ಅಂಗೈಯಲ್ಲಿ ಅರಮನೆ ತೋರಿಸುವ “ಭವಿಷ್ಯ”ಗಳು

ಕನ್ನಡದ ಜನಪ್ರಿಯ ಧಾರಾವಾಹಿಯೊಂದರಲ್ಲಿ ಹೀಗೊಂದು ಕತೆ ಬರುತ್ತದೆ. ವಿದ್ಯುನ್ಮಾನ ವಾಹಿನಿಯಲ್ಲಿ ಭವಿಷ್ಯ ಹೇಳುವ “ಗುರುಗಳು” ಯಾವುದೋ ಒಂದು ಸಂಸ್ಥೆಯಿಂದ ದೊಡ್ಡ ಮೊತ್ತದ “ದಕ್ಷಿಣೆಯನ್ನು” ಪಡೆದುಕೊಂಡು ಆ ಸಂಸ್ಥೆಯು ಉತ್ಪಾದಿಸುವ ಒಂದು ಉತ್ಪನ್ನದ ಬಗ್ಗೆ ಪರೋಕ್ಷವಾಗಿ ಪ್ರಚಾರ ಮಾಡುತ್ತಾರೆ. ಪ್ರಶ್ನೆ ಕೇಳುವ ದೂರವಾಣಿ ಕರೆಯೊಂದಕ್ಕೆ ಉತ್ತರವಾಗಿ ಸಮಸ್ಯೆಯ ನಿವಾರಣೆಗೆ ‘ಆ’ ಉತ್ಪನ್ನವನ್ನು ಉಪಯೋಗಿಸಲು ಸಲಹೆ ನೀಡುತ್ತಾರೆ. ಕೆಲವು ದಿನಗಳ ನಂತರ ಅದೇ ವ್ಯಕ್ತಿಯಿಂದ ಪುನಃ ಕರೆ ಬರುತ್ತದೆ, ಹಾಗೂ ಅವರ ಸಲಹೆಯಿಂದ ತನಗೆ ತುಂಬಾ ಉಪಯೋಗವಾಗಿದೆಯೆಂದು ಒತ್ತಿ ಒತ್ತಿ ಹೇಳಲಾಗುತ್ತದೆ. ವಾಸ್ತವವಾಗಿ ಕರೆ ಮಾಡಿರುವುದು, ಉತ್ತರ ಎಲ್ಲವೂ ಪ್ರಾಯೋಜಿತ. ಆದರೆ ಇದೆಲ್ಲವನ್ನೂ ನಿಜವೆಂದು ನಂಬಿದ ಗುರುಗಳ ಭಕ್ತರು ಉತ್ಪನ್ನವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಲು ಮುಂದಾಗುತ್ತಾರೆ. ಅದರಿಂದ ಉಪಯೋಗವಾಯಿತೋ ಇಲ್ಲವೋ ಅದು ಬೇರೆ ವಿಷಯ, ಆದರೆ ಗುರುಗಳ ಬಾಯಿಯಿಂದ ಬಂದ ಮೇಲೆ ಮುಗಿಯಿತು. ಅದು ವೇದವಾಕ್ಯ. ಉತ್ಪನ್ನಕ್ಕೆ ಒಳ್ಳೆಯ ಮಾರುಕಟ್ಟೆ, ಲಾಭವೋ ಲಾಭ. ಇಂತವರಿಂದಾಗಿಯೇ ಉನ್ನತ ಮೌಲ್ಯಗಳನ್ನು ಹೊಂದಿರುವ ಜ್ಯೋತಿಷ್ಯ ಇಂದು ವ್ಯಾಪಾರದ ಸರಕಾಗಿದೆ.
ಇನ್ನಷ್ಟು ಉದಾಹರಣೆಗಳನ್ನು ನೋಡಿ.
