ಶೋಷಿತರ ಧ್ವನಿಯಾದ ನಾರಾಯಣ ಗುರು

(ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್‌ ನಾರಾಯಣ ಗುರು ಜಯಂತಿ ನಿಮಿತ್ತ newskarkala.comಗೆ ಬರೆದ ವೊಶೇಷ ಲೇಖನ)
ಒಂದು ದೇಶದ ಇತಿಹಾಸವನ್ನು ಕೆದಕಿದಾಗ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್‌ ಸಾಧಕರು ಬಹಳಷ್ಟು ಮಂದಿ ಕಾಣಸಿಗುತ್ತಾರೆ. ನೆಲ, ಜಲ ಮತ್ತು ಸಂಸ್ಕೃತಿಯೊಂದಿಗೆ ಮಿಳಿತವಾದ ನಮ್ಮ ಬದುಕು ಪರಂಪರೆಯ ಕೊಂಡಿಯೊಂದಿಗೆ ಬೆಸೆದಿರುತ್ತದೆ. ಈ ಪರಂಪರೆಯು ಕೆಲವೊಮ್ಮೆ ಜಾತಿ, ಮತ, ಧರ್ಮದ ಹಿನ್ನೆಲೆಯಲ್ಲಿ ಸ್ವಹಿತದ ಕಾರ್ಯವನ್ನು ಕಾಯ್ದುಕೊಂಡು ಬಂದಿರುವುದು ಉಂಟು. ಹೀಗಿರುವಾಗ ಭಾರತದಲ್ಲಿ ಪರಂಪರೆಯನ್ನು ಸೃಷ್ಟಿಸಿದ ಮತ್ತು ಸಂಸ್ಕೃತಿಯಲ್ಲಿ ಸಾಕಷ್ಟು ದೋಷಗಳನ್ನು ಒಳಗೊಂಡು ಪ್ರಭುತ್ವದ ಹಿತರಕ್ಷಣೆಗೆ ಪೂರಕವಾಗಿದ್ದಿತು.
ಭಾರತ ಬಹು ಸಂಸ್ಕೃತಿಯ ನೆಲೆವೀಡು. ಇಲ್ಲಿ ರಾಜ ಪ್ರಭುತ್ವದಿಂದ ಸಾಮ್ರಾಜ್ಯಶಾಹಿ ಧೊರಣೆಗೆ ಕಾಲಿಟ್ಟು ಬಂಡವಾಳಶಾಹಿ ಮತ್ತು ಜಮೀನ್ದಾರಿಕೆಯ ಅಡಿಯಲ್ಲಿ ಜಾತಿ ವರ್ಗಗಳಾಗಿ ವಿಂಗಡನೆಗೊಂಡು, ಜಾತಿ ವರ್ಗಗಳಾಗಿ ಕಲುಷಿತಗೊಂಡ ಕಾಲಘಟ್ಟದಲ್ಲಿ ಸಮಾಜ ಸುಧಾರಣೆ ಅತಿ ಅಗತ್ಯವಾಗಿತ್ತು. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ರಾಜಾರಾಮ ಮೋಹನ್ರಾಯ್‌ , ಅನ್ನಿ ಬೆಸೆಂಟ್‌, ಜ್ಯೋತಿಬಾ ಫುಲೆ, ಮಹಾತ್ಮ ಗಾಂಧಿ ಮತ್ತು ವಿವೇಕಾನಂದರಂಥ ಸಮಾಜ ಸುಧಾರಕರು ಸಾಮಾಜಿಕ ಕ್ರಾಂತಿಗಾಗಿ ಶ್ರಮಿಸಿದ್ದರು. ಅದೇ ರೀತಿ ದಕ್ಷಿಣ ಭಾರತದಲ್ಲಿ ವರ್ಗ ಮತ್ತು ವರ್ಣ ತಾರತಮ್ಯ ನೀತಿ ಮುಗಿಲು ಮುಟ್ಟಿದ್ದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಡಿದ ಕೇರಳದ ಶ್ರೀ ನಾರಾಯಣ ಗುರುಗಳು ಪ್ರಮುಖರಾಗುತ್ತಾರೆ. ತಾರತಮ್ಯ ನೀತಿಯನ್ನು ಹೋಗಲಾಡಿಸಲು ಬಹುದೊಡ್ಡ ಮಾರ್ಗವನ್ನು ಮುಂದಿನ ತಲೆಮಾರಿಗೆ ಹಾಕಿಕೊಟ್ಟವರು ಶ್ರೀ ನಾರಾಯಣ ಗುರುಗಳು.