ಧ್ಯಾನ, ಸೌಹಾರ್ದತೆ , ಸೇವಾ ಧರ್ಮದ ಪ್ರತೀಕ ರಮ್ಜಾನ್‌

ಇಸ್ಲಾಮಿಕ್ ಕ್ಯಾಲೆಂಡರ್‌ ಒಂಬತ್ತನೆಯ ತಿಂಗಳು ರಮ್ಜಾನ್‌. ಮುಸ್ಲಿಂ ಬಾಂಧವರಿಗೆ ಇದು ಪವಿತ್ರವಾದ ತಿಂಗಳು. ಈ ತಿಂಗಳು ದೇವರ ಧ್ಯಾನದಲ್ಲಿದ್ದು, ಹಗಲು ಉಪವಾಸ ಮಾಡುವುದರಿಂದ ಮುಸ್ಲಿಮರು ಮುಂದಿನ ಮೆಕ್ಕಾ ಯಾತ್ರೆಗೆ ಸಿದ್ಧತೆ ನಡೆಸುತ್ತಾರೆ.
ಮುಸ್ಲಿಂ ನಂಬಿಕೆಗಳ ಪ್ರಕಾರ ದೇವತೆಗಳ ಪ್ರತಿನಿಧಿಯಾದ ಗೇಬ್ರಿಯಲ್ ಸ್ಪರ್ಶದಿಂದ ಭೂಮಿಗೆ ಇಳಿದು ಬಂದು ದೇವವಾಣಿಯಾದ ಕುರಾನ್ ನ್ನು ಪ್ರವಾದಿ ಮಹಮ್ಮದ್‌ ಅವರಿಗೆ ಪರಿಚಯ ಮಾಡಿದ ಸಂಕೇತವಾಗಿ 29 ರಿಂದ 30 ದಿನ ಉಪವಾಸವೃತ ಕೈಗೊಳ್ಳುತ್ತಾರೆ. ಇದರಿಂದ ಸ್ವಯಂ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಅವರ ನಂಬಿಕೆ.
ರಮ್ಜಾನ್‌ ಹಬ್ಬವನ್ನು ಜಗತ್ತಿನಾದ್ಯಂತ ಮುಸ್ಲಿಮರು ಅತಿಶಯ ಸಂಭ್ರಮದಿಂದ ಆಚರಿಸುತ್ತಾರೆ. ಪ್ರವಾದಿ ಮಹಮ್ಮದರಿಗೆ ಕುರಾನ್ ಮೂಲಕ ದೊರೆತ ಜ್ಞಾನದ ಸಂಕೇತವೇ ಈ ಹಬ್ಬ. ಈ ಉಪವಾಸದ ಜೊತೆಗೆ ಮಾನಸಿಕ ಸಿದ್ಧತೆಗಾಗಿ ಧ್ಯಾನ, ಖುರಾನ್‌ ಪಠಣ, ದುರಾಭ್ಯಾಸಗಳ ವರ್ತನೆ, ಕುಡಿತ – ಜೂಜುಗಳನ್ನು ತ್ಯಜಿಸುವುದು, ಧೂಮಪಾನವೂ ನಿಷಿದ್ಧವಾಗಿದ್ದು, ಇವುಗಳಿಂದ ಪ್ರತಿಯೊಬ್ಬ ಮುಸ್ಲಿಮರು ಮಾನಸಿಕವಾಗಿ ದೃಢರಾಗುತ್ತಾರೆ. ಉಪವಾಸವನ್ನು ತ್ಯಜಿಸುವ ಸಂಜೆಯ ಉಪಹಾರವನ್ನು ʼಇಫ್ತಾರ್‌ʼ ಎಂದು ಕರೆಯುತ್ತಾರೆ.
ರಮ್ಜಾನ್‌ ಹಬ್ಬ ತ್ಯಾಗದ ಪ್ರತೀಕವೂ ಆಗಿದೆ. ಹಬ್ಬದ ದಿನ ಮುಸ್ಲಿಮರು ಹಸಿದವರಿಗೆ, ಬಡವರಿಗೆ, ದಾನವನ್ನು ಮಾಡಿಯೇ ಮಾಡುತ್ತಾರೆ. ತನ್ನ ಸಂಪಾದನೆಯ ಆರನೇ ಒಂದು ಭಾಗವನ್ನು ಬಡವರಿಗೆ, ಅಶಕ್ತರಿಗೆ, ಅಸಹಾಯಕರಿಗೆ ಸಮರ್ಪಿಸುವ ಸಂಕಲ್ಪವು ಮುಸ್ಲಿಮರಿಗೆ ಧರ್ಮಾದೇಶವಾಗಿ ಬಂದಿರುತ್ತದೆ. ನಿನ್ನ ಮನೆಯ ಮುಂದೆ ಒಬ್ಬ ಹಸಿದವನು ನಿಂತಿರುವಾಗ ನೀನು ಊಟ ಮಾಡುವುದು ತಪ್ಪು ಎಂದು ಕುರಾನ್‌ ಹೇಳಿದೆ. ಬೆಳಗ್ಗೆ ಉಪವಾಸ ಆರಂಭ ಆಗುವ ಮೊದಲು ತೆಗೆದುಕೊಳ್ಳುವ ಉಪಾಹಾರವನ್ನು ʼಸುಹೂರ್‌ʼ ಎಂದು ಕರೆಯುತ್ತಾರೆ. ಹಸಿವು ತ್ಯಜಿಸುವಾಗ ಅರೇಬಿಕ್‌ ದೇಶಗಳ ಆಹಾರವಾದ ಖರ್ಜೂರ ಹಣ್ಣನ್ನು ಸೇವಿಸುವ ಮೂಲಕ ಸಾಮೂಹಿಕ ಪ್ರಾರ್ಥನೆಗೆ ಮುಸ್ಲಿಮರು ತೊಡಗುತ್ತಾರೆ. ಖರ್ಜೂರದ ಜೊತೆಗೆ ಹಾಲು, ಹಣ್ಣಿನ ರಸಗಳಿಂದ ಕೂಡಿದ ಉಪಾಹಾರವನ್ನು ಸಾಮೂಹಿಕವಾಗಿ ಮುಸ್ಲಿಮರು ತೆಗೆದುಕೊಳ್ಳುತ್ತಾರೆ.
