ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ , ಜ್ಞಾನವೃದ್ಧರೂ , ವಯೋವೃದ್ಧರೂ ಆಗಿರುವ ಹಿರಿಯಡ್ಕ ಗೋಪಾಲ ರಾವ್ ರವರು ಯಕ್ಷಗಾನದ ದಂತಕತೆ ಎನಿಸಿಕೊಂಡವರು . ” ಮದ್ದಲೆಯ ಮಾಂತ್ರಿಕ ” ಎನಿಸಿಕೊಂಡಿರುವ 101 ವರ್ಷ ವಯೋಮಾನದ , ತೆಂಕು ಬಡಗು ಉಭಯ ತಿಟ್ಟುಗಳಲ್ಲಿಯೂ ಅತ್ಯಂತ ಹಿರಿಯ ಕಲಾವಿದರು . ಅ.17ರಂದು ಅವರಯ ವಿಧಿವಶರಾದರು.
ಹಿರಿಯಡ್ಕ ಗೋಪಾಲರಾಯರು 15.12. 1919 ರಲ್ಲಿ ಶೇಷಗಿರಿ ರಾವ್ – ಲಕ್ಷ್ಮೀ ಅಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು . ಆರನೇ ತರಗತಿಯ ವಿದ್ಯಾಭ್ಯಾಸವನ್ನು ಉಡುಪಿಯ ಅನಂತೇಶ್ವರ ಶಾಲೆಯಲ್ಲಿ ಪೂರೈಸಿ ಯಕ್ಷಗಾನದತ್ತ ಹೊರಳಿದರು . ಇವರ ತಂದೆ ಶೇಷಗಿರಿ ರಾಯರು ಆಯುರ್ವೇದ ವೈದ್ಯರು ಅಗಿರುವಂತೆಯೇ , ಯಕ್ಷಗಾನದ ಮದ್ದಲೆ ವಾದಕರೂ ಆಗಿರುವ ಕಾರಣ , ಗೋಪಾಲರಾಯರು ತಮ್ಮ ತಂದೆಯವರಲ್ಲಿ ಮದ್ದಲೆ ವಾದನದಲ್ಲಿ ಪಳಗಿದರು .
ಯಕ್ಷಗಾನದ ನಾಟ್ಯವನ್ನು ಅಂದಿನ ಸುಪ್ರಸಿದ್ಧ ಗುರುಗಳಾದ ನಾಗಪ್ಪ ಕಾಮತರಲ್ಲಿ ಅಭ್ಯಸಿಸಿದರು . ತಂದೆಯ ಸಲಹೆಯಂತೆ 15ನೇ ವಯಸ್ಸಿನಲ್ಲೇ 1934ರಲ್ಲಿ ವಿಠ್ಠಲ ಹೆಗ್ಡೆಯವರ ವ್ಯವಸ್ಥಾಪಕತ್ವದ ಹಿರಿಯಡ್ಕ ಮೇಳದಲ್ಲಿ ವೇಷಧಾರಿಯಾಗಿ ರಂಗ ಪ್ರವೇಶ ಮಾಡಿದರು .ಎರಡು ವರ್ಷಗಳ ಕಾಲ ವೇಷಧಾರಿಯಾಗಿ ಸೇವೆಗೈದು 1936 ರಿಂದ ಒತ್ತುಮದ್ದಲೆ ವಾದಕರಾಗಿ ಕಾರ್ಯ ನಿರ್ವಹಿಸಿದರು . 