ಕುಲುಮೆಯಲ್ಲಿ ಅರಳಿದ ಸಂಸಾರ : ಜಾಂಬೂರಿಯಲ್ಲಿ ಗಮನಸೆಳೆದ ಬೈಲೂರಿನ ದಂಪತಿಯ ಕಮ್ಮಾರಿಕೆ

✒️ ನಳಿನಿ‌ ಎಸ್. ಸುವರ್ಣ

ಕಾಯಕವೇ ಕೈಲಾಸ ಎನ್ನುತ್ತಾ ಕಬ್ಬಿಣಕ್ಕೆ ವಿವಿಧ ರೂಪಕೊಟ್ಟು ಜೀವನ ಸಾಗಿಸುತ್ತಿರುವವರೇ ಬೈಲೂರಿನ ಯರ್ಲಪಾಡಿ ಗ್ರಾಮದ ಕಾಂತರಗೋಳಿ ದಾಮೋದರ ಆಚಾರ್ಯ ಮತ್ತು ಪುಷ್ಪಾವತಿ ಡಿ. ಆಚಾರ್ಯ ದಂಪತಿ. ಕಮ್ಮಾರಿಕೆಯಿಂದ ಬರುವ ಆದಾಯವೇ ಇವರ ಸಂಸಾರದ ಪ್ರಮುಖ ಆಸರೆಯಾಗಿದೆ.

23 ವರ್ಷಗಳಿಂದ ಕಮ್ಮಾರಿಕೆಯಲ್ಲೆ ಜೀವನ

23 ವರ್ಷಗಳ ಹಿಂದೆ ಮೂಡುಬಿದಿರೆಯಲ್ಲಿ ಮರದ ಕೆಲಸ ಮಾಡುತ್ತಿದ್ದ ಇವರು ತಮ್ಮ ಊರಿಗೆ ಹಿಂತಿರುಗಿದ ಸಂದರ್ಭ ಅಲ್ಲಿ ಮರದ ಕೆಲಸಕ್ಕೆ ಪ್ರಾಶಸ್ತ್ಯ ಕಮ್ಮಿಯಾಗಿದ್ದು ಜೀವನದ ಆಸರೆಯಾಗಿ ಕಮ್ಮಾರಿಕೆಯ ಕೆಲಸವನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಕಮ್ಮಾರಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ.

ವಿವಿದ ಮೇಳಗಳಲ್ಲಿ ಗಮನಸೆಳೆದ ಕುಲುಮೆ

2009ರಲ್ಲಿ ಬಜಗೋಳಿಯಲ್ಲಿ ನಡೆದ ಕೃಷಿಮೇಳದಲ್ಲಿ ಮೊದಲ ಬಾರಿಗೆ ಇವರು ಕಬ್ಬಿಣದ ಸ್ಟಾಲ್ ಹಾಕಿದ್ದರು. ಅಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿದ್ದರಿಂದ ನಂತರ ವಿವಿದ ಮೇಳಗಳಲ್ಲಿ ಸ್ಟಾಲ್ ಹಾಕಿ ಅಲ್ಲೆ ಕಮ್ಮಾರಿಕೆ ಮಾಡುವ ಮೂಲಕ ಜನಮನ ಸೆಳೆದಿದ್ದಾರೆ. 2017 ರಲ್ಲಿ ಸುಮಾರು 13 ಕ್ಯಾಂಪ್‌ಗಳಲ್ಲಿ ಇವರು ತಮ್ಮ ಕಬ್ಬಿಣದ ಸಲಕರಣೆಗಳ ಸ್ಟಾಲ್ ಹಾಕಿರುವುದು ಗಮನಾರ್ಹವಾದುದಾಗಿದೆ. ಈ ಬಾರಿ ಆಳ್ವಾಸ್ ಆವರಣದಲ್ಲಿ ನಡೆಯುತ್ತಿರುವ ಅಂತರಾಷ್ಟೀಯ ಸಾಂಸ್ಕೃತಿಕ ಜಾಂಬೂರಿಯ ಕೃಷಿ ಮೇಳದಲ್ಲಿ ಇವರು ಸ್ಟಾಲ್ ಹಾಕಿದ್ದು ಜನರ ಗಮನ ಸೆಳೆದಿದೆ.