ಮುಸ್ಲಿಮರು ಮಾಡುವ ದಾನ ಕಾಯಕವು ರಮ್ಜಾನ್‌ನ ವಿಶೇಷವಾಗಿದ್ದು, ಅದನ್ನು ʼಜಕಾತ್‌ʼ ಎಂದು ಕರೆಯುತ್ತಾರೆ. ಮುಸ್ಲಿಮರು ತನ್ನ ದಾನ ಕಾರ್ಯದ ಬಹು ದೊಡ್ಡ ಭಾಗವನ್ನು ರಮ್ಜಾನ್‌ ತಿಂಗಳಿನಲ್ಲಿಯೇ ಮಾಡುತ್ತಾರೆ. ಕುರಾನ್‌ನಲ್ಲಿ 30 ಅಧ್ಯಾಯಗಳಿದ್ದು, ರಮ್ಜಾನ್‌ ತಿಂಗಳಿನಲ್ಲಿ ದಿನಕ್ಕೆ ಒಂದರಂತೆ ಅಧ್ಯಾಯವನ್ನು ಓದಿ ಮನನ ಮಾಡಿಕೊಳ್ಳುವ ಕ್ರಮವೂ ಜಾರಿಯಲ್ಲಿದೆ.
ಪ್ರತಿಯೊಬ್ಬ ಶ್ರದ್ಧಾವಂತ ಮುಸ್ಲಿಮನು ತಾನು ನಡೆಸುವ ಆರು ಕರ್ತವ್ಯಗಳಲ್ಲಿ ಕೂಡಾ ಸಮಾಜವನ್ನು ಬಲಪಡಿಸುವ, ತಿದ್ದುವ ಆಶಯಗಳಿವೆ. ಕುರಾನ್‌ನ ಪ್ರತಿಯೊಂದು ವಾಕ್ಯ ಕೂಡಾ ಧ್ವನಿಪೂರ್ಣವಾಗಿದ್ದು ಸಮಾಜ, ರಾಷ್ಟ್ರ, ಜಗತ್ತಿನ ಉದಾತ್ತ ಆಶಯಗಳಿಗೆ ಪೂರಕವಾಗಿ ಇರುತ್ತದೆ. ವಿಶ್ವಶಾಂತಿಯ ಕಡೆಗೆ ಮಾನವ ಸಹೋದರತೆಗೆ ಪೂರಕವಾದ ಸಂದೇಶಗಳು ನಮಗೆ ಕುರಾನ್‌ನಲ್ಲಿ ಹೆಜ್ಜೆ ಹೆಜ್ಜೆಗೂ ದೊರೆಯುತ್ತದೆ. ಪ್ರವಾದಿ ಮಹಮ್ಮದರ ಬದುಕು – ಸಂದೇಶಗಳು ಕೂಡಾ ವಿಶ್ವಶಾಂತಿಗೆ ಪೂರಕವಾಗಿರುತ್ತದೆ. ಈ ಸಂದೇಶಗಳು‌ ರಮ್ಜಾನ್‌ ತಿಂಗಳಲ್ಲಿ ಪ್ರತಿಫಲವಾಗಿ ಜಗತ್ತಿಗೆ ಉತ್ತಮವಾದ ಸಹೋದರತೆಯ ಸಂದೇಶಗಳು ದೊರೆಯಲಿ ಎನ್ನುವುದು ಈ ರಮ್ಜಾನ್‌ ಹಬ್ಬದ ಸಂದೇಶವಾಗಿದೆ.
ನಮ್ಮೆಲ್ಲಾ ಮುಸ್ಲಿಂ ಓದುಗರಿಗೆ ಪವಿತ್ರ ರಮ್ಜಾನ್‌ ಹಬ್ಬದ ಶುಭಾಶಯಗಳು.

































































































error: Content is protected !!
Scroll to Top