Wednesday, October 27, 2021
spot_img
Homeಸಂವಾದಲಂಚ ಪ್ರಪಂಚ- ಸರಕಾರಿ ನೌಕರಿಯ ಅಗೋಚರ ಸತ್ಯಗಳು

ಲಂಚ ಪ್ರಪಂಚ- ಸರಕಾರಿ ನೌಕರಿಯ ಅಗೋಚರ ಸತ್ಯಗಳು

ಸರ್ಕಾರದಲ್ಲಿ ಯಾವುದೇ ಕೆಲಸವಾಗಬೇಕಾದರೂ ಲಂಚ ಕೊಡಬೇಕೆಂಬುದು ಜನಸಾಮಾನ್ಯರ ಅನಿಸಿಕೆ.  ಲಂಚವೆಂದ ಕೂಡಲೇ ಕಣ್ಣೆದುರು ಮೂಡುವುದು “ಸ್ವಲ್ಪ ತಳ್ಳಿ” ಎಂಬ ಮಾತು  ಮತ್ತು ಮೇಜಿನಡಿಯಿಂದ ಹಣ ಕೊಡುವ ಚಿತ್ರ. ಆದರೆ ಲಂಚವೆಂದರೆ ಕೇವಲ ಹಣ ಮಾತ್ರವಲ್ಲ ಮೇಲ್ನೋಟಕ್ಕೆ ಗೋಚರಿಸದ ಬಹಳಷ್ಟು ಒಳಸುಳಿಗಳಿವೆಯೆಂಬುದನ್ನು ವಿವರಿಸುವ ಮತ್ತು ಧನದಾಹಕ್ಕೂ ಹೊರತಾದ ಅನಿವಾರ್ಯತೆಗಳೇನು? ನಿಜಕ್ಕೂ ಇದರ ಬೇರು ಎಲ್ಲಿದೆ ಎಂಬ ವಿಷಯದಲ್ಲಿ ಒಂದಿಷ್ಟು ಪ್ರಸ್ತುತಿ.

ಸರಕಾರಿ ಕೆಲಸಕ್ಕೆ ಸೇರುವಾಗ ಹೆಚ್ಚಿನವರು ತಾವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂಬ ಮನಸ್ಥಿತಿ ಹೊಂದಿರುತ್ತಾರೆ. ಆದರೂ ವ್ಯವಸ್ಥೆಯ ಪಾಲುದಾರನಾಗುವ, ಅಂತಿಮವಾಗಿ ವ್ಯವಸ್ಥೆಯ ಸುಳಿಯಲ್ಲಿ ಸಿಲುಕಿ ಬದುಕಿಗಾಗಿ ಈಜಾಡಲೇ ಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಹಾಗಂತ ದುಡ್ಡಿನ ಎದುರು ಮಾನವೀಯತೆ ಮರೆತರೆ? ನನಗೆ ಉದ್ಯೋಗ ಸಿಕ್ಕಿದ್ದು ಸಾವು ನೋವಿನ ಪ್ರಕರಣಗಳ ಸುತ್ತಲೂ ಆವರಿಸಿಕೊಂಡು ಮಾನವೀಯತೆಗೆ ಗರಿಷ್ಠ ಪ್ರಾಧಾನ್ಯತೆ ನೀಡಬೇಕಾದ ವೈದ್ಯಕೀಯ ಇಲಾಖೆ ಅಥವಾ ಆಸ್ಪತ್ರೆಯಲ್ಲಿ. ನನ್ನ ಸೇವಾವಧಿಯಲ್ಲಿ ಧನಪಿಶಾಚಿ ಆವರಿಸಿಕೊಂಡು ಮಾನವೀಯತೆ ಸತ್ತಂತೆ ವರ್ತಿಸಿದ ಬಹಳಷ್ಟು ಜನರನ್ನು ಕಣ್ಣಾರೆ ನೋಡಿದ್ದೇನೆ. ಸಾಧ್ಯವಿರುವಲ್ಲೆಲ್ಲ ಪ್ರತಿಭಟಿಸಿ ನೊಂದವರಿಗೆ ಸಹಾಯ ಮಾಡಿದ್ದೇನೆ. ಅಸಹಾಯಕನಾದಾಗ ಮನದಾಳದಲ್ಲಿ ಮರುಗಿದ್ದೇನೆ. ಈ ಅನುಭವಗಳೊಂದಿಗೆ ಬೇರೆ ಇಲಾಖೆಗಳ ಲಂಚಾವತಾರಕ್ಕೆ ಸಂಬಂಧಿಸಿದ ಸ್ವಾನುಭವಗಳನ್ನು, ಕಂಡದ್ದು, ಕೇಳಿದ್ದು ಎಲ್ಲವನ್ನೂ ಸೇರಿಸಿ ಹಂಚಿಕೊಳ್ಳುತ್ತಿದ್ದೇನೆ.

