Tuesday, September 28, 2021
spot_img
Homeಅಂಕಣಕಾನೂನು ಕಣಜ - ಜೀವನಾಂಶ ಯಾರು, ಯಾರಿಗೆ ಕೊಡಬೇಕು?

ಕಾನೂನು ಕಣಜ – ಜೀವನಾಂಶ ಯಾರು, ಯಾರಿಗೆ ಕೊಡಬೇಕು?

ಅನೇಕ ಸಂದರ್ಭಗಳಲ್ಲಿ ಜೀವನಾಂಶ ಕೊಡಬೇಕು ಎನ್ನುವ ತೀರ್ಪನ್ನು ನ್ಯಾಯಾಲಯ ನೀಡುವುದನ್ನು ನೀವು ನೋಡಿರಬಹುದು. ಬಹುತೇಕ ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶ ಎನ್ನುವುದು ಬಹಳ ಮುಖ್ಯ ಅಂಶವಾಗಿರುತ್ತದೆ. ದಾಂಪತ್ಯದಲ್ಲಿ ಮಾತ್ರವಲ್ಲ ಇತರ ಕೆಲವು ಸಂದರ್ಭಗಳಲ್ಲೂ ಜೀವನಾಂಶ ಕೊಡುವ ಪ್ರಮೇಯ ಬರುತ್ತದೆ. ಯಾರು, ಯಾವಾಗ ಜೀವನಾಂಶ ಕೊಡಬೇಕು, ಪಡೆದುಕೊಳ್ಳುವ ಅರ್ಹತೆ ಏನು? ಅದಕ್ಕಿರುವ ಕಾನೂನು ಪ್ರಕ್ರಿಯೆಗಳು ಏನು ಎನ್ನುವುದನ್ನು ಈ ವಾರದ ಕಾನೂನು ಕಣಜ ಅಂಕಣದಲ್ಲಿ ಚರ್ಚಿಸುವ.
1.ಪತಿಯಿಂದ ನಿರ್ಲಕ್ಷಿಸಲ್ಪಟ್ಟ ಮತ್ತು ತನ್ನ ಜೀವನ ನಿರ್ವಹಣೆಗೆ ಸೂಕ್ತ ಆದಾಯ ಹೊಂದಿರದ ವಿವಾಹಿತ ಮಹಿಳೆ ಮತ್ತು ತಮ್ಮ ಜೀವನ ನಿರ್ವಹಣೆಗೆ ಸ್ವಂತ ಆದಾಯ ಹೊಂದಿರದ ಆಕೆಯ ಅಪ್ರಾಪ್ತ ವಯಸ್ಸಿನ ವಿಧಿಸಮ್ಮತ (legitimate) ಅಥವಾ ವಿಧಿಸಮ್ಮತವಲ್ಲದ (illegitimate) ಮಕ್ಕಳು ಮತ್ತು ಪ್ರಾಪ್ತ ವಯಸ್ಕರಾದ ಯಾವುದೇ ದೈಹಿಕ ಅಥವಾ ಮಾನಸಿಕ ವಿಕಲತೆ ಅಥವಾ ಹಾನಿಯಿಂದಾಗಿ ತಮ್ಮನ್ನು ತಾವು ನೋಡಿಕೊಳ್ಳಲು ಅಸಮರ್ಥರಾದ ವಿಧಿಸಮ್ಮತ (legitimate) ಅಥವಾ ವಿಧಿಸಮ್ಮತವಲ್ಲದ (illegitimate) ಮಕ್ಕಳು ಮತ್ತು ಸಂಪಾದನೆ ಹೊಂದಿರುವ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟು ತಮ್ಮನ್ನು ತಾವು ನೋಡಿಕೊಳ್ಳಲು ಅಸಮರ್ಥರಾದ ತಂದೆ ಅಥವಾ ತಾಯಿ ತಮ್ಮ ಜೀವನ ನಿರ್ವಹಣೆಗೆ ಬೇಕಾಗುವ ಹಣವನ್ನು (ಜೀವನಾಂಶ) ಕಾನೂನು ಬದ್ಧವಾಗಿ ವಸೂಲು ಮಾಡುವ ಅಧಿಕಾರವನ್ನು 1973ನೇ ದಂಡ ಪ್ರಕ್ರಿಯಾ ಸಂಹಿತೆಯ (ಕ್ರಿಮಿನಲ್ ಪ್ರೊಸೀಜರ್ ಕೋಡ್)ನ 125ನೇ ಸೆಕ್ಷನ್ ಪ್ರಕಾರ ಹೊಂದಿರುತ್ತಾರೆ.
ಈ ಬಗ್ಗೆ ಸೂಕ್ತ ಪರಿಹಾರವನ್ನು ಜೀವನಾಂಶವಾಗಿ ಸಂಬಂಧಪಟ್ಟ ನ್ಯಾಯಾಲಯದ ಆದೇಶ ಮುಖಾಂತರ ಪಡೆದುಕೊಳ್ಳಲು ಈ ಮೇಲೆ ವಿವರಿಸಿದ ಕಾನೂನಿನ ಪ್ರಕಾರ ಪ್ರತಿಯೊಬ್ಬ ನಿರ್ಗತಿಕ ಅಥವ ನಿರ್ಲಕ್ಷಿತ ವ್ಯಕ್ತಿಯು ಅವಕಾಶ ಹೊಂದಿರುತ್ತಾರೆ. ಈ ಕುರಿತು ಸೂಕ್ತ ಅರ್ಜಿಯನ್ನು 1973ನೇ ದಂಡ ಪ್ರಕ್ರಿಯಾ ಸಂಹಿತೆಯ (ಕ್ರಿಮಿನಲ್ ಪ್ರೊಸೀಜರ್ ಕೋಡ್)ನ 125ನೇ ಕಲಂ(ಸೆಕ್ಷನ್) ಪ್ರಕಾರ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲು ಅವಕಾಶ ಇದೆ.
