ಡಿ.28 : ದ. ಕ. ಮತ್ತು ಉಡುಪಿ ಜಿಲ್ಲೆಯ ಸಮಸ್ತ ಜೈನ ಸಮುದಾಯದವರಿಂದ ಮೌನ ಮೆರವಣಿಗೆ

ಉಡುಪಿ : ಇಡೀ ಜಗತ್ತಿನ ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿಯನ್ನು ಅಲ್ಲಿನ ಜಾರ್ಖಂಡ್ ರಾಜ್ಯ ಸರಕಾರ ಪ್ರವಾಸಿ ತಾಣ ಮಾಡಲು ಆದೇಶಿಸಿದೆ. ಜೈನ ಸಂಪ್ರದಾಯದಂತೆ ಈ ಕ್ಷೇತ್ರವು ಭೂತಕಾಲ- ವರ್ತಮಾನ ಮತ್ತು ಭವಿಷ್ಯತ್ ಕಾಲದ ಎಲ್ಲಾ ತೀರ್ಥಂಕರರು ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುವ ಶಾಶ್ವತ ಸಿದ್ಧ ಕ್ಷೇತ್ರವಾಗಿರುತ್ತದೆ. ವರ್ತಮಾನ ಕಾಲದ 24 ತೀರ್ಥಂಕರರ ಪೈಕಿ 20 ಜನ ತೀರ್ಥಂಕರರು ಈ ಬೆಟ್ಟದ ಮೇಲೆ ಸಿದ್ಧ ಪದವಿ ಪ್ರಾಪ್ತಿ ಮಾಡಿರುತ್ತಾರೆ. ಆದಿವಾಸಿಗಳಿಂದ ತುಂಬಿದ ಅಲ್ಲಿನ ಸ್ಥಳೀಯ ಜನರು ಕೂಡ ಈ ತೀರ್ಥ ಕ್ಷೇತ್ರಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿರುವುದು ವಿಶೇಷ.
ಜಾರ್ಖಂಡ್ ರಾಜ್ಯ ಸರಕಾರದ ನಿಲುವಿನಿಂದ ಅಲ್ಪಸಂಖ್ಯಾತ ಜೈನರ ಭಾವನೆಗಳಿಗೆ ಧಕ್ಕೆಯಾಗಿದೆ. ಜೈನರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ ಅನಾದಿಕಾಲದಿಂದ ಇರುವ ಪುಣ್ಯಭೂಮಿಯ ಪಾವಿತ್ರ್ಯತೆಯನ್ನು ರಕ್ಷಿಸಿ ಈ ಹಿಂದಿನ ಹಾಗೆ ಜೈನರ ಶಾಶ್ವತ ಕ್ಷೇತ್ರವಾಗಿ ಮುಂದಕ್ಕೂ ಅವಕಾಶ ಮಾಡಿಕೊಡುವಂತೆ ಮತ್ತು ಈಗಾಗಲೇ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ದೇಶಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ಭಾರತದ ರಾಷ್ಟ್ರಪತಿಗಳಿಗೆ, ಪ್ರಧಾನಮಂತ್ರಿಗಳಿಗೆ ಹಾಗೂ ಜಾರ್ಖಂಡ್ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುವ ಸಲುವಾಗಿ ಮೌನ ಮೆರವಣಿಗೆಯನ್ನು ಡಿ.28ರಂದು ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿದೆ.
ಜೈನಕಾಶಿ ಮೂಡುಬಿದಿರೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಶ್ರಾವಕ-ಶ್ರಾವಿಕೆಯರು ಒಟ್ಟು ಸೇರಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಮತ್ತು ಮೂಡಬಿದಿರೆ ಶ್ರೀ ಜೈನ ಮಠದ ಭಾರತಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ತಾಲೂಕು ಆಡಳಿತದ ಮುಖ್ಯಸ್ಥರ ಮೂಲಕ ಮೂಡುಬಿದಿರೆಯ ವಿಶ್ವಪ್ರಸಿದ್ಧ ತಿಭುವನತಿಲಕ ಚೂಡಾಮಣಿ ಬಸದಿಯಿಂದ (ಸಾವಿರಕಂಬದ ಬಸದಿ) ಮೌನ ಮೆರವಣಿಗೆಯನ್ನು ಮೂಡುಬಿದಿರೆಯ ಸ್ವರಾಜ್ಯ ಮೈದಾನದ ತನಕ ಹಮ್ಮಿಕೊಳ್ಳಲಾಗಿದೆ. ಸಮ್ಮೇದ ಶಿಖರ್ಜಿ ಬಚಾವೋ ಎಂಬ ಶೀರ್ಷಿಕೆಯೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಧರ್ಮಬಂಧುಗಳು ಸೇರಿ ಪವಿತ್ರ ತೀರ್ಥಕ್ಷೇತ್ರಗಳನ್ನು ಮೋಜು-ಮಸ್ತಿ ಕೇಂದ್ರಗಳನ್ನಾಗಿ ಪರಿವರ್ತಿಸದಂತೆ ಒತ್ತಾಯಿಸಿ, ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಯವರಿಗೆ ಅಂತರ್ದೇಶೀಯ ಪತ್ರ ಬರೆಯುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಮಸ್ತ ಜೈನ ಭಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕಾರ್ಕಳ ತಾಲೂಕಿನ ಸಮಸ್ತ ಜೈನ ಶ್ರಾವಕ ಶ್ರಾವಿಕೆಯರು ಮತ್ತು ಪುರೋಹಿತ ವರ್ಗ ಹಾಗೂ ಎಸ್. ಪಾರ್ಶ್ವನಾಥ ವರ್ಮ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.





























































































































error: Content is protected !!
Scroll to Top