ಎತ್ತರದವರಿಂದ ಆರಂಭಿಸುವುದಾದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳೆಂದರೆ ಪ್ರಜೆಗಳು. ಆದರೆ ಇಲ್ಲಿ ಎತ್ತರವೆಂದರೆಮಂತ್ರಿ ಮಹೋದಯರು. ಅವರು ಲಂಚ ತೆಗೆದುಕೊಳ್ಳುವುದೇ ಇಲ್ಲ, ಅವರ ಆಪ್ತ ಸಹಾಯಕರೂ ತೆಗೆದುಕೊಳ್ಳುವುದಿಲ್ಲ. ಹಾಗಾದರೆ ಅಷ್ಟೆಲ್ಲಾ ಆಸ್ತಿ ಹೇಗೆ ಮಾಡುತ್ತಾರೆ? ಒಂದೆರಡು ಉದಾಹರಣೆ ನೋಡಿ:

-ಸಚಿವರೊಬ್ಬರ ಅತ್ತೆ ಮನೆ ನಮ್ಮೂರ ಸಮೀಪವಿತ್ತು. ಎರಡೋ ಮೂರೋ ತಿಂಗಳಿಗೊಮ್ಮೆ ಸಚಿವರು ಅತ್ತೆ ಮನೆಗೆ ಬಂದು ಹೋಗುವುದು ವಾಡಿಕೆಯಾಗಿತ್ತು, ತಪ್ಪೇನಿಲ್ಲ. ಆದರೆ ಸಚಿವರು ಬರುವಾಗಲೆಲ್ಲಾ ಜೊತೆಯಲ್ಲಿ ಸಹಧರ್ಮಿಣಿಯನ್ನು ಕರೆದುಕೊಂಡು ಬರುತ್ತಿದ್ದರು. ಮಂತ್ರಿಣಿಯವರು ತಾಯಿ ಮನೆಗೆ ಹೋದರೆ ಸಚಿವರು ಪಂಚತಾರಾ ಹೋಟೆಲಿನಲ್ಲಿ. ಕಾರಣ, ಅವರು ಅತ್ತೆ ಮನೆಗೆ ಹೋದರೆ ಸಚಿವರ “ವ್ಯವಹಾರಗಳಿಗೆ ಮುಕ್ತ ವಾತಾವರಣ” ಸಿಗುವುದಿಲ್ಲ ಹಾಗೂ ಸಚಿವರ ಭೇಟಿಗೆ ಬರುವವರ ಆತಿಥ್ಯದ ಹೊರೆ ಅತ್ತೆ ಮನೆಯವರ ಮೇಲೆ ಬೀಳುತ್ತದೆ. ಇಲ್ಲಿ ಯಾರಿಗೆ ಏನು ತೊಂದರೆಯಾಯಿತು ಅನ್ನುತ್ತೀರಾ. ನೋಡಿ,  ಇಂತಹ ಭೇಟಿಯುದ್ದಕ್ಕೂ ಊಟೋಪಚಾರದ ವೆಚ್ಚವನ್ನು ಇಲಾಖೆಯ ಅಧಿಕಾರಿಗಳು ತಮ್ಮ ಕಿಸೆಯಿಂದ ಭರಿಸಬೇಕು. ಕೇವಲ ಸಚಿವರ ವೆಚ್ಚ ಮಾತ್ರವಲ್ಲ,ಸಿಬಂದಿಯವರ ವೆಚ್ಚಗಳನ್ನು ಕೂಡಾ! ನಿಜವಾಗಿ ಇಡೀ ಕಾರ್ಯಕ್ರಮ ಖಾಸಗಿಯಾದರೂ ಇಲಾಖೆಯ ಕಾರ್ಯಕ್ರಮಗಳ ಪರಿಶೀಲನೆಯೆಂಬ ನಾಟಕದ ಮೂಲಕ ಅದನ್ನು ಸರಕಾರಿ ಕಾರ್ಯಕ್ರಮವಾಗಿ ಪರಿವರ್ತಿಸಲಾಗುತ್ತದೆ. ಈ ಮೂಲಕ ಪ್ರಯಾಣ ಭತ್ಯೆ ಮತ್ತಿತರ ಸೌಲಭ್ಯಗಳನ್ನು ಸರಕಾರದ ವತಿಯಿಂದ ಪ್ರತ್ಯೇಕವಾಗಿ ಪಡೆಯಲಾಗುತ್ತದೆ. ಇನ್ನೂ ಕೆಲವು “ಪ್ರಭುಗಳಿಗೆ” ಸ್ನಾನಕ್ಕೆ ಮಿನರಲ್ ವಾಟರ್, ಕರಾವಳಿ ಜಿಲ್ಲೆಗೆ ಬಂದಾಗಲೆಲ್ಲ ದುಬಾರಿ ಮೀನಿನ ಊಟದ “ಉಂಡೂ ಹೋಗುವುದರೊಂದಿಗೆ ದೊಡ್ಡ ಪ್ರಮಾಣದಲ್ಲಿ ಕೊಂಡೂ ಹೋಗಲು” ವ್ಯವಸ್ಥೆ ಮಾಡಬೇಕು! ಇಂತಹ ವ್ಯವಸ್ಥೆಗಳಿಗೆ ಬೇಕಾದ ಹಣವನ್ನು ಯಾವುದಾದರೂ ಗುತ್ತಿಗೆದಾರರ/ ಪೂರೈಕೆದಾರರ ಜೇಬಿನಿಂದ ತಾನೇ ವಸೂಲಿ ಮಾಡಬೇಕು? ಇಲ್ಲಿ ಲಂಚ ಪಡೆದವರು ಯಾರು? ನಾವೋ? ಸಚಿವರೋ? ಈ ತರಹದ “ಹಿರಿಯಕ್ಕನ ಚಾಳಿ” ಉನ್ನತ ಅಧಿಕಾರಿಗಳಲ್ಲೂ ಇದೆ. ಸರಕಾರದ ಕಾರ್ಯದರ್ಶಿ/ನಿರ್ದೇಶಕರ ಮಕ್ಕಳು ಕರಾವಳಿ ಜಿಲ್ಲೆಯ ಕಾಲೇಜಿನಲ್ಲಿ ಉನ್ನತ ಶಿಕ್ಷಣಕ್ಕೆ ಸೇರುತ್ತಾರೆ. ಅವರನ್ನು ಆಗಿಂದಾಗ್ಗೆ ಭೇಟಿಯಾಗಲು ಬರುವ ಅಧಿಕಾರಿಗಳು ಇಲಾಖೆಯ ಕಚೇರಿಗೆ ಭೇಟಿ ನೀಡಿ ಪರಿಶೀಲನೆಯ ನಾಟಕ ಮಾಡಿ ಸರ್ಕಾರದ ವೆಚ್ಚದಲ್ಲಿ ಪ್ರಯಾಣ ಭತ್ಯೆ ಕೂಡಾ ಪಡೆಯುತ್ತಾರೆ, ಆದರೆ ಅವರ ಖರ್ಚು ವೆಚ್ಚ ಅಧಿಕಾರಿಗಳ ತಲೆ ಮೇಲೆ.

