ಇಂದಿನ ಐಕಾನ್ – ಐಪಿಲ್ ಚುಟುಕು ಕ್ರಿಕೆಟಿನ ಕಪ್ಪು ವಜ್ರ ನಿಕೋಲಸ್ ಪೂರನ್‌

ಈ ವರ್ಷದ ಐಪಿಲ್ ಪಂದ್ಯಗಳನ್ನು ನೀವು ಗಮನಿಸುತ್ತಾ ಬಂದಿದ್ದೀರಿ ಎಂದಾದರೆ ಪಂಜಾಬ್ ತಂಡದ ಈ ಕ್ರಿಕೆಟರ್ ನಿಮ್ಮ ಗಮನವನ್ನು ಥಟ್ಟನೆ ಸೆಳೆದಿರುತ್ತಾನೆ. ತನ್ನ ಸಾಹಸದ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯ ಮೂಲಕ, ಅದ್ಭುತವಾದ ಹೀರೋಯಿಕ್ ಇನ್ನಿಂಗ್ಸ್‌ ಗಳ ಮೂಲಕ ಆತ ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದು ಖಂಡಿತವಾಗಿಯೂ ಸುಳ್ಳಲ್ಲ. ಆತನ ಫೀಲ್ದಿಂಗ್ ಬಗ್ಗೆ ಸಚಿನ್ ಹೇಳಿದ ಮಾತುಗಳು – ಇಂತಹ ಸಾಹಸವನ್ನು ನಾನು ಇದುವರೆಗೆ ಕ್ರಿಕೆಟ್ ಕಣದಲ್ಲಿ ನೋಡಿದ್ದೇ ಇಲ್ಲ! ಆತನೇ ಕ್ರಿಕೆಟ್ ಜಗತ್ತಿನ ನೂತನ ಕಪ್ಪು ವಜ್ರ ಎಂದೇ ಕರೆಯಲ್ಪಡುವ ನಿಕೋಲಸ್ ಪೂರನ್!
ಇಂದು ದಿವಾಳಿತನದ ಅಂಚಿನಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಆತನ ಪ್ರತಿಭೆಗೆ ಬೆಂಬಲ ನೀಡಲು ಸಾಧ್ಯವಾಗದೆ ಹೋಗಿ ನಿಕೋಲಸ್ ಜಗತ್ತಿನ ಬೇರೆ ಬೇರೆ ಚುಟುಕು ಕ್ರಿಕೆಟ್ ಲೀಗಲ್ಲಿ ಆಡಬೇಕಾದದ್ದು ನಿಜವಾಗಿ ದುರಂತ! ಆತ ಪ್ರತಿಭಾವಂತ. ಟ್ರಿನಿಡಾಡ್ ಆತನ ಹುಟ್ಟು ಕರ್ಮಭೂಮಿ. ಬಾಲ್ಯದಿಂದಲೂ ಕ್ರಿಕೆಟ್ ಬಿಟ್ಟರೆ ಆತನಿಗೆ ಬೇರೆ ಜಗತ್ತು ಇಲ್ಲ. ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ವಿವ್ ರಿಚಾರ್ಡ್ಸ್ ಇವರ ಆಟವು ಅವನಿಗೆ ಪ್ರೇರಣೆ. ಶಾಲೆಗೆ ಹೋಗುವುದನ್ನು ಮರೆತು ಹಗಲು ರಾತ್ರಿ ಕ್ರಿಕೆಟ್ ತರಬೇತಿಯಲ್ಲಿ ಮುಳುಗಿ ಬಿಡುತ್ತಿದ್ದ ನಿಕೋಲಸ್. 2013ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಮೂಲಕ ಕ್ರಿಕೆಟ್ ಜಗತ್ತಿಗೆ ಅವನ ಪ್ರವೇಶ ಆಗಿತ್ತು. ಮೊದಲ ಪಂದ್ಯದಲ್ಲಿ 24 ಎಸೆತಗಳಲ್ಲಿ 54 ರನ್ ಚಚ್ಚಿದ್ದ! ಆಗ ಅವನಿಗೆ ಕೇವಲ 16 ವರ್ಷ ಪ್ರಾಯ.
ಮುಂದೆ ಅಂಡರ್- 19 ವಿಶ್ವಕಪ್ಪಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ ಆಡಿ ಆರು ಪಂದ್ಯಗಳಲ್ಲಿ 303 ರನ್ ಗುಡ್ಡೆ ಹಾಕಿದ್ದ ನಿಕೋಲಸ್. ವಿಕೆಟ್ ಕೀಪಿಂಗ್ ಕೂಡ ಮಾಡಿದ್ದ. ಆತನ ಸ್ಟ್ರೈಕ್ ರೇಟ್ 145ರ ಕೆಳಗೆ ಬಂದದ್ದೇ ಇಲ್ಲ! ಆಗಲೇ ಆತನ ಬದುಕಿನಲ್ಲಿ ಕರಾಳ ದಿನಗಳು ಬಂದವು.

