ಕಾರ್ಕಳದ ಹೆಬ್ಬಾಗಿಲು ಜೋಡುರಸ್ತೆಯಲ್ಲಿ ವಿವಿಧ ರಸ್ತೆ ಕಾಮಗಾರಿ ಉದ್ಘಾಟನೆ

ರಸ್ತೆ ಅಭಿವೃದ್ಧಿಯಿಂದ ಕ್ಷೇತ್ರದ ಪ್ರಗತಿ – ವಿ. ಸುನೀಲ್‌ ಕುಮಾರ್‌

ಕಾರ್ಕಳ : ರಸ್ತೆ ಅಭಿವೃದ್ಧಿಯಿಂದಾಗಿ ಕ್ಷೇತ್ರದ ಪ್ರಗತಿ. ಕಾರ್ಕಳದ ಹೆಬ್ಬಾಗಿಲಿನಂತಿರುವ ಜೋಡುರಸ್ತೆಯಲ್ಲಿ ಜನತೆಯ ಅನುಕೂಲಕ್ಕೆ ತಕ್ಕಂತೆ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆದಿರುವುದು ಕಾರ್ಕಳಕ್ಕೆ ಹೊಸ ರೂಪವನ್ನು ನೀಡಿದೆ ಎಂದು ಸಚಿವ ವಿ. ಸುನೀಲ್‌ ಕುಮಾರ್‌ ಅಭಿಪ್ರಾಯಪಟ್ಟರು. ಅವರು ಮಾ.8 ರಂದು ಜೋಡುರಸ್ತೆಯಲ್ಲಿ 6.50 ಕೋ.ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಅಲಂಕಾರಿ ದೀಪ ಉದ್ಘಾಟಿಸಿ ಮಾತನಾಡಿದರು.

6.50 ಕೋ. ರೂ ಅನುದಾನದಲ್ಲಿ 550 ಮೀ. ಉದ್ದಕ್ಕೆ ರಸ್ತೆಯ ಎರಡು ಬದಿಯಲ್ಲಿ ಆರ್‌.ಸಿ.ಸಿ ಚರಂಡಿ, ಕಾಲುದಾರಿ ಮತ್ತು ಇಂಟರ್‌ಲಾಕ್‌ ಅಳವಡಿಕೆ, ರಸ್ತೆಯನ್ನು ಎರಡು ಕಡೆ ಅಗಲೀಕರಣಗೊಳಿಸಿ ಡಾಂಬರೀಕರಣ, ಕಾಲುದಾರಿ ಮತ್ತು ರಸ್ತೆಯ ಮಧ್ಯೆ ವಾಹನ ಪಾರ್ಕಿಂಗ್‌ ಮಾಡಲು ಇಂಟರ್‌ಲಾಕ್‌ ವ್ಯವಸ್ಥೆ ಹಾಗೂ ಕಾಲುದಾರಿಯ ಮೇಲ್ಭಾಗದಲ್ಲಿ ಮತ್ತು ರಸ್ತೆಯ ಡಿವೈಡರ್‌ನಲ್ಲಿ ಅಲಂಕಾರಿಕಾ ದಾರಿದೀಪಗಳನ್ನು ಅಳವಡಿಸಲಾಗಿದೆ.

ಉದ್ಯಮಿ ಅಣ್ಣಪ್ಪ ನಾಯ್ಕ್‌ ಮಾತನಾಡಿ, ಮೊದಲಿದ್ದ ಕಾರ್ಕಳದ ಪರಿಸ್ಥಿತಿಗೂ ಪ್ರಸ್ತುತ ಕಾರ್ಕಳಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಕಾರ್ಕಳ ಸಮಗ್ರ ಅಭಿವೃದ್ಧಿಯತ್ತ ವೇಗ ಪಡೆಯುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಕ್ಷೇತ್ರದ ಸಚಿವ ವಿ. ಸುನೀಲ್‌ ಕುಮಾರ್‌ ಅವರ ನಿರಂತರ ಪರಿಶ್ರಮ ಎಂದರು. ರಾಜಾಪುರ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಪ್ರಭು ಮಾತನಾಡಿ, ಕಾರ್ಕಳವು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಹೊಂದುವ ಮೂಲಕ ಜನತೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದು, ಮಾದರಿ ಕ್ಷೇತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸನ್ಮಾನ
ಲೋಕೋಪಯೋಗಿ ಇಲಾಖೆಯ ಭುವನೇಶ್ವರ್‌, ಪಿಡಬ್ಲುಡಿ ಇಂಜಿನಿಯರ್‌ ಲಾಯ್ಡ್‌ ಹಾಗೂ ರಸ್ತೆ ಕಾಮಗಾರಿ ಮಾಡಿದ ಇಂಜಿನಿಯರ್‌ಗಳಾದ ಮಂಜುನಾಥ್‌, ಶಶಿಕಿರಣ್‌ ಮತ್ತು ಮೋಹನ್‌ ಇವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭ ಜೋಡುರಸ್ತೆ ನಾಗರೀಕರ ಪರವಾಗಿ ವಿ. ಸುನೀಲ್‌ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ ಸಂಪತ್, ಉದ್ಯಮಿಗಳಾದ ಬಿಆರ್‌ಕೆ ನಾಗರಾಜ ಕಾಮತ್‌, ಬೋಳ ಶ್ರೀನಿವಾಸ್ ಕಾಮತ್‌, ರವಿಪ್ರಕಾಶ್‌ ಪ್ರಭು, ನಿಕಟಪೂರ್ವ ಜಿ. ಪಂ. ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ. ಮಾಜಿ ಉಪಾಧ್ಯಕ್ಷ ರವೀಂದ್ರ ಕುಮಾರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಕ್ಕುಂದೂರು ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ರಮೇಶ್‌ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ರವಿ‌ ಕುಮಾರ್ ಶೆಟ್ಟಿ ವಂದಿಸಿದರು.













































error: Content is protected !!
Scroll to Top