ಕಾರ್ಕಳ : ಮುಂಡ್ಲಿ ಸೇತುವೆಯಲ್ಲಿ ಬಿರುಕು ಕಂಡುಬಂದಿದ್ದು, ಸೇತುವೆ ಕುಸಿಯುವ ಭೀತಿ ಎದುರಾಗಿದೆ. ಮುಂಡ್ಲಿ, ಶಿರ್ಲಾಲು, ಕೆರ್ವಾಶೆ ಗ್ರಾಮಗಳನ್ನು ಕಾರ್ಕಳ ಪೇಟೆಗೆ ಸಂಪರ್ಕಿಸುವ ಈ ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ ಸ್ಥಳೀಯರು ಆತಂಕದಿಂದಲೇ ದಿನ ದೂಡುವಂತಾಗಿದೆ. 7 ಆಧಾರಸ್ತಂಭ ಹೊಂದಿರುವ ಅಂದಾಜು 100 ಮೀ. ಉದ್ದವಿರುವ ಈ ಸೇತುವೆಯ ಬಹುತೇಕ ಆಧಾರಸ್ತಂಭ ಬಿರುಕು ಬಿಟ್ಟಿದ್ದು, ಆಧಾರ ಸ್ತಂಭದಲ್ಲಿನ ಕಬ್ಬಿಣದ ರಾಡ್ ಹೊರಕಾಣುತ್ತಿದೆ.
ಮೂರು ದಶಕಗಳ ಹಿಂದೆ ನಿರ್ಮಾಣ
ಮೂರು ದಶಕಗಳ ಹಿಂದೆ ನಿರ್ಮಾಣವಾದ ಈ ಸೇತುವೆ ನಿರ್ವಾಹಣೆ ಕಾಣದೇ ತೀರ ದುಸ್ಥಿತಿಯಲ್ಲಿದೆ. ಸೇತುವೆ ಮೇಲಿಂದ ವಾಹನಗಳು ಸಂಚರಿಸುವಾಗ ಸೇತುವೆಯು ಕಂಪಿಸುತ್ತಿದೆ. ಪವರ್ ಪ್ರಾಜೆಕ್ಟ್ ನಿರ್ಮಾಣಗೊಂಡ ಬಳಿಕ ಪ್ರತಿ ವರ್ಷ ಸೇತುವೆಯ ಒಂದು ಪಾರ್ಶ್ವದ ಸಂಪರ್ಕ ರಸ್ತೆಯು ಕುಸಿಯುತ್ತಿದ್ದು, ಮಳೆಗಾಲದಲ್ಲಿ ಸಂಚಾರ ನಡೆಸಲು ಸಂಕಷ್ಟಪಡಬೇಕಾಗಿದೆ. 2014ರಲ್ಲಿ ರಭಸದಿಂದ ಹರಿದ ನೀರಿಗೆ ಸೇತುವೆಯ ಪಕ್ಕದಲ್ಲಿನ ರಸ್ತೆ ಕೊಚ್ಚಿಹೋಗಿತ್ತು. ಮಳೆಗಾಲದಲ್ಲಿ ಸುರಿವ ಭಾರಿ ಮಳೆಗೆ ನದಿ ನೀರು ರಸ್ತೆಗೆ ಸಮನಾಂತರವಾಗಿ ಹರಿಯುತ್ತಿದೆ.

ನಿರಂತರ ಮನವಿ
ಸೇತುವೆ ದುರಸ್ತಿಗಾಗ್ರಹಿಸಿ ಸ್ಥಳೀಯರು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನಿರಂತರ ಮನವಿ ಸಲ್ಲಿಸುತ್ತ ಬಂದಿದ್ದಾರೆ. ಗ್ರಾಮ ಸಭೆಗಳನ್ನು ಈ ಕುರಿತು ಸಾಕಷ್ಟು ಬಾರಿ ಆಗ್ರಹ ವ್ಯಕ್ತಪರಿಸಿ ಗಮನ ಸೆಳೆದಿದ್ದಾರೆ. ಆದರೆ, ಸೇತುವೆ ಅಭಿವೃದ್ದಿ ಮರೀಚಿಕೆಯಾಗಿಯೇ ಉಳಿದಿದೆ. ಅಪಾಯಕಾರಿಯಾಗಿರುವ ಈ ಸೇತುವೆ ಅಭಿವೃದ್ಧಿ ಕುರಿತು ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸಂಭವನೀಯ ಅಪಾಯ ತಪ್ಪಿಸುವುದು ಅತಿ ಅಗತ್ಯ.















































































