ಕಾರು, ಸ್ಕೂಟರಿಗೆ ಪಿಕಪ್‌ ಡಿಕ್ಕಿ : ಮೂವರಿಗೆ ಗಾಯ

ಹೆಬ್ರಿ : ಪ್ರವಾಸಿ ಮಂದಿರದ ಬಳಿ ಬುಧವಾರ ಬೊಲೆರೊ ಪಿಕಪ್‌, ಕಾರು ಮತ್ತು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಮಂಜುನಾಥ ಹೆಗ್ಡೆ ಎಂಬವರು ಕಾರಿನಲ್ಲಿ ಕುಳಿತುಕೊಂಡಿದ್ದು, ಸ್ನೇಹಿತ ನಾಗೇಶ್‌ ಎಂಬವರು ಕಾರಿನ ಬದಿಯಲ್ಲಿ ಸ್ಕೂಟರಿನಲ್ಲಿ ಕುಳಿತು ಅವರ ಜತೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಬೊಲೆರೊ ಪಿಕಪ್‌ ಕಾರು ಮತ್ತು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿ ಎಡಬದಿಯಲ್ಲಿರುವ ಸಿಮೆಂಟ್‌ ಚರಂಡಿಗೆ ಪಲ್ಟಿಯಾಗಿದೆ. ನಾಗೇಶ್‌ ಅವರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಜುನಾಥ ಅವರಿಗೆ ತರಚಿದ ಗಾಯಗಳಾಗಿವೆ. ಪಿಕಪ್‌ ಚಾಲಕ ಸುನಿಲ್‌ ಕೂಡ ಗಾಯಗೊಂಡಿದ್ದಾರೆ. ಮೂರೂ ವಾಹನಗಳು ಜಖಂಗೊಂಡಿವೆ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!
Scroll to Top