-ಯಾವುದಾದರೂ ಪ್ರಮುಖ ರಾಜಕಾರಣಿಗೆ, ಕ್ರೀಡಾಪಟು, ಚಿತ್ರನಟ/ನಟಿಗೆ ಭಾರೀ ಗಂಡಾಂತರವಿದೆಯೆಂದೂ, ಅದರ ನಿವಾರಣೆಗೆ ಇಂತಹುದೇ ದೇವಸ್ಥಾನದಲ್ಲಿ ನಿರ್ದಿಷ್ಟ ಪೂಜೆ-ಹೋಮ ಇತ್ಯಾದಿ ಮಾಡಿಸಬೇಕೆಂದು ಅಪ್ಪಣೆ ಕೊಡಿಸುತ್ತಾರೆ. ಅವರ ಅಭಿಮಾನಿಗಳು ದೇವಸ್ಥಾನದ ವಿಳಾಸ, ದೂರವಾಣಿ ಮೊದಲಾದ ವಿವರಗಳಿಗಾಗಿ ದೂರವಾಣಿ ಕರೆ ಮಾಡಲು ಆರಂಭಿಸುತ್ತಾರೆ. ಹೀಗೆ ಮಾಡುವುದರಿಂದ ದೇವಸ್ಥಾನಕ್ಕೆ ಒಳ್ಳೆಯ ಆದಾಯ, ಇದನ್ನು ಮಾಡಿಸಲು ಪ್ರೇರೇಪಿಸಿದವರಿಗೆ ಒಂದಿಷ್ಟು “ಕಾಣಿಕೆ” ಸಲ್ಲುತ್ತದೆ.
-ಜೇನುತುಪ್ಪದಿಂದ ಅಭಿಷೇಕ ಮಾಡಿಸಿ, ಇನ್ನೊಂದು, ಮತ್ತೊಂದು ರೀತಿಯ ಸೇವೆ ಮಾಡಿಸಿ ಇಂತಹ ಹಲವಾರು ಸಲಹೆಗಳು. ಸೇವೆ ಮಾಡಿಸಿ ಎಂದರೆ ಒಪ್ಪಬಹುದು, ಆದರೆ ಇಂತಹುದೇ ದೇವಸ್ಥಾನದಲ್ಲಿ ಹೀಗೆಯೇ ಮಾಡಿಸಲು ಹೇಳುವುದರ ಹಿಂದಿನ ಹುನ್ನಾರ ಕೇವಲ ಮಾರಾಟ ತಂತ್ರವಲ್ಲವೇ?
-ಜ್ಯೋತಿಷಿಯೊಬ್ಬರು 2012ರ ಡಿಸೆಂಬರ್ ತಿಂಗಳ ಒಂದು ನಿರ್ದಿಷ್ಟ ದಿನ ಪ್ರಳಯವಾಗುತ್ತದೆ ಎಂದು ಘೋಷಣೆ ಮಾಡಿದರು‌. ಆದರೆ ಮನುಷ್ಯ ಜೀವಿ ನಶಿಸುವುದಿಲ್ಲವೆಂದೂ ಸೇರಿಸಿದರು. ಅದು ಹೇಗೆ ಸಾಧ್ಯವೆಂದು ಒಬ್ಬರು ಪ್ರಶ್ನೆ ಕೇಳಿದಾಗ ಅವರ ಉತ್ತರ: ನಾನೊಬ್ಬ ಬದುಕುತ್ತೇನೆ. ನನಗಾಗಿ ದೇವರು ಒಂದು ದೈವಿಕ ನೌಕೆಯನ್ನು ಕಳುಹಿಸುತ್ತಾರೆ ಎಂದೆಲ್ಲಾ ಬುರುಡೆ ಬಿಡುತ್ತಾರೆ. ಆದರೆ ಈ ಭವಿಷ್ಯ ಹೇಳಿದ ಭೂಪತಿ ಬ್ರಹ್ಮಚಾರಿ! ಆತನನ್ನು ಮಾತ್ರ ಉಳಿಸಿ ಮಾನವ ಸಂತತಿ ಪುನರ್ ನಿರ್ಮಾಣವಾಗುವುದು ಹೇಗೆಂದು ಯಾರೂ ಕೇಳಲಿಲ್ಲವೋ ಅಥವಾ ಪ್ರಶ್ನೋತ್ತರ ಪ್ರಸಾರವನ್ನು ಕತ್ತರಿಸಲಾಗಿದೆಯೋ ಗೊತ್ತಿಲ್ಲ‌. ಅವರು ಹೇಳಿದ ಅವಧಿ ಮುಗಿದು ಎಂಟು ವರ್ಷಗಳೇ ಮುಗಿದರೂ ಇನ್ನೂ ಅವರು ಹೇಳಿದಂತಹ ಪ್ರಳಯವಾಗಿಲ್ಲ, ಮನುಜ ಕುಲ ನಶಿಸಿಲ್ಲ.
-ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಟ್ರಂಪ್ ಪುನರಾಯ್ಕೆಯಾಗುತ್ತಾರೆಂದು ಭವಿಷ್ಯ ನುಡಿದರು. ಭಾರತೀಯ ಸಂಸ್ಕೃತಿಯ ಬಗ್ಗೆ ಯಾವುದೇ ಆಸಕ್ತಿಯಾಗಲಿ ಜ್ಞಾನವಾಗಲಿ ಇಲ್ಲದವರಿಗೆ ಇಂತಹ ಭವಿಷ್ಯ ಬಗ್ಗೆ ಹೇಳಿ ಏನಾಗಬೇಕು? ಈಗಂತೂ ನಗುವವರ ಮುಂದೆ ಎಡವಿ ಬಿದ್ದಂತಾಗಿದೆ.
-ವಿಶ್ವದಾದ್ಯಂತ ವಿಪ್ಲವ ಎಬ್ಬಿಸಿದ ಕೊರೊನ ಮಹಾಮಾರಿಯ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿರುವಾಗ, ಇಂತಹುದೇ ದಿನಾಂಕದೊಳಗೆ ಕೊರೊನ ಕಣ್ಮರೆಯಾಗುತ್ತದೆಂಬ ಜ್ಯೋತಿಷಿಗಳ ನುಡಿ ಮುತ್ತುಗಳು ಎಲ್ಲೆಡೆ ಪ್ರಸಾರವಾಗಿದ್ದೂ ಆಯಿತು. ಅವರು ಹೇಳಿದ ಅವಧಿ ಮುಗಿದು ಈಗಾಗಲೇ ಆರು ತಿಂಗಳು ಕಳೆದರೂ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಆಡಿಕೊಳ್ಳುವವರಿಗೆ ಒಳ್ಳೆಯ ಗ್ರಾಸ!
-ವಿದ್ಯುನ್ಮಾನ ವಾಹಿನಿಗಳಲ್ಲಿ ಭವಿಷ್ಯ ನುಡಿಯುವ ಗುರುಗಳು, ತಮ್ಮ ಎದುರಿಗೆ ಇರುವ ಲ್ಯಾಪ್‌ಟಾಪ್ ಮೇಲೆ ತಮ್ಮ ಖಾಸಗಿ ಮೊಬೈಲ್ ಸಂಖ್ಯೆಯನ್ನು ಢಾಳಾಗಿ ಕಾಣಿಸುವಂತೆ ಬರೆಸಿರುತ್ತಾರೆ, ಉದ್ದೇಶ?
-ಇನ್ನೂ ಕೆಲವರು ರಾಜಕೀಯ ಭವಿಷ್ಯ ನುಡಿಯುತ್ತಾರೆ. ಚುನಾವಣಾ ಫಲಿತಾಂಶದ ನಂತರ ಮಾತ್ರ ಅವರು ಒಂದಷ್ಟು ದಿನ ಭೂಗತರಾಗುವುದು ವಾಡಿಕೆ.
-ಕೆಲವು ಜ್ಯೋತಿಷಿಗಳಂತೂ ಪೂರ್ವಾನುಮತಿ ಇಲ್ಲದೆ ಭೇಟಿ ಇಲ್ಲ. ಮಾತ್ರವಲ್ಲದೆ ನಾಲ್ಕಂಕಿಯಷ್ಟು ಶುಲ್ಕವನ್ನು ಮುಂಗಡವಾಗಿ ಪಾವತಿಸಬೇಕು. ಹೀಗೆ ದೈವಿಕ ಮೌಲ್ಯದ ಜ್ಯೋತಿಷ್ಯ ಶಾಸ್ತ್ರ ವ್ಯಾಪಾರದ ಸರಕಾದರೆ ಅದರ ಪಾವಿತ್ರ್ಯ ಎಲ್ಲಿ ಉಳಿಯುತ್ತದೆ?