1937 ರಲ್ಲಿ ಪ್ರಸಿದ್ಧ ವೇಷಧಾರಿ ಗಣಪತಿ ಪ್ರಭುಗಳ ಯಾಜಮಾನ್ಯದ ಪೆರ್ಡೂರು ಮೇಳಕ್ಕೆ ಪ್ರಧಾನ ಮದ್ದಲೆ ವಾದಕರಾಗಿ ಸೇರ್ಪಡೆಗೊಂಡರು . ನಂತರ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾದ ಮಾರ್ವಿ ಶ್ರೀನಿವಾಸ ಉಪ್ಪೂರರಿಗೆ ಸಾಥಿಯಾಗಿ ಸೇರಿದರು . 1939 ರಲ್ಲಿ ಮಂದರ್ತಿ ಮೇಳ ಸೇರಿದ ಗೋಪಾಲ ರಾಯರಿಗೊಂದು ದೊಡ್ಡ ತಿರುವು ದೊರಕಿತು . ಆಗ ಮಂದರ್ತಿ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದವರು ಆ ಕಾಲದಲ್ಲಿ ಸುಪ್ರಸಿದ್ಧ ಎನಿಸಿರುವ ಶೇಷಗಿರಿ ಭಾಗವತರು . ಶೇಷಗಿರಿ ಭಾಗವತರು ಸುಶ್ರಾವ್ಯ ಕಂಠದೊಂದಿಗೆ ಜನಪ್ರಿಯರಾದವರು . ಮೈಕಿನ ಸಹಾಯವಿಲ್ಲದೇ ಮೂರು ಮೈಲಿನಷ್ಟು ಕೇಳುವ ರೀತಿಯಲ್ಲಿ ಹಾಡಬಲ್ಲ ಸಮರ್ಥರು . ಶೇಷಗಿರಿ ಭಾಗವತರ ಸಾಂಗತ್ಯದಲ್ಲಿ ರಾಯರೂ ಮಿಂಚಿದರು .ಹಲವಾರು ಅವಿಷ್ಕಾರಗಳಿಗೆ ಕಾರಣಕರ್ತರಾದರು . ಅಂದು ಮಂದರ್ತಿ ಮೇಳದಲ್ಲಿಯ ಸುಪ್ರಸಿದ್ಧ ಕಲಾವಿದರಾಗಿದ್ದ ಹಾರಾಡಿ ರಾಮ ಗಾಣಿಗ , ಕುಷ್ಟ ಗಾಣಿಗ , ಕೊಳ್ಕೆಬೈಲು ಶೀನ , ಗೋರ್ಪಾಡಿ ವಿಠಲ ಪಾಟೀಲ್ ,ಶಿರಿಯಾರ ಮಂಜು ನಾಯಕ್ , ಹಾರಾಡಿ ನಾರಾಯಣ ಗಾಣಿಗ , ಮಹಾಬಲ ಗಾಣಿಗ , ಹಳ್ಳಾಡಿ ಮಂಜಯ್ಯ ಮುಂತಾದವರ ಸಂಸರ್ಗವು ರಾಯರ ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸಿತು . 1967 ರಲ್ಲಿ ಮೇಳದ ತಿರುಗಾಟದಿಂದ ನಿವೃತ್ತಿ ಹೊಂದುವ ತನಕ 28 ವರ್ಷಗಳ ಕಾಲ ಮಂದರ್ತಿ ಮೇಳದಲ್ಲೇ ಸೇವೆ ಸಲ್ಲಿಸಿದರು .