– ಸಚಿವರೊಬ್ಬರು ಇಲಾಖೆಯ ಪರಿಶೀಲನೆ ಮುಗಿಸಿ, ಕಾಫಿ ಸವಿಯುವಾಗ ಸ್ಥಳೀಯ ಶಾಸಕರ ಜತೆಗೆ ಲೋಕಾಭಿರಾಮ ಮಾತುಕತೆಗೆ ತೊಡಗುತ್ತಾರೆ. ಸಂಭಾಷಣೆ ಹೀಗಿತ್ತು:”ಮಂತ್ರಿ ಪದವಿ ಸುಮ್ಮನೆ ಸಿಕ್ಕಿಲ್ಲ, ಐದು (ಕೋಟಿ)ಕೊಟ್ಟು ತೆಗೆದುಕೊಂಡಿದ್ದೇನೆ. ಸರಕಾರ ಯಾವಾಗ ಬೀಳುವುದೋ ಗೊತ್ತಿಲ್ಲ, ಅಷ್ಟರಲ್ಲಿ ಬಡ್ಡಿ ಸಹಿತ ವಸೂಲಿ ಮಾಡಬೇಕು”  ಹೇಗೆ? ಯಾವುದೋ ಊರಿನಲ್ಲಿ ಯಾರದೋ ಹೆಸರಿನಲ್ಲಿ ಒಂದು ಮನೆಯ ನಿರ್ಮಾಣ ಆರಂಭವಾಗುತ್ತದೆ. ಕಾಮಗಾರಿಗೆ ಬೇಕಾದ ಮರ, ಸಿಮೆಂಟು, ಉಕ್ಕು ಮೊದಲಾದ ಸಾಮಗ್ರಿಗಳನ್ನು ಯಾರ್ಯಾರೋ ಪೂರೈಸುತ್ತಾರೆ. ಸುಸಜ್ಜಿತ ಮನೆ ರೂಪುಗೊಳ್ಳುತ್ತದೆ. ಮೇಲ್ನೋಟಕ್ಕೆ ಮನೆಗೂ ಸಚಿವರಿಗೂ ಸಂಬಂಧವಿರುವುದಿಲ್ಲ. ಅಧಿಕಾರದ ಅವಧಿ ಮುಗಿದ ನಂತರ ಸಚಿವರ ಕುಟುಂಬದವರು ಸದ್ದಿಲ್ಲದೆ ಮನೆಯೊಳಗೆ ಸೇರಿಕೊಳ್ಳುತ್ತಾರೆ. ಒಂದಿಷ್ಟು ಸಮಯ ಕಳೆದ ಬಳಿಕ  ಮಾಲೀಕತ್ವ ಸಚಿವರ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾವಣೆಯಾಗುತ್ತದೆ. ಹಾಗಾದರೆ ಮನೆ ಕಟ್ಟಲು ಇಷ್ಟೆಲ್ಲಾ ಸಹಾಯ ಮಾಡಿದವರಿಗೇನು ಲಾಭ ಎಂಬ ಪ್ರಶ್ನೆ ಮೂಡಿರಬೇಕಲ್ಲ? ಹೌದು, ಅವರಿಗೆ ಸಂಬಂಧಿಸಿದ ಕಡತಗಳು, ಟೆಂಡರುಗಳು ನಿರಾಯಾಸವಾಗಿ ಮಂಜೂರಾಗುತ್ತಿರುತ್ತದೆ. ಇಲ್ಲಿ ಲಂಚ ತೆಗೆದುಕೊಂಡದ್ದು ಯಾರು?ಉದಾಹರಣೆಗಳನ್ನು ಬರೆಯುತ್ತಾ ಹೋದರೆ ಮಹಾಕಾವ್ಯವೇ ಸೃಷ್ಟಿಯಾದೀತು. ಕೆಲವು ಹೃದಯಹೀನ ವರ್ತನೆಗಳ ಉದಾಹರಣೆಯನ್ನು ನೀಡುವುದಾದರೆ…

-ಬಡ ಮಹಿಳೆಯೊಬ್ಬರ ಗಂಡನಿಗೆ ಅಪಘಾತದಲ್ಲಿ ಕೈ ಮುರಿದಿತ್ತು. ಸಂಬಂಧಿಸಿದವರು ಪ್ಲಾಸ್ಟರ್ ಹಾಕಲು ಹಣ ಕೇಳಿದರು. ಹಣವಿಲ್ಲವೆಂದು ದೈನ್ಯದಿಂದ ಬೇಡಿಕೊಂಡರೆ, ನಿನ್ನ ಮಾಂಗಲ್ಯ ಮಾರಿಯೋ, ಒತ್ತೆಯಿಟ್ಟೋ ಹಣ ಕೊಡು ಎಂದದ್ದನ್ನು ಕೇಳಿದ್ದೇನೆ.

