(ಯುವ ಲೇಖಕ ದೀಪಕ್ ಬೀರ ಪಡುಬಿದ್ರಿ ಅವರು ನಾರಾಯಣ ಗುರು ಜಯಂತಿ ನಿಮಿತ್ತ newskarkala.comಗೆ ಬರೆದ ವಿಶೇಷ ಲೇಖನ)
ಜಾತ್ಯಾತೀತ ಮನೋಭಾವದಿಂದ ಸರ್ವಜಾತಿ ಬಾಂಧವರನ್ನೂ ಸಮನಾಗಿ ಸ್ವೀಕರಿಸಿ ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟವರಿಗೆ ಶಕ್ತಿಯನ್ನು ತುಂಬಿದ ಸಂತ. ಒಂದೇ ಜಾತಿ, ಒಂದೇ ಮತ, ಒಂದೇ ದೇವರೆಂಬ ಅಮರ ಸಂದೇಶವನ್ನು ನೀಡಿ ವಿಶ್ವ ಪ್ರಸಿದ್ಧರಾದ ಈ ಮಹಾನ್ ವ್ಯಕ್ತಿ ಬೇರಾರೂ ಅಲ್ಲ. ಅವರೇ ಮಹಾಸಂತ, ದಾರ್ಶನಿಕ, ಸಮಾಜ ಸುಧಾರಕ, ವಿಶ್ವ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು. ಆಧ್ಯಾತ್ಮಿಕ ಸಾಧಕ ರಾಗಿದ್ದ ಅವರು ಓರ್ವ ಶ್ರೇಷ್ಠ ಸಾಮಾಜಿಕ ಚಿಂತಕರಾಗಿದ್ದರು. ನಾರಾಯಣ ಗುರುಗಳು ಸಮಾಜದ ಎಲ್ಲ ಮಗ್ಗುಲುಗಳತ್ತ ದೃಷ್ಟಿ ಹರಿಸುವ ಮೂಲಕ ಸಮಾಜದಲ್ಲಿರುವ ಅನಿಷ್ಟ ಪದ್ಧತಿ, ಅಸ್ಪೃಶ್ಯತೆ, ಬಡತನ, ಶೋಷಣೆ, ದೌರ್ಜನ್ಯಗಳಿಂದ ವರ್ಗೀಕರಿಸಿದ ಮನುಷ್ಯ ಕಲ್ಪಿತ ಕೃತಕ ಗೋಡೆಯನ್ನು ಕೆಡವಿ ಒಂದು ಸುಂದರ ಸಮಾಜದ ನಿರ್ಮಾಣ ಅವರ ಕನಸಾಗಿತ್ತು.
ಇತರ ಧರ್ಮಗಳ ಬಗ್ಗೆ ಗುರುಗಳ ನಿಲುವು
ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದೂ ಧರ್ಮದಲ್ಲಿ ಜನಿಸಿದರೂ ಆ ಧರ್ಮವೇ ಶ್ರೇಷ್ಠವೆಂದು ಭಾವಿಸದೆ ಇತರ ಧರ್ಮಗಳನ್ನು ಗೌರವಿಸಿದರು. ಇದಕ್ಕೆ ಸಾಕ್ಷಿಯಾಗಿ ಸನ್ಯಾಸಿ ಯಾಗಿದ್ದಾಗ ಅವರು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಗ್ರಂಥಗಳ ಸಾರವನ್ನು ತಿಳಿಯ ಬಯಸಿ ಅವನ್ನು ಆಳವಾಗಿ ಅಧ್ಯಯನ ಮಾಡಿದರು. ಇದೇ ರೀತಿ ಹಲವಾರು ಧರ್ಮಗುರುಗಳು ಇವರ ಬಗ್ಗೆ ತೋರುತ್ತಿದ್ದ ವಿಶ್ವಾಸ, ಗೌರವ ಅವರ ಸರಳತೆಗೆ ನಿದರ್ಶನವಾಯಿತು. ಈ ಧರ್ಮಗಳ ಜನರೊಂದಿಗೆ ಅವರು ಸಹ ಭೋಜನವನ್ನು ಮಾಡುವ ಮೂಲಕ ಧಾರ್ಮಿಕ ಬಾಂಧವ್ಯ ಬೆಸೆಯಲು ನಾಂದಿಯಾದರು. ಅವರ ಮಹತ್ವ ಅರಿತ ಕ್ರೈಸ್ತ ಪಾದ್ರಿಯೊಬ್ಬರು ತಮ್ಮ ಧರ್ಮ ಸ್ವೀಕರಿಸಿ ಆಮಂತ್ರಿಸಿದಾಗ ಸೌಜನ್ಯದಿಂದ ತಿರಸ್ಕರಿಸಿದರು. ಇತರೆ ಧರ್ಮದವರು ಇವರ ಅನುಯಾಯಿಗಳಾಗಿದ್ದರು. ನಾರಾಯಣ ಗುರುಗಳು ಜಾತಿ, ಧರ್ಮ, ಪಂಗಡವೆಂದು ಕಲಹ ಮಾಡದೆ ನಾವು ಏನಾಗಿದ್ದೇವೋ ಅದರಲ್ಲಿ ಜೀವನ ಸಾಗಿಸಬೇಕೆಂದು ಸಾರಿದರು.
