ಉಡುಪಿ : ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯದಲ್ಲಿ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಬಂಗಾರದ ಒಡವೆಗಳನ್ನು ಎಗರಿಸಿದ ಘಟನೆ ಮಾ. 14 ರಂದು ಮಣಿಪಾಲದ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಸಂಭವಿಸಿದೆ.
ಪುನೀತ ವಸಂತ್ ಹೆಗ್ಡೆ ತಮ್ಮ ಕುಟುಂಬದೊಂದಿಗೆ ಮುಂಬಿಯಿಗೆ ಹೋಗಲು ಮಂಗಳೂರು – ಮುಂಬಯಿ ಎಕ್ಸ್ ಪ್ರೆಸ್ ರೈಲು ನಂಬ್ರ 12134 ರಲ್ಲಿ ಏರಿದ್ದರು. ಇದಕ್ಕೂ ಮುನ್ನ ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಬಂಗಾರದ ಒಡವೆಗಳನ್ನು ಒಂದು ಕವರ್ ನಲ್ಲಿ ಹಾಕಿ ಬಟ್ಟೆಗಳ ಮಧ್ಯೆ ಇಟ್ಟಿದ್ದು ಬ್ಯಾಗನ್ನು ಹೆಗಲಿನಲ್ಲಿ ಹಾಕಿಕೊಂಡಿದ್ದರು. ಇಂದ್ರಾಳಿ ರೈಲು ನಿಲ್ದಾಣದಿಂದ ರೈಲು ಹೊರಟಿದ್ದು ಸೀಟ್ ನಲ್ಲಿ ಕುಳಿತಾಗ ಪುನೀತ ಅವರ ವ್ಯಾನಿಟಿ ಬ್ಯಾಗ್ ಝಿಫ್ ತೆರೆದಿರುವುದು ಕಂಡು ಬಂದಿದ್ದು, ಬ್ಯಾಗ್ ಪರಿಶೀಲಿಸಿದಾಗ ಒಳಗೆ ಇಟ್ಟಿದ್ದ ಬಂಗಾರದ ಒಡೆವೆಗಳ ಕವರ್ ಕಾಣೆಯಾಗಿತ್ತು.
ಮಧ್ಯಾಹ್ನ 3:35 ಗಂಟೆಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯ ಯಾರೋ ಕಳ್ಳರು ವ್ಯಾನಿಟಿ ಬ್ಯಾಗ್ ಝಿಫ್ ತೆರೆದು ಬ್ಯಾಗ್ ನಲ್ಲಿದ್ದ ಬಂಗಾರದ ಒಡವೆಗಳನ್ನು ಹಾಗೂ ವಾಚ್‌ನ್ನು ಕಳವು ಮಾಡಿದ್ದಾರೆ. 4,00,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 3000 ಬೆಲೆಯ ವಾಚ್ ಸೇರಿದಂತೆ ಒಟ್ಟು 4,03,000 ರೂ. ಮೌಲ್ಯದ ಸ್ವತ್ತು ಕಳವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





















