ಈ ದೇಶದ ವ್ಯವಸ್ಥೆಯೇ ಹೀಗೆ! ಯಾವುದು ಬೇಕೋ ಅದು ಆಗುವುದಿಲ್ಲ. ಯಾವುದು ಸದ್ಯಕ್ಕೆ ಅಗತ್ಯ ಇಲ್ಲವೋ ಅದು ಆದ್ಯತೆ. ಇಂದು ಸಿಎಂ ಬಿ.ಎಸ್. ಯಡಿಯುರಪ್ಪ ಡಿ.31ರವರೆಗೆ ಶಾಲೆ ಆರಂಭ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ಅಲ್ಲಿಗೆ ಒಂಬತ್ತು ತಿಂಗಳ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿಯಿತು ಎಂದಾಯಿತು. ಈ ಅನಿಶ್ಚಿತತೆ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ದೂಡಿದೆ ಅನ್ನಲು ಅಡ್ಡಿಯಿಲ್ಲ. ಶಿಕ್ಷಣ ಸಚಿವರ ಮಹತ್ವಾಕಾಂಕ್ಷಿ ಯೋಜನೆಯಾದ ವಿದ್ಯಾಗಮ ನಿಂತುಹೋಗಿದೆ. ಆನ್ಲೈನ್ ಕ್ಲಾಸುಗಳು ಹಳ್ಳಿಯ ಮಕ್ಕಳಿಗೆ ತಲುಪಲು ನೂರಾರು ತೊಂದರೆಗಳು.ಹೀಗೆ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ನೂರಾರು ಅಡ್ಡಿಗಳು. ಒಂದು ಕಡೆ ‘ಶೂನ್ಯ ವರ್ಷ’ ಎಂದು ಘೋಷಿಸಿ ಎಂಬ ಸಲಹೆ ಹಲವರಿಂದ! ಅದು ಕಾರ್ಯಸಾಧ್ಯ ಅಲ್ಲ ಎಂದು ಸರಕಾರವೇ ಹೇಳಿದೆ. ಹಾಗೆ ಮಾಡಲು ಸಾಧ್ಯವೇ ಇಲ್ಲ. ಇನ್ನೊಂದು ಸಲಹೆ ಶೈಕ್ಷಣಿಕ ವರ್ಷವನ್ನು ಡಿಸೆಂಬರ್ ನಿಂದ ಡಿಸೆಂಬರ್ ವರೆಗೆ ಮಾಡಿ ಅನ್ನುವುದು. ಅದು ಇನ್ನೂ ಕಷ್ಟ! ಯಾಕಂದ್ರೆ ರಾಷ್ಟ್ರ ಮಟ್ಟದ ಅತಿ ಪ್ರಾಮುಖ್ಯವಾದ ನೀಟ್ ನಂತಹ ಪರೀಕ್ಷೆಗಳು ಇವೆ. ಅದಕ್ಕೆ ನಮ್ಮ ಶೈಕ್ಷಣಿಕ ವರ್ಷ ಹೊಂದಿಕೊಳ್ಳಬೇಕು. SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾಮುಖ್ಯ. ಆದ್ದರಿಂದ ಅದನ್ನು ರದ್ದು ಪಡಿಸಲು ಸಾಧ್ಯವೇ ಇಲ್ಲ. ಡಿಸೆಂಬರ್ ನಂತರ ಶಾಲೆ ಆರಂಭ ಆದರೆ ಅಂತಿಮ ಪರೀಕ್ಷೆ ಯಾವಾಗ? ಸಿಲೆಬಸ್ ಎಷ್ಟು? ಅದನ್ನು ಮುಗಿಸುವುದು ಹೇಗೆ? ತುಂಬ ಮಕ್ಕಳು ಇರುವ ಶಾಲೆಗಳ ವ್ಯವಸ್ಥೆ ಹೇಗೆ? ಪಾಳಿ ಪದ್ಧತಿ ಕಾರ್ಯಸಾಧ್ಯವೇ? ಶಾಲೆಗಳಲ್ಲಿ ಸೋಶಿಯಲ್ ಡಿಸ್ಟೆನ್ಸ್ ಸಾಧ್ಯ ಇದೆಯೇ? ಇವೆಲ್ಲವೂ ಸದ್ಯಕ್ಕೆ ಉತ್ತರ ಸಿಗದ ಜಿಗುಟು ಪ್ರಶ್ನೆಗಳು!
ಈಗಾಗಲೇ ಆರಂಭ ಆಗಿರುವ ಅಂತಿಮ ಪದವಿ ತರಗತಿಗಳು ಹಾಜರಾತಿ ಕೊರತೆಯನ್ನು ಎದುರಿಸುತ್ತಿವೆ. ದೇಶದಾದ್ಯಂತ ಜನವರಿ ಹೊತ್ತಿಗೆ ಅಪ್ಪಳಿಸಲಿರುವ ಕೊರೊನದ ಎರಡನೇ ಅಲೆಯ ಸಾಧ್ಯತೆ ಹೆಚ್ಚುತ್ತಿದೆ. ಆದ್ದರಿಂದ ಸದ್ಯಕ್ಕೆ ಶಾಲೆ ಆರಂಭವಾಗದೆ ಅನಿಶ್ಚಿತತೆ ಮುಂದುವರೆಯಲಿದೆ. ಇದು ವಿದ್ಯಾರ್ಥಿಗಳ ಮತ್ತು ಹೆತ್ತವರ ಆತಂಕವನ್ನು ಹೆಚ್ಚು ಮಾಡಿದೆ. ಕಲಿಕೆಯಲ್ಲಿ ನಿಜವಾದ ಆಸಕ್ತಿ ಇರುವ ಹೆತ್ತವರು ಮತ್ತು ಮಕ್ಕಳು ಸಂದಿಗ್ಧತೆ ಎದುರಿಸುತ್ತಿದ್ದಾರೆ.