ಸಾಮಾಜಿಕ ಬದಲಾವಣೆಯಲ್ಲಿ ಗುರುಗಳು…
ಸಾಮಾಜಿಕ ವಿಷಮತೆಯ ಸಮಸ್ಯೆಗಳ ಮೂಲ ತಿಳಿದಿದ್ದ ಗುರುಗಳು ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದರು. ದೀನ ದಲಿತರ ಸಂಘಟನೆಯ ಮತ್ತು ಜ್ಞಾನದ ಅಭಾವವನ್ನು ಮನಗಂಡು ಸಂಘಟನೆಯಿಂದ ಬಲಯುತರಾಗಿ ಎಂದು. ಅಂದಿನ ಕಾಲದಲ್ಲಿ ದೇವರು ಮೇಲ್ವರ್ಗದವರ ಸೊತ್ತಾಗಿತ್ತು. ದೇವಾಲಯ ಪ್ರವೇಶವು ಕೆಳವರ್ಗದವರಿಗೆ ನಿಷಿದ್ಧವಾಗಿತ್ತು. ಇಂತಹ ಸಂದರ್ಭದಲ್ಲಿ ಗುರುಗಳು ಮಡಿ ದೇವರುಗಳು ಪೂಜಿಸಲು ಅಸಾಧ್ಯವೆಂದಾದರೆ ಮೈಲಿಗೆ ದೇವರನ್ನು ಪೂಜಿಸೋಣವೆಂದು ಅರವಿಪುರಂನಲ್ಲಿ ದೇವಾಲಯವನ್ನು ಸ್ಥಾಪಿಸಿದರು. ಅವರ ಪ್ರಕಾರ ಧರ್ಮದ ದೇವರುಗಳು ಯಾರ ಖಾಸಗಿ ಸೊತ್ತಲ್ಲ. ಪ್ರತಿಯೊಬ್ಬರಿಗೂ ದೇವರು ಹೊಂದುವ ಅಥವಾ ಪೂಜಿಸುವ ಹಕ್ಕಿದೆ. ಅವರು ಸ್ಥಾಪಿಸಿದ ದೇವಾಲಯದಲ್ಲಿ ಎಲ್ಲಾ ಜಾತಿಯವರಿಗೂ ಅವಕಾಶ ನೀಡಲಾಯಿತು. ಈ ಸ್ಫೂರ್ತಿಯಿಂದ ಕೇರಳ ಸೇರಿದಂತೆ ಹಲವೆಡೆ ದೇವಸ್ಥಾನಗಳು ಹುಟ್ಟಿಕೊಂಡವು. ಇದಕ್ಕೆ ಮೇಲ್ವರ್ಗದವರು ವಿರೋಧ ವ್ಯಕ್ತಪಡಿಸಿದರೂ ಗುರುಗಳೆದುರು ಅವೆಲ್ಲವೂ ವಿಫಲವಾಯಿತು.
ವಿದ್ಯೆಯಿಂದ ಸ್ವತಂತ್ರರಾಗಿ ಎಂಬ ಆಶಯದಂತೆ ಹಲವೆಡೆ ಶಾಲೆಗಳನ್ನು ತೆರೆದರು. ಇಲ್ಲಿ ಜಾತಿ ಮತ್ತು ಭೇದವಿಲ್ಲದೆ ಎಲ್ಲರಿಗೂ ಕಲಿಯಲು ಅವಕಾಶ ನೀಡಲಾಯಿತು. ಕೆಳವರ್ಗದವರಿಗೆ ಸಂಸ್ಕೃತ ಕಲಿಸುವ ಉದ್ದೇಶದಿಂದ ಕೇರಳದಲ್ಲಿ ಅದ್ವೈತಾಶ್ರಮ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದರು. ಶ್ರಮಿಕ ವರ್ಗದವರಿಗೆ ರಾತ್ರಿ ಶಾಲೆಗಳ ಸ್ಥಾಪನೆಗೆ ಚಾಲನೆ ನೀಡಿದರು. ಇಂದಿಗೂ ನಾರಾಯಣ ಗುರುಗಳ ಹೆಸರಿನಲ್ಲಿ ಹಲವಾರು ವಿದ್ಯಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ನಾರಾಯಣಗುರುಗಳು ಸಂಸ್ಕೃತ, ತಮಿಳು, ಮಲಯಾಳಂಗಳಲ್ಲಿ ಭಜನೆ, ಸಂಕೀರ್ತನೆ ಗಳನ್ನು ರಚಿಸಿದ್ದಾರೆ.