ಈ ರೀತಿಯಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಅಂಥಹ ನಿರ್ಲಕ್ಷ್ಯ ಅಥವಾ ತಿರಸ್ಕಾರವು ನ್ಯಾಯಾಲಯಕ್ಕೆ ಮನದಟ್ಟಾದಲ್ಲಿ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಸಾಮರ್ಥ್ಯ ಮತ್ತು ಸಂದಂರ್ಭವನ್ನು ಅವಲೋಕಿಸಿ ಸೂಕ್ತವಾದ ಜಿವನಾಂಶದ ಹಣವನ್ನು ನಿರ್ದೇಶಿಸಬಹುದಾದಂತಹ ವ್ಯಕ್ತಿಯಿಂದ ಅರ್ಜಿದಾರರಿಗೆ ಕೊಡಿಸುವ ಬಗ್ಗೆ ಆದೇಶವನ್ನು ನೀಡುವ ಅಧಿಕಾರ ಹೊಂದಿರುತ್ತಾರೆ.
ಈ ರೀತಿಯಾಗಿ ನೀಡಲ್ಪಡುವ ಆದೇಶದ ಪ್ರಕಾರ ಜೀವನಾಂಶವನ್ನು ನಿರ್ದೇಶಿಸಬಹುದಾದಂತಹ ವ್ಯಕ್ತಿಯು ಅರ್ಜಿದಾರರಿಗೆ ಸಂದಾಯ ಮಾಡಲು ವಿಫಲರಾದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ವಾರಂಟನ್ನು ಹೊರಡಿಸಿ ಜೀವನಾಂಶದ ಹಣವನ್ನು ವಸೂಲು ಮಾಡುವ ಅಧಿಕಾರವನ್ನು ನ್ಯಾಯಾಲಯ ಹೊಂದಿರುತ್ತದೆ. ಒಂದು ವೇಳೆ ವಾರಂಟನ್ನು ಹೊರಡಿಸಿದ ನಂತರ ಕೂಡ ಜೀವನಾಂಶದ ಹಣವನ್ನು ನೀಡಲು ನಿರ್ದೇಶಿಸಬಹುದಾದಂತಹ ವ್ಯಕ್ತಿ ವಿಫಲನಾದಲ್ಲಿ ಅಂತಹ
ವ್ಯಕ್ತಿಯನ್ನು ನ್ಯಾಯಾಲಯ ಜೈಲು ಶಿಕ್ಷೆಗೆ ಒಳಪಡಿಸಬಹುದು. ಮಾತ್ರವಲ್ಲದೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವ ತನಕ ಅರ್ಜಿದಾರರಿಗೆ ಮಧ್ಯಂತರ ಜೀವನಾಂಶ ಮತ್ತು ವ್ಯವಹರಣೆಯ ಖರ್ಚಿನ ಬಾಬ್ತು ಕೊಡಿಸುವ ಬಗ್ಗೆ ಸೂಕ್ತ ಆದೇಶವನ್ನು ನೀಡುವ ಅಧಿಕಾರವನ್ನು ಕೂಡ ನ್ಯಾಯಾಲಯವು ಹೊಂದಿರುತ್ತದೆ.

  1. ತನ್ನ ಪತ್ನಿ, ಮಕ್ಕಳು ಮತ್ತು ತಂದೆ-ತಾಯಿಯರನ್ನು ನೋಡಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ನೈತಿಕ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ವಿಧಿಸುವ ಮತ್ತು ನಿರ್ಗತಿಕತೆಯನ್ನು ಹೋಗಲಾಡಿಸಿ ತೊಂದರೆಗೊಳಗಾದ ವ್ಯಕ್ತಿಗಳಿಗೆ ಕ್ಷಿಪ್ರ ಪರಿಹಾರವನ್ನು ನೀಡುವ ಉದ್ದೇಶವನ್ನು ಈ ಮೇಲೆ ಹೇಳಿದ ಕಾನೂನು ಅಂದರೆ ಕ್ರಿಮಿನಲ್ ಪ್ರೊಸೀಜರ್ ಕೋಡ್‍ನ 125ನೆ ಕಲಂ ಹೊಂದಿರುತ್ತದೆ.
    ಕೆ. ವಿಜೇಂದ್ರ ಕುಮಾರ್
    ಹಿರಿಯ ನ್ಯಾಯವಾದಿ, ಕಾರ್ಕಳ – 9845232490

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!