ಒಂದು ಸಂಜೆ ಕ್ರಿಕೆಟ್ ತರಬೇತು ಮುಗಿಸಿ ಕಾರ್ ಡ್ರೈವ್ ಮಾಡುತ್ತ ಮನೆ ಕಡೆ ಬರುವಾಗ ಭೀಕರವಾದ ಅಪಘಾತ ನಡೆದು ಹೋಯಿತು. ಎರಡೂ ಕಾಲುಗಳು ಪುಡಿ ಪುಡಿ ಆದವು. ಬಲಗಾಲಿನ ಮೊಣ ಗಂಟು ಮುರಿದು ಹೋಗಿತ್ತು. ಕಾಲಿನ ಮತ್ತು ಕೈಗಳ ಬೆರಳುಗಳು ಜರ್ಜರಿತ ಆಗಿದ್ದವು. ಪ್ರಜ್ಞೆ ಬಂದಾಗ ಎರಡೂ ಕಾಲುಗಳಿಗೆ ಬ್ಯಾಂಡೇಜು ಸುತ್ತಿ ಆತ ಆಸ್ಪತ್ರೆಯಲ್ಲಿ ಮಲಗಿದ್ದ! ಕಣ್ಣು ತೆರೆದು ಆತ ವೈದ್ಯರಿಗೆ ಕೇಳಿದ ಮೊದಲ ಪ್ರಶ್ನೆ – ಡಾಕ್ಟರ್, ನಾನಿನ್ನು ಕ್ರಿಕೆಟ್ ಆಡಬಹುದಾ? ವೈದ್ಯರು ಯಾವ ಭರವಸೆ ಕೂಡ ಕೊಡಲಿಲ್ಲ. ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ನೋವು ಪಡುತ್ತಾ ಮಲಗಿದ್ದ! ಮತ್ತೆ ಆರು ತಿಂಗಳು ವೀಲ್ ಚೇರ್ ಮೇಲೆ ಉಸಿರು ಕಟ್ಟುವ ಪರಾವಲಂಬಿ ಬದುಕು! ಹಲವು ಶಸ್ತ್ರಚಿಕಿತ್ಸೆಗಳು ಮತ್ತು ನೋವು ನಿಕೋಲಸ್ ಎಂಬ ಅದ್ಭುತ ಹುಡುಗನನ್ನು ಹೊಸಕಿ ಹಾಕಲಿಲ್ಲ ಎಂಬುದು ಕ್ರಿಕೆಟಿನ ಅದೃಷ್ಟ ಎಂದೇ ಹೇಳಬಹುದು!
ಅಂಥ ನಿಕೋಲಸ್ ಮತ್ತೆ ಒಂದೇ ವರ್ಷದೊಳಗೆ ಕ್ರಿಕೆಟ್ ಜಗತ್ತಿಗೆ ಮರಳಿದ! ತನ್ನ ಆಟದ ಕಸುವು ಹೆಚ್ಚಿಸಿಕೊಂಡಿದ್ದ. ಕೆರಿಬಿಯನ್ ಲೀಗ್‌ ನಲ್ಲಿ ಎಂಟು ಪಂದ್ಯಗಳಲ್ಲಿ 217 ರನ್ ಗಳಿಸಿದ. ಅದೇ ವರ್ಷ ಪಾಕ್ ತಂಡದೊಂದಿಗೆ ವೆಸ್ಟ್ ಇಂಡೀಸ್ T20 ಮುಖಾಮುಖಿ ಆದಾಗ ಬಿರುಸಿನ ಆಟವಾಡಿದ. ಎಲ್ಲಾ ಮುಗಿದು ಸೆಟ್ಲ್ ಆದ ಅನ್ನುವಾಗಲೆ ಇನ್ನೊಂದು ದುರಂತ ನಡೆಯಿತು. ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡಿನ ಕರಾಳ ತೀರ್ಪಿನ ಫಲವಾಗಿ 10 ತಿಂಗಳು ನಿಷೇಧವನ್ನು ಎದುರಿಸಿದ! ಅದಕ್ಕೆ ಕಾರಣ ದೇಸಿ ಕ್ರಿಕೆಟ್ ಸರಣಿ ನಡೆಯುತ್ತಿರುವಾಗ ಅದನ್ನು ನಿರ್ಲಕ್ಷ್ಯ ಮಾಡಿ ಬಾಂಗ್ಲಾ ದೇಶದ ಪ್ರೀಮಿಯರ್ ಲೀಗ್ ಆಡಲು ಹೋದದ್ದು! ಮತ್ತೆ ಹತ್ತು ತಿಂಗಳು ಅವನ ಕ್ರಿಕೆಟ್ ಭವಿಷ್ಯಕ್ಕೆ ಮಂಕು ಕವಿಯಿತು!