ಇಡೀ ಸಂಸಾರವೇ ಇವರ ಕಾಯಕದಲ್ಲಿ ಜೊತೆಯಾಗಿದ್ದು, ಪ್ರತಿ ಕಡೆಯಲ್ಲೂ ಈ ದಂಪತಿಗಳೊಂದಿಗೆ ಮಗಳು ಧನ್ಯಶ್ರೀ, ಮೊಮ್ಮಗ ಹರ್ಷಿತ್, ಅಮಿತ್ ಎಂಬ ಸಹಾಯಕ ಹಾಗೂ ಮಾಮು ಮತ್ತು ಬೊಲ್ಲ ಎಂಬ ಎರಡು ಶ್ವಾನಗಳನ್ನು ಕಾಣಬಹುದು. ಕುಲುಮೆಯಲ್ಲಿ ತೊಡಗಿರುವ ಸಂದರ್ಭ ರೇಡಿಯೋ ಆಲಾಪನೆಯ ವಿಶೇಷತೆಯಾಗಿದೆ. 40ರಿಂದ 1,150 ರೂಪಾಯಿಯವರೆಗಿನ ಕತ್ತಿ, ಚೂರಿ, ತುರಿಮನೆ ಸೇರಿದಂತೆ ವಿವಿದ ಬಗೆಯ ಕಬ್ಬಿಣದ ಸಲಕರಣೆಗಳು ಮೇಳಗಳಲ್ಲಿ ಮಾರಾಟಮಾಡುತ್ತಾರೆ.

ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸುವಿಕೆ

ಪ್ರತಿನಿತ್ಯದ ದುಡಮೆಯಿಂದಲೇ ಜೀವನ ಸಾಗಿಸುವ ಈ ದಂಪತಿ ಸಾಮಾಜಿಕ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೈಲೂರು ಹಿರ್ಗಾನ ರಸ್ತೆಯು ಅನೇಕ ವರ್ಷಗಳಿಂದ ದುರಸ್ಥಿಯಾಗದೆ ಗುಂಡಿಗಳಿAದ ತುಂಬಿದ್ದ ಕಾಲದಲ್ಲಿ ಈ ದಂಪತಿ ಕಲ್ಲು ಮಣ್ಣುಗಳನ್ನು ತುಂಬುವ ಕರಸೇವೆ ಮಾಡುತ್ತಿದ್ದರು. ಇವರ ಈ ಸತ್ಕಾರ್ಯಕ್ಕೆ ಜನರಿಂದ ವ್ಯಾಪಕ ಪ್ರಶಂಸೆಯು ದೊರೆತಿತ್ತು. ಪ್ರಸ್ತುತ ಈ ರಸ್ತೆ ಗ್ರಾಮ ಸಡಕ್ ಯೋಜನೆಯಲ್ಲಿ ಅನುದಾನ ಮಂಜೂರಾಗುವ ಮೂಲಕ ಅಭಿವೃದ್ಧಿ ಹೊಂದಿದೆ.

ಈ ದಂಪತಿಗಳ ಕಾಯಕ ಜೀವನಕ್ಕೆ ವಿವಿದೆಡೆಯಿಂದಲೂ ಪ್ರಶಂಸೆ ದೊರೆಯುತಿದೆ. 2020 ರಲ್ಲಿ ಮಂಗಳೂರು ಕಲ್ಕೂರ ಪ್ರತಿಷ್ಠಾನದ ವತಿಯಂದ ನಡೆದ ಪೇಜಾವರ ವಿಶ್ವೇಶತೀರ್ಥ ನಮನ ಕಾರ್ಯಕ್ರಮದಲ್ಲಿ ಜೀವಮಾನ ಸಾಧನಾ ದಂಪತಿ ಪ್ರಶಸ್ತಿ ದೊರೆತಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಗುರುತಿಸುವಿಕೆ ಹೀಗೆ ವಿವಿಧ ಸಂಘ ಸಂಸ್ಥೆ, ಸಭೆ ಸಮಾರಂಭಗಳಲ್ಲೂ ಗುರುತಿಸಿ ಗೌರವಿಸಿದ್ದಾರೆ.





























































































































error: Content is protected !!
Scroll to Top