-ಅಂಗವಿಕಲ ಪಿಂಚಣಿ ಪಡೆಯಲು ಸರಕಾರಿ ವೈದ್ಯರ ಪ್ರಮಾಣಪತ್ರ ಬೇಕಾಗುತ್ತದೆ. ಯಾರಾದರೂ ಹಾಸಿಗೆಯಿಂದ ಏಳಲಾಗದ ಸ್ಥಿತಿಯಲ್ಲಿದ್ದರೆ, ಅವರಿದ್ದಲ್ಲಿಗೇ ಹೋಗಿ ಪರೀಕ್ಷಿಸಿ ಪ್ರಮಾಣಪತ್ರವನ್ನು ನೀಡಬೇಕೆಂದು ಆದೇಶವಿದೆ. ಇಂತವರಿಂದಲೂ ಹಣ ವಸೂಲಿ ಮಾಡಿದ ನಂತರವೇ ಪ್ರಮಾಣ ಪತ್ರ ಕೊಟ್ಟಂತಹವರನ್ನು ನೋಡಿದ್ದೇನೆ.

-ಮರಣೋತ್ತರ ಶವ ಪರೀಕ್ಷೆ ಮಾಡಲೂ ಸತಾಯಿಸಿದವರಿದ್ದಾರೆ.

-ಅಧಿಕಾರಿಗಳು ಅಥವಾ ಅವರ ಸಿಬ್ಬಂದಿ ಲಂಚ ಪಡೆದರೆ ತಾನೇ ಸಮಸ್ಯೆ? ಒಬ್ಬರು ಇದಕ್ಕಾಗಿ ಮಾಡಿದ ಉಪಾಯ ನೋಡಿ. ಕಚೇರಿ ಆವರಣದ ಹೊರಗೆ ಒಂದು ಪಾನ್ ಬೀಡಾ ಅಂಗಡಿಯಿರುತ್ತದೆ. ಕಚೇರಿಗೆ ಬಂದವರು ಅಧಿಕಾರಿಯವರಲ್ಲಿ ವ್ಯವಹಾರ ಕುದುರಿಸಿದ ಮೇಲೆ ಸಣ್ಣ ಚೀಟಿಯಲ್ಲಿ ಒಂದು ಅಂಕಿಯನ್ನು ಬರೆದು ಅವರ ಕೈಗೆ ನೀಡಲಾಗುತ್ತದೆ. ಕಚೇರಿಯ ಬಾಗಿಲಲ್ಲಿ ನಿಂತಿರುವ ಸಿಬ್ಬಂದಿ ಸೂಚನೆ ನೀಡಿದಂತೆ ಕಚೇರಿಯ ಹೊರಗೆ ಇರುವ ಪಾನ್‌ ವಾಲಾ ಕೈಗೆ ಚೀಟಿಯಲ್ಲಿ ಬರೆದ ಮೊತ್ತ ಹಸ್ತಾಂತರವಾಗುತ್ತದೆ. ಅವನು ಅದೇ ಚೀಟಿಯಲ್ಲಿ ಸಾಂಕೇತಿಕವಾಗಿ ಹಣ ತಲುಪಿದ ಬಗ್ಗೆ ಸೂಚನೆ ನೀಡುತ್ತಾನೆ. ಚೀಟಿಯನ್ನು ವಾಪಸ್ಸು ಅಧಿಕಾರಿಗೆ ತಲುಪಿಸಿದರೆ ಸಾಕು.ಕಡತ ಮಂಜೂರಾಗುತ್ತದೆ. ಲೋಕಾಯುಕ್ತರಲ್ಲ ಅವರ ಅಪ್ಪ ಬಂದರೂ ಯಾರನ್ನು ಹಿಡಿಯುತ್ತಾರೆ?