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಈ ಘೋಷಣೆಯ ಮೂಲಕ ಸಮಾಜದ ಕ್ರಾಂತಿಗೆ ನಾಂದಿ ಹಾಡಿದವರು ನಾರಾಯಣ ಗುರುಗಳು. ಜನರನ್ನು ಶೋಷಣೆಗಳಿಂದ ಮುಕ್ತರನ್ನಾಗಿ ಮಾಡಲು, ಜೀವನ ಸುಧಾರಿಸಲು ಸಂಘರ್ಷಕ್ಕಿಂತ ಭಿನ್ನವಾದ ಚಳವಳಿಯನ್ನು ಮುನ್ನಡೆಸಿದರು. ದೇವಾಲಯಗಳಲ್ಲಿ ತುಳಿತಕ್ಕೆ ಒಳಗಾದ ವರ್ಗಕ್ಕೆ ಪ್ರವೇಶ ಸಿಗದೆ ಹೋದಾಗ ರಕ್ತ ಕ್ರಾಂತಿಯನ್ನು ಮಾಡದೆ ಅದೇ ಜನರಿಗಾಗಿ ದೇವಾಲಯಗಳ ಪರಂಪರೆಯನ್ನು ನಿರ್ಮಿಸಿಕೊಟ್ಟವರು ಅವರು. ಸಮಾಜದಲ್ಲಿ ಅಸಮಾನತೆಯನ್ನು ತೊಡೆದು ಹಾಕಲು ಕ್ರಾಂತಿಕಾರಕ ಮಾರ್ಗವನ್ನು ಸೃಷ್ಟಿಸಿದ ಗುರುಗಳು ಹಲವು ಪ್ರತಿರೋಧಗಳನ್ನು ಎದುರಿಸಿದರು. 1912ರಲ್ಲಿ ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನವನ್ನು ಸ್ಥಾಪಿಸಿ ಕನ್ನಡ ನಾಡಿನೊಂದಿಗೆ ನಂಟನ್ನು ಬೆಸೆದರು.
ಕೇರಳದ ತಿರುವನಂತಪುರಂ ಸಮೀಪದ ಚೆಂಬಳಂತಿ ಗ್ರಾಮದಲ್ಲಿ ಜನಿಸಿದ ಶ್ರೀ ನಾರಾಯಣ ಗುರುಗಳು ಮುಂದೆ ಅಧ್ಯಯನ ಮಾಡಿ ಅಪಾರ ಜ್ಞಾನ ಸಂಪಾದಿಸಿದರು. ಸಂಸ್ಕೃತ, ತಮಿಳು ಮತ್ತು ಮಲಯಾಳಂಗಳಲ್ಲಿ ಅಗಾಧ ಪಾಂಡಿತ್ಯವನ್ನು ಪಡೆದರು. ಸಮಾಜ ಸುಧಾರಣೆಯ ಜೊತೆಗೆ ಹತ್ತಾರು ಕೃತಿಗಳನ್ನು ಸಂಪಾದಿಸಿದರು. ಶಂಕರಾಚಾರ್ಯರ ಅದ್ವೈತ ದರ್ಶನದಿಂದ ಪ್ರಭಾವಿತರಾದರು. ತಾರತಮ್ಯ ನೀತಿಯನ್ನು ಖಂಡಿಸುತ್ತಾ ವೈದಿಕ ಸಂಸ್ಕೃತಿಯಲ್ಲಿನ ಕುರುಡು ನಂಬಿಕೆಗಳನ್ನು ನಿರಾಕರಿಸಿ ಶೋಷಿತರಿಗಾಗಿಯೇ ಪ್ರತ್ಯೇಕ ಶಿವ ದೇವಾಲಯಗಳನ್ನು ಸ್ಥಾಪಿಸಿದರು. ನಂಬೂದಿರಿ ಬ್ರಾಹ್ಮಣರ ಆಕ್ಷೇಪಗಳಿಗೆ ಉತ್ತರಿಸುತ್ತಾ ನಮ್ಮ ಶಿವನು ಈಳವನೇ , ಬ್ರಾಹ್ಮಣನಲ್ಲ ಎಂದು