ಮುಂಬೈ,ನ.12 : ಇಬ್ಬರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಸೆರೆಯಾಗಿ ಒಂದು ವಾರ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ನಿನ್ನೆ ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಮಹಾರಾಷ್ಟ್ರ ಸರಕಾರದ ವಿರುದ್ಧ ಮತ್ತೆ ವಾಗ್ದಾಳಿ ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ರಿಪಬ್ಲಿಕ್ ಟಿವಿ ಚಾನೆಲ್ ಶುರು ಮಾಡುತ್ತೇನೆ, ನಿಮಗೆ ತಾಕತ್ತಿದ್ದರೆ ತಡೆಯಿರಿ ಎಂದು ಮುಖ್ಯಮಂತ್ರಿ ಉದ್ಧವ ಠಾಕ್ರೆಗೆ ಬಹಿರಂಗ ಸವಾಲು ಹಾಕಿದ್ದಾರೆ.
ಉದ್ಧವ್ ಠಾಕ್ರೆ ವಿರುದ್ಧ ಹರಿಹಾಯ್ದ ಅವರು, ಉದ್ಧವ್ ಠಾಕ್ರೆ ಇಲ್ಲಿ ಕೇಳಿ ನನ್ನನ್ನು ಸುಳ್ಳು ಕೇಸಿನಲ್ಲಿ ಬಂಧಿಸಿದ್ದೀರಿ. ನೀವು ಎಲ್ಲ ಕಳೆದುಕೊಂಡಿರಿ, ನೀವು ಸೋತುಹೋದಿರಿ. ಒಂದು ಹಳೆಯ ಸುಳ್ಳು ಕೇಸಿನಲ್ಲಿ ನನ್ನನ್ನು ಸಿಕ್ಕಿಹಾಕಿಸಿ ಬಂಧಿಸಿದ್ದೀರಿ. ಅದಕ್ಕಾಗಿ ನನ್ನ ಕ್ಷಮೆಯನ್ನು ಕೂಡ ಕೇಳಲಿಲ್ಲ ಎಂದರು.
ಜೈಲಿನಲ್ಲಿದ್ದುಕೊಂಡೇ ಸುದ್ದಿ ವಾಹಿನಿಯನ್ನು ಆರಂಭಿಸುವ ಸಾಮರ್ಥ್ಯ ನನಗಿದೆ. ಆದರೆ ನಿಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ ಎಂದು ಸಹ ಮುಖ್ಯಮಂತ್ರಿಗೆ ಟಾಂಗ್ ಕೊಟ್ಟಿದ್ದಾರೆ. ಆಟ ಈಗಷ್ಟೇ ಆರಂಭವಾಗಿದೆ, ರಿಪಬ್ಲಿಕ್ ಟಿವಿ ಚಾನೆಲ್ ಎಲ್ಲಾ ಸ್ಥಳೀಯ ಭಾಷೆಗಳಲ್ಲಿಯೂ ಆರಂಭಿಸಲಾಗುವುದು, ಅಂತಾರಾಷ್ಟ್ರೀಯ ಮಾಧ್ಯಮವನ್ನು ಸಹ ತೆರೆಯಲಾಗುವುದು ಎಂದು ಘೋಷಿಸಿದರು.
ಕಳೆದ ರಾತ್ರಿ ಸುಮಾರು 8.30ರ ಸುಮಾರಿಗೆ ಮುಂಬೈಯ ತಲೋಜಾ ಜೈಲಿನಿಂದ ಬಿಡುಗಡೆಗೊಂಡ ಅರ್ನಬ್ ಅವರನ್ನು ಅಭಿಮಾನಿಗಳು ಅಭೂತಪೂರ್ವವಾಗಿ ಸ್ವಾಗತಿಸಿದರು.
ಮಹಾರಾಷ್ಟ್ರ ಸರಕಾರಕ್ಕೆ ಅರ್ನಬ್ ಸವಾಲು: ಸ್ಥಳೀಯ ಭಾಷೆಗಳಲ್ಲಿ ರಿಪಬ್ಲಿಕ್ ಟಿವಿ ಚಾನಲ್ ಶುರು ಮಾಡುವ ಘೋಷಣೆ



