-ಇಷ್ಟೆಲ್ಲಾ ಎಡವಟ್ಟು ನಡೆಯುತ್ತಿದ್ದರೂ ರಾಜಕೀಯ ಕೃಪಾಪೋಷಿತ ಜ್ಯೋತಿಷ್ಯ ಪ್ರಖಾಂಡ ಪಂಡಿತರು ಮಾತ್ರ ನಿರಾಳವಾಗಿ ವೈಭವದ ಜೀವನ ಸಾಗಿಸುತ್ತಾರೆ. ಕಣ್ಣು ಮುಚ್ಚಿ ಅನುಸರಿಸುವ ಪಾಮರರು ಮಾತ್ರ ಗುಡಿಸಲಲ್ಲೇ ಬದುಕು ಸಾಗಿಸುತ್ತಾರೆ.
ಸಾವಿರಾರು ವರ್ಷಗಳ ಮೊದಲೇ ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳನ್ನು ನಿಖರವಾಗಿ ಹೇಳುವಷ್ಟು ಪ್ರತಿಭಾವಂತರು ಸನಾತನ ಹಿಂದೂ ಧರ್ಮದಲ್ಲಿದ್ದಾರೆ, ಈಗಲೂ ಇದ್ದಾರೆ. ಸುಮಾರು 450 ವರ್ಷಗಳ ಹಿಂದೆ ನ್ಯಾಸ್ಟ್ರೋಡಾಮಸ್ ಒಗಟಿನ ರೂಪದಲ್ಲಿ ಹೇಳಿದ್ದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡು, ಬಹಳ ಹಿಂದೆ ಹೇಳಿದ ಭವಿಷ್ಯವೆಂದು ಒಪ್ಪುತ್ತೇವೆ. ಅದೇ ವೇಳೆ ನಮ್ಮ ದೇಶದಲ್ಲಿ ಅದಕ್ಕೂ ಬಹಳಷ್ಟು ಹಿಂದೆಯೇ ಹೇಳಿದ್ದರೂ ಅದೆಲ್ಲವೂ ವೈಜ್ಞಾನಿಕವಾಗಿ ದೃಢೀಕರಿಸಲ್ಪಡಬೇಕೆನ್ನುವ ನಾವು ನಾಸಾದಂತಹ ಸಂಸ್ಥೆಯವರು ಹೇಳಿದ ಹೊರತು ನಂಬುವುದಿಲ್ಲ. ಆದರೆ ನಮ್ಮ ಪೂರ್ವಜರು ಬರೆದಿಟ್ಟಂತಹ ಗ್ರಂಥಗಳು ಮಾತ್ರ ನಮಗೆ ಅಪಥ್ಯ. ಇದಕ್ಕೆಲ್ಲ ಕಾರಣ ನಮ್ಮವರಲ್ಲಿರುವ ಆತ್ಮವಿಶ್ವಾಸದ ಕೊರತೆ ಮತ್ತು ಪವಿತ್ರವಾದ ಜ್ಯೋತಿಷ್ಯ ಶಾಸ್ತ್ರದ ವ್ಯಾಪಾರೀಕರಣ. ನಮ್ಮಲ್ಲಿ ಬೆಳಕಿಗೆ ಬಾರದ ಎಷ್ಟೋ ಪ್ರತಿಭೆಗಳಿದ್ದರೂ ಅವೆಲ್ಲವೂ ಪ್ರಚಾರವಿಲ್ಲದೆ ಸುಪ್ತವಾಗಿವೆ.ಅಂತವರು ಹೇಳಿರುವುದು ನೂರಕ್ಕೆ ನೂರು ಸತ್ಯವಾದದ್ದಿದೆ. ಏಕೆಂದರೆ ಅದು ನಿಜವಾದ ಮತ್ತು ಪರಿಶುದ್ಧ ಪ್ರಸ್ತುತಿ. ವ್ಯಾಪಾರವಲ್ಲ, ಅಂಗೈಯಲ್ಲಿ ತೋರಿಸುವ ಅರಮನೆಯೂ ಅಲ್ಲ.
ಮೋಹನದಾಸ ಕಿಣಿ, ಕಾಪು
kini.mohandas@gmail.com

ಮೋಹನದಾಸ ಕಿಣಿ, ಕಾಪು














































































error: Content is protected !!
Scroll to Top