ತಿರುಗಾಟದಿಂದ ನಿವೃತ್ತಿ ಹೊಂದಿದರೂ ರಾಯರು ಯಕ್ಷಗಾನೀಯ ಚಟುವಟಿಕೆಗಳಿಂದ ದೂರ ಸರಿಯದಿದ್ದುದು ಯಕ್ಷರಂಗದ ಸೌಭಾಗ್ಯವೇ ಆಗತ್ತು . 1968 ರಲ್ಲಿ ಡಾ. ಶಿವರಾಮ ಕಾರಂತರು ಬ್ರಹ್ಮಾವರದಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಆರಂಭಿಸಿದಾಗ ಕೇಂದ್ರದ ಗುರುಗಳಾಗಿ ನಿಯುಕ್ತಿಗೊಂಡರು . ಈ ಮೊದಲೇ , 1961ರಿಂದಲೇ ಡಾ.ಕಾರಂತರ ಒಡನಾಟ ಹೊಂದಿದ್ದ ರಾಯರು , ಕಾರಂತರ ಯಕ್ಷಗಾನ ನೃತ್ಯ ಹಾಗೂ ಗೋಷ್ಠಿಗಳಲ್ಲಿ ಮದ್ದಲೆ ವಾದಕರು ಆಗಿದ್ದರು . ಈ ಅವಧಿಯಲ್ಲಿ ಡಾ.ಪೀಟರ್ ಕ್ಲಾಸ್ ಹಾಗೂ ಡಾ.ಮಾರ್ತಾ ಆಶ್ಟನ್ ಎಂಬ ವಿದೇಶಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದ್ದರು .ಡಾ.ಪೀಟರ್ ಕ್ಲಾಸ್ ರೊಂದಿಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ್ದರು . ಡಾ.ಮಾರ್ತ ಆಶ್ಟನ್ ರ ಯಕ್ಷಗಾನ ತಂಡದೊಂದಿಗೆ ಹಲವಾರು ಭಾರಿ ವಿದೇಶಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ , ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು . ಡಾ.ಕಾರಂತರ ತಂಡದಲ್ಲೂ ಗುರುತಿಸಿಕೊಂಡಿದ್ದರು . 1971 ರಲ್ಲಿ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ಸೇರಿ 1976 ರಲ್ಲಿ ನಿವೃತ್ತರಾಗುವ ತನಕ ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದರು .
ಹಿರಿಯಡ್ಕ ಗೋಪಾಲ ರಾಯರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಹಲವಾರು .ಅದರಲ್ಲಿ ಉಲ್ಲೇಖಿಸಲೇ ಬೇಕಾದುದು ” ಏರು ಮದ್ದಲೆ ” ಯ ಅವಿಷ್ಕಾರ , ” ಗಂಟು ಉರುಳಿಕೆ ” ಹಾಗೂ ” ಆಧುನಿಕ ಯಕ್ಷಗಾನ ಶಿಕ್ಷಣ ಪದ್ಧತಿ .” ಜೋಡಾಟಗಳು ವಿಜೃಂಭಿಸುತ್ತಿದ್ದ ಆ ಕಾಲದಲ್ಲಿ ಮೇಳಗಳ ನಡುವೆ ಪೈಪೋಟಿ ಜೋರಾಗಿತ್ತು . ಹಿಮ್ಮೇಳದ ಸ್ವರ ಏರಿಸಿ , ಪ್ರದರ್ಶನ ಕಳೆಗಟ್ಟಬೇಕಾದ ಅನಿವಾರ್ಯತೆಯನ್ನು ರಾಯರು ಮನಗಂಡರು . ಆಗಿನ ಕಾಲದ ಗಿಡ್ಡ ಕಳಸಿಗೆಯ ಮದ್ದಲೆಯ ಶ್ರುತಿ ಏರಿಸಿದರೂ, ನಿರೀಕ್ಷಿತ ಮಟ್ಟದಲ್ಲಿ ಸ್ವರ ಬಾರದ ಕಾರಣ ರಾಯರು ಏರುಮದ್ದಲೆಯನ್ನು ಆವಿಷ್ಕರಿಸಿದರು . ಇಂದಿಗೂ ಬಡಗು ತಿಟ್ಟಿನಲ್ಲಿ ಈ ಏರು ಮದ್ದಲೆ ಬಳಕೆಯಲ್ಲಿದೆ. ಗಂಟು ಉರುಳಿಕೆಯನ್ನು ಪೆರ್ಡೂರು ವೆಂಕಟ ಕಾಮತರಿಂದ ಕಲಿತು ಪ್ರದರ್ಶನಕ್ಕೆ ಅಳವಡಿಸಿದ್ದರು . ನಾಟ್ಯಗಳಲ್ಲೂ ಶಾಸ್ತ್ರೀಯತೆಯನ್ನು ಬಳಕೆಗೆ ತಂದಿದ್ದರು .
