸೇರ್ಪಡೆಯಾದವರಾಗಿದ್ದಾರೆ. 209 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮಾ. 30ರಂದು ಪ್ರಕಟಿಸಿದ ಮತದಾರರ ಪಟ್ಟಿಯ ಪರಿಷ್ಕೃತ ಮಾಹಿತಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ.

ಎ. 10 ರವರೆಗೆ ಅವಕಾಶ
ಹೊಸ ಮತದಾರರ ಸೇರ್ಪಡೆಗೆ ಎ. 10 ರವರೆಗೆ ಅವಕಾಶವಿದ್ದು, 2023 ಜನವರಿಗೆ 18 ವರ್ಷ ತುಂಬಿದವರು (31-03-2005ಕ್ಕಿಂತ ಮೊದಲು ಜನಿಸಿದವರು) ಮತದಾನದ ಗುರುತಿನ ಕಾರ್ಡ್‌ ಪಡೆಯಲು ಅರ್ಹರಾಗಿರುತ್ತಾರೆ. ಗುರುತಿನ ಚೀಟಿ ಪಡೆಯಲು ಅಗತ್ಯ ದಾಖಲೆಗಳಾದ ಆಧಾರ್‌ ಕಾರ್ಡ್‌ ಪ್ರತಿ, ಫೋಟೊ, ರೇಷನ್‌ ಕಾರ್ಡ್‌ ಪ್ರತಿಯೊಂದಿಗೆ ಸ್ಥಳೀಯವಾಗಿ ಕಾರ್ಯನಿರ್ಹಿಸುವ ಬಿಎಲ್‌ಓಗಳನ್ನು ಸಂಪರ್ಕಿಸಬಹುದಾಗಿದೆ. ಮತದಾರರ ಸೇರ್ಪಡೆ ಕುರಿತಂತೆ ಮಾ. 30ರಂದು ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ತಾಲೂಕಿನ ಬಿಎಲ್‌ಓಗಳಿಗೆ ಮಾಹಿತಿ ನೀಡಿದರು.

ವೋಟರ್‌ ಹೆಲ್ಪ್‌ ಲೈನ್‌ ಆಪ್‌
ಮತದಾರರ ನೆರವಿಗಾಗಿ ಚುನಾವಣಾ ಆಯೋಗ ವೋಟರ್‌ ಹೆಲ್ಪ್‌ ಲೈನ್‌ ಆಪ್‌ ಪ್ರಾರಂಭಿಸಿದೆ. ಈ ಆಪ್‌ ಮೂಲಕ ಹೊಸ ಮತದಾರರ ಸೇರ್ಪಡೆ, ಪರಿಶೀಲನೆ ಮತ್ತು ದೃಢೀಕರಣ ಹಾಗೂ ಮತದಾರರ ಪಟ್ಟಿಯಲ್ಲಿ ತಿದ್ದುಪಡಿಯನ್ನು ಮಾಡಬಹುದಾಗಿದೆ. ಮತದಾರರು ಬೇರಡೆಗೆ ಸ್ಥಳಾಂತರಗೊಂಡಿದ್ದರೆ ಸಮರ್ಪಕ ದಾಖಲೆಗಳನ್ನು ಒದಗಿಸಿ ಆ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದ್ದು, ಆಪ್‌ನಲ್ಲಿ ಇದನ್ನು ತ್ವರಿತವಾಗಿ ಮಾಡಬಹುದು.

ಬ್ಯಾನರ್‌ ತೆರವು
ಚುನಾವಣಾ ದಿನಾಂಕ ಘೋಷಣೆಯಾದ 24 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಜಾಹೀರಾತು ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲಾಗಿದೆ.

ಶಸ್ತ್ರಾಸ್ತ್ರ ಪೊಲೀಸರ ವಶಕ್ಕೆ
ಚುನಾವಣಾ ಪ್ರಚಾರ ಕಾರ್ಯಗಳು, ಸಭೆ ಸಮಾರಂಭಗಳ ಸಂದರ್ಭದಲ್ಲಿ ಗುಂಪು ಘರ್ಷಣೆ, ಗಲಭೆ, ಹೊಡೆದಾಟಗಳಂಥ ಘಟನೆಗಳು ದಾಖಲಾಗುವ ಸಂಭವಿದ್ದು, ಈ ವೇಳೆ ಶಸ್ತ್ರಾಸ್ತ್ರ ಹೊಂದಿರುವವರು ಉದ್ವೇಗದಲ್ಲಿ ಅವುಗಳ ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಪರವಾನಗಿ ಹೊಂದಿದ ಪಿಸ್ತೂಲ್, ಶಸ್ತ್ರಾಸ್ತ್ರ ಬಳಕೆಗೆ ನಿಷೇಧ ಹೇರಲಾಗಿದ್ದು, ತಮ್ಮ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಒಪ್ಪಿಸಬೇಕಾಗಿದೆ. ಕಾರ್ಕಳ, ಹೆಬ್ರಿ, ಅಜೆಕಾರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಪೊಲೀಸರ ವಶಕ್ಕೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಗನ್‌ಹೌಸ್‌ಗಳಲ್ಲೂ ಶಸ್ತ್ರಾಸ್ತ್ರಗಳನ್ನು ನೀಡಬಹುದಾಗಿದೆ. ಆದರೆ ಅದರ ರಶೀದಿಯನ್ನು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಸಲ್ಲಿಸಬೇಕು.

2018ರ ಚುನಾವಣೆ
2018ರ ವಿಧಾನಸಭಾ ಚುನಾವಣೆಯ ಸಂದರ್ಭ ಕಾರ್ಕಳದಲ್ಲಿ 85,676 ಪುರುಷ ಮತದಾರರು ಮತ್ತು 93,331 ಮಹಿಳಾ ಮತದಾರರು ಮತದಾನದ ಅರ್ಹತೆ ಪಡೆದಿದ್ದರು. ಅಂದು 1,46,016 ಮತದಾನವಾಗಿತ್ತು. ಅವರಲ್ಲಿ ಸ್ಪರ್ಧಿಗಳಾದ ವಿ. ಸುನಿಲ್‌ ಕುಮಾರ್‌-91245, ಗೋಪಾಲ ಭಂಡಾರಿ-48679, ಎಚ್‌. ಮಕ್ಸೂದ್‌ ಅಹಮದ್‌-1817, ಉದಯ್‌ ಕುಮಾರ್‌- 1348, ಸುಮಂತ್‌ ಕೆ. ಪೂಜಾರಿ 554, ಅಶ್ರಫ್‌ ಅಲಿ-539, ಅಬ್ದುಲ್‌ ಅಜ಼ೀಜ್‌-413, ಮತಗಳನ್ನು ಗಳಿಸಿದ್ದರು. 1340 ಮತಗಳು ನೋಟಾ ಹಾಗೂ 81 ಮತಗಳು ಅಸಿಂಧು ಆಗಿದ್ದವು.

ವರದಿ : ನಳಿನಿ ಎಸ್.‌ ಸುವರ್ಣ































































































error: Content is protected !!
Scroll to Top