ಹೊಸಬ…

ವಿಶ್ವವನ್ನೇ
ಇಡಿಯಾಗಿ ಎತ್ತಿ ,
ಅಪ್ಪಿ ಹಿಂಸಿಸುತ್ತಾ
ತಿರುಗುತ್ತಿದ್ದಾನೆ ಈ ಹೊಸಬ
ನಮ್ಮೂರ, ನಿಮ್ಮೂರ ಗಲ್ಲಿಗಳಲ್ಲಿ

ಸಿಕ್ಕ ಸಿಕ್ಕವರ ಜೊತೆಯಾಗಿ
ಎತ್ತಿ ಹಾಕುತ್ತಾನೆ ಇಲ್ಲಿಂದಲ್ಲಿಗೆ
ಯಾರೋ ಮುನ್ನುಡಿ ಬರೆದ ದೇಹ
ಬೆನ್ನುಡಿ ಬರೆಯಲಾಗದ ಕಸಿವಿಸಿಯ
ಹೇಳಲಾಗದೆ

ಎದ್ದೆದ್ದು ಹೋದವರ
ಯಾದಿ ಅಪ್ಡೇಟ್ ಆಗಿಲ್ಲ ಇನ್ನೂ…
ಹಿರಿ ಜೀವಕ್ಕಲ್ಲ
ಕಿರಿಜೀವಕೆ ತುಸು ಕಾಳಜಿ ಚೆಲ್ಲುವ
ಹೊತ್ತು
ಹಕ್ಕಿಗಳು ಹಾರಿದ ಗೂಡಿನೊಳಗೆ
ಬದುಕು ಇದ್ದಲ್ಲೇ ಒಡೆದ ಕನ್ನಡಿ

ದೇಗುಲ, ಮಸೀದಿ,
ಚರ್ಚ್, ಗುರುದ್ವಾರದಲಿ
ಮೌನ ಮಲಗಿಸಿದವ
ಮನುಕುಲದ ನಿದ್ದೆ ಕಸಿದವ
ಒಂದೊಂದು ಮೀಟರ್ನೊಳಗಿರಿಸಿಯೂ

ಬರುತ್ತಿದ್ದಾನೆ
ನಮ್ಮ ಕೈ ಹಿಡಿದೋ, ಕಾಲಿಡಿದೋ
ನಾವೀಗ ಓಡತೊಡಗಿದ್ದೇವೆ
ಮತ್ತು
ನಮ್ಮೊಂದಿಗೆ
ಅವನೂ…

ಡಾ.  ಜಿ.ಪಿ. ಕುಸುಮಾ, ಮುಂಬಯಿ



































































































error: Content is protected !!
Scroll to Top