-ಯಾವುದೋ ಕಡತವನ್ನು ಲೋಕಾಯುಕ್ತ ಕಚೇರಿಗೆ ಒಪ್ಪಿಸಬೇಕಾಗಿತ್ತು. ಕಡತದೊಂದಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕಡತ ಪಡೆದು ಸ್ವೀಕೃತಿ ಕೊಡುವವರಿಗಾಗಿ ಕಾದು ಕುಳಿತಿದ್ದೆ. ಓರ್ವ ಜವಾನ ಕೈಯಲ್ಲಿ ಫ್ಲಾಸ್ಕ್ ಹಿಡಿದು ಕಾಫಿ ತರಲು ಹೊರಗೆ ಹೋಗುತ್ತಿದ್ದೇನೆ ಎಂದ. ನನಗೂ ಬೇಕೇನೋ ಎಂದು ಕೇಳುತ್ತಿದ್ದಾರೆಂದು ಭಾವಿಸಿ ಬೇಡವೆಂದೆ. ವಿಷಯ ಅದಲ್ಲ, ಆತ ಕಚೇರಿ ಸಿಬ್ಬಂದಿಗಾಗಿ ಕಾಫಿ ತರಲು ಹೋಗುತ್ತಿದ್ದೇನೆ, ಹಣ ಕೊಡಿ ಎಂದು ಹೇಳಿದ್ದಂತೆ ಎಲ್ಲಿ? ಲೋಕಾಯುಕ್ತ ಕಚೇರಿಯಲ್ಲಿ!

-ಇನ್ನೊಂದು ಪ್ರಕರಣದಲ್ಲಿ ಯಾರ ಕೆಲಸವಾಗಬೇಕೋ ಅವರಿಗೆ ಯಾವುದೋ ಒಂದು ಟ್ರಸ್ಟಿನ ವಿಳಾಸ, ಬ್ಯಾಂಕ್ ಖಾತೆಯ ವಿವರಗಳನ್ನು ನೀಡಲಾಗುತ್ತದೆ. ನೇರವಾಗಿ ಟ್ರಸ್ಟಿಗೂ ಅಧಿಕಾರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆ ಖಾತೆಗೆ ಹಣ ಹಾಕಿದರೆ ಕಡತ ನಿರಾಯಾಸವಾಗಿ ಮಂಜೂರು, ಇಲ್ಲದಿದ್ದರೆ ಗೊತ್ತಲ್ಲ; ಇಲ್ಲಿ ಲಂಚ ಯಾರು ಯಾರಿಗೆ ಕೊಟ್ಟರು? ಇದೆಲ್ಲಾ ಓದುವಾಗ ಸರಕಾರಿ ಕ್ಷೇತ್ರದಲ್ಲಿ ಇರುವುದು ಕೇವಲ ಭ್ರಷ್ಟಾಚಾರವೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಅಪರೂಪಕ್ಕೆ ಕೆಲವು ಅಪವಾದಗಳಿರುವುದಿದೆ. ಒಂದೆರಡು ಘಟನೆಗಳನ್ನು ನೋಡಿ.

-ರಾಜಕೀಯದವರಾದರೂ ಪರಿಶುದ್ಧ ವ್ಯಕ್ತಿತ್ವದವರೊಬ್ಬರು ಜಿಲ್ಲಾ ಮಟ್ಟದ ಸಹಕಾರಿ ಸಂಘಟನೆಯ ಅಧ್ಯಕ್ಷರಾಗಿದ್ದರು. ಅವರ ಪದಚ್ಯುತಿಗೆ ಪ್ರಯತ್ನಗಳೂ ನಡೆಯುತ್ತಿದ್ದವು. ವ್ಯವಹಾರಕ್ಕೆ ಸಂಬಂಧಿಸಿದ ದೊಡ್ಡ ಮೊತ್ತ ಮರುಪಾವತಿ ಬರಬೇಕಾಗಿತ್ತು. ಆಗೆಲ್ಲಾ ಅಂತರ್ಜಾಲ ಆಧಾರಿತ ವ್ಯವಹಾರಗಳು ಇರಲಿಲ್ಲ. ಚೆಕ್ ಮೂಲಕ ಪಾವತಿ ಬಂತು. ಚೆಕ್ಕಿನಲ್ಲಿ ಅಧ್ಯಕ್ಷರ ಹೆಸರು, ಅಧ್ಯಕ್ಷ, xxxx ಎಂದು ಸಂಸ್ಥೆಯ ಹೆಸರು ಬರೆಯಲಾಗಿತ್ತು. ಉದ್ಯೋಗಿಯೊಬ್ಬ ಚೆಕ್ಕಿನ ಜೆರಾಕ್ಸ್ ಪ್ರತಿಯನ್ನು ವಿರೋಧಿಗಳಿಗೆ ಕೊಡುತ್ತಾನೆ. ಹಣ ಸಂಸ್ಥೆಯ ಖಾತೆಗೇ ಹೋಗಿದ್ದರೂ, ಚೆಕ್ಕಿನಲ್ಲಿ ಅಧ್ಯಕ್ಷರ ಹೆಸರು ಇದ್ದುದ್ದನ್ನೇ ಪ್ರಮುಖ ಅಸ್ತ್ರವಾಗಿಸಿ, ದೊಡ್ಡ ಮೊತ್ತದ ಲಂಚ ತೆಗೆದುಕೊಂಡರೆಂದು ಹುಯಿಲೆಬ್ಬಿಸಲಾಯಿತು. ಬೇಸರಗೊಂಡ ಅವರು ರಾಜೀನಾಮೆ ಬಿಸುಟು ಹೋಗೇ ಬಿಟ್ಟರು.