ಆದರೆ ಇದೇ ವೇಳೆ ಚುನಾವಣೆ ನಡೆಸಲು ಯಾವುದೇ ಸಮಸ್ಯೆಯಿಲ್ಲ. ನ್ಯಾಯಾಲಯ ಕೂಡ ಚುನಾವಣೆ ನಡೆಸಲೇ ಬೇಕೆಂದು ಹೇಳುತ್ತಿದೆ. ಇತ್ತೀಚೆಗಷ್ಟೇ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. ಸದ್ಯದಲ್ಲೇ ಪಂಚಾಯತ್ ಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಹೀಗೆ ನಮ್ಮ ವ್ಯಸ್ಥೆಯ ನಡೆಗಳೆಲ್ಲ ವಿರೋಧಾಭಾಸಗಳಿಂದ ಕೂಡಿದೆ.
ಶಾಲೆಗಳು ಶುರುವಾಗುವುದನ್ನೇ ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ಸಾವಿರಾರು ಮಕ್ಕಳು ಮತ್ತು ಅವರ ಪೋಷಕರು ಇದ್ದಾರೆ. ಕೆಲವು ಶಾಲೆಗಳು ಇಡೀ ವರ್ಷದ ಶುಲ್ಕ ವಸೂಲು ಮಾಡಿದ್ದೂ ಇದೆ. ಹೀಗೆ ಶುಲ್ಕ ಕಟ್ಟಿದವರು ಕಳವಳದಿಂದಲೇ ದಿನ ದೂಡುತ್ತಿದ್ದಾರೆ. ಇನ್ನೊಂದೆಡೆ ಕೆಲವು ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸುವ ಪ್ರಯತ್ನಗಳನ್ನು ಮಾಡಿವೆ. ಉದಾಹರಣೆಗೆ ಹೇಳುವುದಾದರೆ ಉತ್ತರ ಪ್ರದೇಶದಲ್ಲಿ ಹಲವು ನಿರ್ಬಂಧಗಳೊಂದಿಗೆ ಅಕ್ಟೋಬರ್ ನಿಂದ ಶಾಲೆಗಳು ಶಾಲೆಗಳು ಆರಂಭವಾಗಿವೆ. ಆದರೆ ತೆಲಂಗಾಣದಲ್ಲಿ ಶಾಲೆ ಶುರುವಾದ ಬಳಿಕ ಕೊರೊನ ಪ್ರಕರಣಗಳು ಏರಿಕೆ ಕಂಡಿವೆ. ಹೀಗಾಗಿ ಯಾವ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗದ ಅತಂತ್ರ ಪರಿಸ್ಥಿತಿ ಈಗ ಇದೆ. ಸದ್ಯಕ್ಕೇನೋ ಡಿಸೆಂಬರ್ ತನಕ ಎಂದು ಸರಕಾರ ಹೇಳಿದೆ. ಆದರೆ ಡಿಸೆಂಬರ್ ಮುಗಿದ ಬಳಿ ಅರ್ಥಾತ್ ಹೊಸ ವರ್ಷದಲ್ಲೂ ಕೊರೊನಕ್ಕೆ ಲಸಿಕೆ ಬರುವ, ಬಂದರೂ ಎಲ್ಲರಿಗೂ ಸಿಗುವ ಅಥವಾ ಕೊರೊನ ಮೂಲೋತ್ಪಾಟನೆಯಾಗುವ ಯಾವ ಖಾತರಿಯೂ ಇಲ್ಲ. ಹೀಗಿರುವಾಗ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಗತಿ ಏನು? SSLC, ಪಿಯುಸಿ ದ್ವಿತೀಯ ವರ್ಷ , ಪದವಿ ಅಂತಿಮ ವರ್ಷದಂಥ ನಿರ್ಣಾಯಕ ಘಟ್ಟಗಳ ವಿದ್ಯಾರ್ಥಿಗಳು ಏನು ಮಾಡಬೇಕು? ಹೊಸದಾಗಿ ಪ್ರವೇಶ ಪಡೆದುಕೊಂಡಿರುವ ವಿದ್ಯಾರ್ಥಿಗಳ ಭವಿಷ್ಯವೇನು…? ಹೀಗೆ ಸದ್ಯಕ್ಕೆ ಉತ್ತರ ಬೇಡುವ ಅನೇಕ ಪ್ರಶ್ನೆಗಳು ಇವೆ.
ಸಂಪಾದಕೀಯ- ಆರಂಭವಾಗದ ಶಾಲೆ ಮತ್ತು ಉತ್ತರದ ನಿರೀಕ್ಷೆಯಲ್ಲಿರುವ ಕೆಲವು ಪ್ರಶ್ನೆಗಳು










