ಸಾರ್ವಕಾಲಿಕವಾದ ಗುರುಗಳ ಸಂದೇಶಗಳು
ತಮ್ಮ ಸಂದೇಶದಲ್ಲಿ ಗುರುಗಳು ಮತೀಯ ಸಂಕುಚಿತ ಮನೋಭಾವನೆಯನ್ನು, ಜಾತಿ-ಧರ್ಮದ ಅತಿಯಾದ ಮೋಹಕ್ಕೆ ಒಳಗಾಗದಿರುವಂತೆ ಕರೆ ನೀಡಿದ್ದಾರೆ. ಗುರುಗಳ ಆಯ್ದ ಸಂದೇಶಗಳು…
*ಜ್ಞಾನ ಮಾತ್ರ ಸರ್ವತ್ರ ಪ್ರಕಾಶಿಸುತ್ತದೆ.ಬೇರೆ ಯಾವುದೂ ಅಲ್ಲ. ಯಾವುದು ಪ್ರಕಾಶಿಸುವುದಿಲ್ಲವೋ ಅದು ಸತ್ತ ಹಾಗೆ. ಆದುದರಿಂದ ಜ್ಞಾನ ಸಂಪಾದನೆ ನಮ್ಮ ಕರ್ತವ್ಯವಾಗಿರಬೇಕು.
*ತನ್ನಂತೆ ಪರರಿಗೂ ಹಿತವನ್ನು ಬಯಸುವುದು ನಿಜವಾದ ಸಮಾಜ ಸೇವೆ. ಜನಸೇವೆ ನಮ್ಮ ಋಣದ ಹೊರೆ ಹಗುರವಾಗಿಸುವ ಯತ್ನ. ನಾವು ಉಪಕಾರ ಮಾಡುತ್ತೇವೆ ಎನ್ನುವ ಭ್ರಮೆ ಸರಿ ಅಲ್ಲ.
*ಬದುಕು ನಿಂತ ನೀರಾಗಬಾರದು. ನಿರಂತರ ಹರಿಯುತ್ತಿರಬೇಕು. ಆಗ ಮಾತ್ರ ಬದುಕಿನಲ್ಲಿ ಲವಲವಿಕೆ ಉಳಿದುಕೊಳ್ಳಲು ಸಾಧ್ಯ.
*ಒಳ್ಳೆಯ ಗುಣ ಸಂಸ್ಕಾರದಿಂದ ಬೆಳಗುತ್ತದೆ. ಬರಿಯ ಹುಟ್ಟಿನಿಂದ ಯಾರೂ ದೊಡ್ಡವರಾಗುವುದಿಲ್ಲ. ಒಳ್ಳೆಯ ಗುಣದಿಂದ ಉತ್ತಮ ರಾಗುತ್ತಾರೆ.
*ಆತ್ಮವಿಶ್ವಾಸ ಉಳಿಸಿಕೊಂಡು ಮಿಕ್ಕೆಲ್ಲವನ್ನೂ ಕಳೆದುಕೊಂಡರೂ ಚಿಂತೆಯಿಲ್ಲ. ಏಕೆಂದರೆ ಆತ್ಮವಿಶ್ವಾಸದ ಬಲದಿಂದ ಎಲ್ಲವನ್ನೂ ಸಂಪಾದಿಸಬಹುದು.
ಶ್ರೀನಾರಾಯಣಗುರುಗಳು 1928 ಸೆಪ್ಟೆಂಬರ್ 21 ರಂದು ಶಿವಗಿರಿಯಲ್ಲಿ ಸಮಾಧಿಸ್ಥರಾದರು. ಭಾರತ ಸರಕಾರ ಗುರುಗಳ ಗೌರವಾರ್ಥವಾಗಿ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿದೆ.
ದೀಪಕ್ ಕೆ.ಬೀರ, ಪಡುಬಿದ್ರಿ








































