ದಿಟ್ಟತನದ ಉತ್ತರ ನೀಡಿದರು. ದೇವರಿಗೆ ಜಾತಿ ಎಂಬುದಿಲ್ಲ. ಶಿವ ತತ್ವವನ್ನು ತಿಳಿಯುವ ಹಕ್ಕು ಯಾವುದೇ ಜಾತಿಯ ಗುತ್ತಿಗೆಯಲ್ಲ ಎಂದರು. ದೇವಸ್ಥಾನಗಳು ಮನುಷ್ಯನ ವ್ಯಕ್ತಿತ್ವದ ವಿಕಾಸ ಮತ್ತು ಅಧ್ಯಾತ್ಮ ಸಾಧನೆಯ ಕೇಂದ್ರವಾಗಬೇಕೆಂದು ಶ್ರಮಿಸಿದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ಎಲ್ಲ ವರ್ಗದವರಿಗೂ ಶಾಸ್ತ್ರ ಮತ್ತು ಅರ್ಚನಾ ವಿಧಿಗಳನ್ನು ಕಲಿಯುವ ಅವಕಾಶ ನೀಡಿದರು. ಜನ ಸಾಮಾನ್ಯರಿಗೆ ಶುಚಿತ್ವದ ಬೋಧನೆ ಮಾಡುವ ಮೂಲಕ ಬಡತನ ಅದಕ್ಕೆ ಅಡ್ಡಿಯಲ್ಲ ಎಂದು ಅರಿವು ಮೂಡಿಸಿದರು. ದೇವಾಲಯಗಳಲ್ಲಿ ಪುಸ್ತಕದ ಸಂಗ್ರಹವಿರಬೇಕು ಎಂದರು. ದೇವಾಲಯವೊಂದರ ಗರ್ಭಗುಡಿಯಲ್ಲಿ ಮೂರ್ತಿಯ ಬದಲು ಕನ್ನಡಿಯೊಂದನ್ನು ಸ್ಥಾಪಿಸಿ ಆತ್ಮ ಚಿಂತನೆಯೇ ಅಧ್ಯಾತ್ಮದ ಮೊದಲ ಮೆಟ್ಟಿಲು ಎಂದು ಪ್ರತಿಪಾದಿಸಿದರು. ಮದ್ಯಪಾನದ ವಿರುದ್ಧ ಹೋರಾಟ ನಡೆಸಿದರು.
ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮ ಗಾಂಧಿಯವರ ಸತತ ಸಂಪರ್ಕ ಮತ್ತು ವಿಚಾರ ವಿನಿಮಯಗಳಿಂದ ಸಮಾಜದ ಅನಿಷ್ಟ ಪದ್ಧತಿಗಳ ನಾಶಕ್ಕೆ ಹೋರಾಟ ನಡೆಸಿದರು.ಹೀಗೆ ಅವರ ಬದುಕಿನ ಆದರ್ಶಗಳನ್ನು ಇಂದಿನ ತಲೆಮಾರಿನವರು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಎಲ್ಲರಿಗೂ ಶ್ರೀ ನಾರಾಯಣ ಗುರುಗಳ ಆಶೀರ್ವಾದ ದೊರೆಯಲಿ.
ಡಾ. ಮಂಜುನಾಥ ಕೋಟ್ಯಾನ್
ಪ್ರಾಂಶುಪಾಲರು, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ















































































































































error: Content is protected !!
Scroll to Top