– ಶಾಸಕರೊಬ್ಬರು ಶಾಲೆಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಅಧ್ಯಾಪಕರ ತೀವ್ರ ಕೊರತೆ ಇದ್ದುದನ್ನು ಮುಖ್ಯೋಪಾಧ್ಯಾಯರು ಶಾಸಕರ ಗಮನಕ್ಕೆ ತಂದಾಗ, ಕೆಲವು ಅಧ್ಯಾಪಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವಂತೆ, ಅವರ ವೇತನದ ಬಾಬ್ತು ಪ್ರತಿ ತಿಂಗಳು ಒಂದಿಷ್ಟು ಮೊತ್ತವನ್ನು ತನ್ನ ಕಿಸೆಯಿಂದ ಕೊಡುವುದಾಗಿ ದಾನಶೂರ ಕರ್ಣನಂತೆ ಘೋಷಿಸಿದರು. ಹೋದಲ್ಲೆಲ್ಲ ಪ್ರಚಾರ ಕೂಡ ಮಾಡಿದರು.”ಕಿಸೆಯಿಂದ ಕೊಡುವುದರ ಗುಟ್ಟು” ಇಷ್ಟೇ-ಪ್ರತೀ ತಿಂಗಳು ಒಂದೊಂದು ಇಲಾಖೆಯವರು ಆ ಮೊತ್ತವನ್ನು ಇಲಾಖೆಯ ಗುತ್ತಿಗೆದಾರರಿಂದ ವಸೂಲಿ ಮಾಡಿ ಶಾಸಕರಿಗೆ ಕೊಡುತ್ತಾರೆ. ಶಾಸಕರು ಶಾಲೆಗೆ ಕೊಡುತ್ತಾರೆ, ಯಾರದೋ ದುಡ್ಡು……!? ಇದು ಲಂಚದ ವ್ಯಾಪ್ತಿಗೆ ಬರುವುದೋ ಇಲ್ಲವೋ ಗೊತ್ತಿಲ್ಲ.

ಇದೆಲ್ಲವನ್ನು ನಿಲ್ಲಿಸಲಾಗದೇ?

ನ್ಯಾ.ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಸುತ್ತೋಲೆಯೊಂದನ್ನು ಹೊರಡಿಸಿದ್ದರು. ಅದರಂತೆ, ಸರ್ಕಾರಿ ಕಚೇರಿಗಳಲ್ಲಿ ಪ್ರತಿಯೊಬ್ಬ ನೌಕರ/ಅಧಿಕಾರಿ ಕೆಲಸಕ್ಕೆ ಹಾಜರಾಗುವಾಗ, ಹಾಜರಿ ಪುಸ್ತಕದ ಪಕ್ಕದಲ್ಲಿ ಇರಿಸಿದ್ದ ಇನ್ನೊಂದು ಪುಸ್ತಕದಲ್ಲಿ ಆಗ ತನ್ನಲ್ಲಿರುವ ಹಣವೆಷ್ಟು ಎಂಬುದನ್ನು ದಾಖಲಿಸಬೇಕು. ಲೋಕಾಯುಕ್ತ ಅಧಿಕಾರಿಗಳು ಧಿಡೀರ್ ಭೇಟಿ ನೀಡಿ ಪರಿಶೀಲಿಸಿದಾಗ ಯಾರಲ್ಲಾದರೂ ಪುಸ್ತಕದಲ್ಲಿ ನಮೂದಿಸಿರುವುದಕ್ಕಿಂತ ಹೆಚ್ಚು ಮೊತ್ತ ಕಂಡು ಬಂದರೆ, ಅದರ ಬಗ್ಗೆ ವಿವರಣೆ ನೀಡಬೇಕು. ಅಂದರೆ ಅದನ್ನು ಬ್ಯಾಂಕಿನಿಂದ ತಂದದ್ದು ಇತ್ಯಾದಿ. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದರಿಂದ ಭ್ರಷ್ಟಾಚಾರ ಸ್ವಲ್ಪ ನಿಯಂತ್ರಣದಲ್ಲಿತ್ತು. ಒಂದು ಪ್ರಕರಣದಲ್ಲಂತೂ ನ್ಯಾಯಾಲಯದ ಕಚೇರಿಯಲ್ಲೇ ಅನಧಿಕೃತ ಹಣ ಸಿಕ್ಕಿತ್ತು. ಅಂತಿಮವಾಗಿ ಏನಾಯಿತೋ ಗೊತ್ತಿಲ್ಲ, ಆದರೆ ಹೆಗ್ಡೆಯವರು ಲೋಕಾಯುಕ್ತ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ ಕಚೇರಿಗಳಿಂದ ಪುಸ್ತಕ ಮಾತ್ರ ಮಾಯವಾಯಿತು!