ಆದರೆ ಇದಕ್ಕೆಲ್ಲ ಸೊಪ್ಪು ಹಾಕುವ ಬಡಪೆಟ್ಟಿಗೆ ಅವನದ್ದು ಅಲ್ಲವೇ ಅಲ್ಲ! ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ20 ಲೀಗ್ ಆತನ ದೈತ್ಯ ಸಾಮರ್ಥ್ಯವನ್ನು ಜಗತ್ತಿಗೆ ತೆರೆದು ತೋರಿಸಿತು. ಕಳೆದ ವರ್ಷ ಮತ್ತು ಈ ವರ್ಷ ನಿಕೋಲಸ್ ಪಂಜಾಬ್ ತಂಡದ ಪರವಾಗಿ ಐಪಿಲ್ ಆಡಿದ್ದಾನೆ. ಇಪ್ಪತ್ತೊಂದು ಪಂದ್ಯಗಳಲ್ಲಿ 521 ರನ್ ಸೂರೆ ಮಾಡಿದ್ದಾನೆ. 36 ಸಿಡಿಲಬ್ಬರದ ಸಿಕ್ಸರ್ ಆತನ ಬ್ಯಾಟಿನಿಂದ ಚಿಮ್ಮಿವೆ! ಸ್ಟ್ರೈಕ್ ರೇಟ್ 165.4 ಆಗಿದೆ. ವಿಕೆಟ್ ಕೀಪಿಂಗ್ ಕೂಡ ಮಾಡಿದ್ದಾನೆ.
ಭುವನೇಶ್ವರ್ ಕುಮಾರ್, ಚಹಾಲ್, ಬುಮ್ರ, ನಟರಾಜನ್, ರಶೀದ್ ಖಾನ್ ಮೊದಲಾದ ಸ್ಟಾರ್ ಬೌಲರಗಳು ಕೂಡ ಅವನ ಬ್ಯಾಟ್‌ ನಿಂದ ಸಿಕ್ಸರ್ ಹೊಡೆಸಿಕೊಂಡಿದ್ದಾರೆ! ಅವನ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಗಳ ಬಗ್ಗೆ ತಂಡದ ಮಾಲಕಿ ಪ್ರೀತಿ ಝಿಂಟಾ ಮತ್ತು ಫೀಲ್ಡಿಂಗ್ ಕೋಚ್ ಜಾಂಟಿ ರೊಡ್ಸ್ ಅಭಿಮಾನದ ಮಾತನ್ನು ಹೇಳಿದ್ದಾರೆ. ಆತನನ್ನು ‘ಮರಿ ಕ್ರಿಸ್ ಗೇಲ್’ ಎಂದು ಈಗಾಗಲೇ ಅಭಿಮಾನಿಗಳು ಕರೆಯಲು ಆರಂಭಿಸಿದ್ದಾರೆ.
ಕಣ್ಣು ಮತ್ತು ಕೈಗಳ ಅದ್ಭುತವಾದ ಹೊಂದಾಣಿಕೆ, ಅಸಾಧಾರಣವಾದ ವೇಗ, ಪಾದಗಳ ಚಲನೆ, ಪರ್ಫೆಕ್ಟ್ ಟೈಮಿಂಗ್, ಬ್ಯಾಟಿನ ಬೀಸು ಮತ್ತು ಆತ್ಮವಿಶ್ವಾಸಗಳು ಅವನನ್ನು ಮಹೋನ್ನತ ಕ್ರಿಕೆಟ್ ಸ್ಟಾರಗಳ ಸಾಲಿನಲ್ಲಿ ತಂದು ನಿಲ್ಲಿಸಿವೆ. ಆತನ ಬದುಕಿನ ಹೋರಾಟವು ಅದಕ್ಕಿಂತ ರೋಮಾಂಚಕ ಎಂದು ಖಂಡಿತವಾಗಿ ಹೇಳಬಹುದು.
ರಾಜೇಂದ್ರ ಭಟ್ ಕೆ.





























































































error: Content is protected !!
Scroll to Top