ಗೋಪಾಲರಾಯರು ಇತ್ತೀಚಿನ ವರೆಗೂ ಯಕ್ಷಗಾನದಲ್ಲಿ ಸಕ್ರಿಯರಾಗಿದ್ದರು . ಮದ್ದಲೆಯನ್ನು ನುಡಿಸುವ ಲವಲವಿಕೆ ಹೊಂದಿದ್ದರು . ಯಕ್ಷಗಾನದ ಬಗ್ಗೆ ಏನಾದರೂ ಜಿಜ್ಞಾಸೆಯೋ , ಸಮಸ್ಯೆಗಳೋ ಬಂದರೆ , ಅದಕ್ಕೆ ಸಮರ್ಪಕ ಉತ್ತರವನ್ನು ಇದಮಿತ್ಥಂ ಎಂದು ಹೇಳಬಲ್ಲ ಸಮರ್ಥರೂ ಆಗಿದ್ದರೆಂಬುದು ಹೆಮ್ಮೆಯ ವಿಚಾರ . ಮಂದರ್ತಿ ದೇವಿಯ ಪರಮ ಭಕ್ತರಾಗಿದ್ದ ರಾಯರು , ಮಂದರ್ತಿ ಮೇಳ ಹೊರಡುವ ದಿನ ಉಪಸ್ಥಿತರಿರುತ್ತಿದ್ದರು . ತಮ್ಮ 98 ನೇ ಜನ್ಮದಿನದಂದು ಹಿರಿಯಡ್ಕದ ಓಂತಿಬೆಟ್ಟಿನ ” ಸೀತಾರಾಮ ನಿಲಯ ” ದಲ್ಲಿ ಮದ್ದಲೆ ನುಡಿಸಿ ಗಮನ ಸೆಳೆದಿದ್ದರು . ದೇಶ ವಿದೇಶಗಳಲ್ಲಿ ನೂರಾರು ಸನ್ಮಾನ ಪಡೆದಿರುವ ಗೋಪಾಲರಾಯರು ಹಲವಾರು ಪ್ರಶಸ್ತಿಗಳನ್ನು ಅರ್ಹವಾಗಿ ಪಡೆದಿದ್ದಾರೆ .1972 ರಲ್ಲಿ ಕರ್ನಾಟಕ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ , 1997 ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ , 1998 ರಲ್ಲಿ ಜಾನಪದಶ್ರೀ ಪ್ರಶಸ್ತಿ , 2012 ರಲ್ಲಿ ಜಾನಪದ ಸಿರಿ ಪ್ರಶಸ್ತಿ , 2009 ರಲ್ಲಿ ದೇರಾಜೆ ಪ್ರಶಸ್ತಿಯಲ್ಲದೇ ಶಂಕರ ನಾರಾಯಣ ಸಾಮಗ ಪ್ರಶಸ್ತಿ , ಹಾರಾಡಿ ರಾಮಗಾಣಿಗ ಪ್ರಶಸ್ತಿ , ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ , ಮಾರ್ವಿ ರಾಮಕೃಷ್ಣ ಹೆಬ್ಬಾರ್ ಪ್ರಶಸ್ತಿ , ವಾದಿರಾಜ ಹೆಬ್ಬಾರ್ ಪ್ರಶಸ್ತಿ , ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು . 2018ರ ಕರ್ನಾಟಕ ರಾಜ್ಯ ಪ್ರಶಸ್ತಿ ರಾಯರ ಸಾಧನೆಯ ತುರಾಯಿಗೆ ಇನ್ನೊಂದು ಗರಿಯಾಗಿತ್ತು . ಕಳೆದ ವರ್ಷ ಡಿಸೆಂಬರ್ 15 ರಂದು ತಮ್ಮ 100 ನೇ ವಯಸ್ಸಿಗೆ ಪಾದಾರ್ಪಣೆ ಮಾಡಿ ಶತಾಯುಷಿ ಯಾಗಿದ್ದರು .
ಎಂ.ಶಾಂತರಾಮ ಕುಡ್ವ, ಮೂಡಬಿದ್ರೆ