ರಸ್ತೆಯ, ಕಟ್ಟಡಗಳ, ಉಪಕರಣ ಮುಂತಾದ ಕ್ಷೇತ್ರಗಳಲ್ಲಿ ಗುಣಮಟ್ಟದ ಕೊರತೆಗೆ ಅಂತಿಮವಾಗಿ ಉನ್ನತ ಮಟ್ಟದಲ್ಲಿರುವವರು ಹೊಣೆಯಾದರೂ ಅವರ ಪಾತ್ರ ಎಲ್ಲೂ ಸಾಬೀತಾಗದು. ಏಕೆಂದರೆ ಹಣ ಪಡೆದವರು ಅವರಲ್ಲವಲ್ಲ? ಇದರಲ್ಲಿ ಜನರ ಹೊಣೆಗಾರಿಕೆಯೂ ಕಡಿಮೆಯೇನಿಲ್ಲ. ಏಕೆಂದರೆ ಲಂಚ ಕೊಡುವವರು ಇರುವವರೆಗೆ ತೆಗೆದುಕೊಳ್ಳುವವರೂ ಇರುತ್ತಾರೆ. ಆದ್ದರಿಂದ ತಪ್ಪೆಲ್ಲ ಕೇವಲ ಅಧಿಕಾರಿಗಳ ಅಥವಾ ನೌಕರರದ್ದಲ್ಲ. ವಸೂಲಿ ಮಾಡಿದ್ದರಲ್ಲಿ ರಾಜಕೀಯ ಮುಖ್ಯಸ್ಥರವರೆಗೆ ತಲುಪಿಸುವ ಅನಿವಾರ್ಯತೆಯಿದೆ. ಏಕೆಂದರೆ ನೇಮಕಾತಿಯಿಂದ ಸ್ಥಳ ನಿಯುಕ್ತಿವರೆಗೆ, ಹುದ್ದೆಯಲ್ಲಿ ಮುಂದುವರಿಯಲು, ಕಾಲಕಾಲಕ್ಕೆ ಕಾಣಿಕೆ ನೀಡಲೇ ಬೇಕು. ಆಡಳಿತಗಾರರ ಭಂಡತನ, ಪ್ರಭುವೆಂಬ ನಾಮ್ಕೇವಾಸ್ತೆ ಕಿರೀಟವನ್ನು ಹೊತ್ತ ನಾಗರಿಕರ (ನಾನೂ ಸೇರಿ) ಜಡತ್ವ, ಅಲ್ಪಜ್ಞಾನ, ಸುಧಾರಣೆಯ ಸಫಲತೆಗಿರುವ ತಡೆಗೋಡೆಗಳಾಗಿವೆ. ಆದ್ದರಿಂದಲೇ ಯುವ ಪ್ರತಿಭೆಗಳು ಸರ್ಕಾರಿ ಸೇವೆಯತ್ತ ನಿರಾಸಕ್ತಿ ತೋರುತ್ತಿರುವುದು.

ಮೋಹನದಾಸ ಕಿಣಿ, ಕಾಪು
kini.mohandas@gmail.com

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!