ಸುಪ್ರಸಿದ್ಧ ಛಾಂದಸರು , ಪ್ರಸಂಗಕರ್ತರು ಹಾಗೂ ತಮ್ಮ ಯೌವನ ಕಾಲದಲ್ಲಿ ವೇಷಧಾರಿಯಾಗಿದ್ದ ಡಾ.ಶಿಮಂತೂರು ನಾರಾಯಣ ಶೆಟ್ಟರು ಯಕ್ಷರಂಗದ ಹಾಗೂ ಛಂದೋಕ್ಷೇತ್ರದ ಒಂದು ಅನರ್ಘ್ಯ ರತ್ನ . ಛಂದೋಕ್ಷೇತ್ರದಲ್ಲಿ ಇದಮಿತ್ತಂ ಎಂದು ಅಧಿಕಾರವಾಣಿಯಲ್ಲಿ ಹೇಳಬಲ್ಲ ವಿದ್ವಾಂಸರು . ಸುಮಾರು 1030 ವರ್ಷಗಳ ಹಿಂದೆ ಛಂದೋಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ ನಾಗವರ್ಮನ ನಂತರದಲ್ಲಿ ಈ ರೀತಿಯ ಸಾಧನೆ ಮಾಡಿದವರು ಶೆಟ್ಟರು .ಹಾಗಾಗಿಯೇ ಅವರಿಗೆ ಅಭಿನವ ನಾಗವರ್ಮ ಎಂಬ ಬಿರುದು ಅನ್ವರ್ಥವಾಗಿ ಸಂದಿತ್ತು .
1-2-1934ರಲ್ಲಿ ಎಳತ್ತೂರು ಗುತ್ತು ಅಚ್ಚಣ್ಣ ಶೆಟ್ಟಿ – ಕಮಲಾಕ್ಷಿ ದಂಪತಿಯರ ಪುತ್ರರಾಗಿ ಜನಿಸಿದ ಶೆಟ್ಟರು ಬಾಲ್ಯದಲ್ಲೇ ಯಕ್ಷಗಾನದ ಸೆಳೆತಕ್ಕೊಳಗಾದವರು . ಇವರ ಮನೆತನದಲ್ಲಿ ನೂರಾರು ಮಂದಿ ಯಕ್ಷಗಾನ ಕಲಾವಿದರು . ಶೆಟ್ಟರು ಹುಟ್ಟುವಾಗ , ತೊಟ್ಟಿಲಿಗೆ ಹಾಕುವ ಕಾರ್ಯಕ್ರಮದಂದು ಪುತ್ರಕಾಮೇಷ್ಠಿ ತಾಳಮದ್ದಳೆ ನಡೆಸಿದ್ದರು . ಶೆಟ್ಟರ ಅಜ್ಜ ( ತಾಯಿಯ ಸೋದರ ಮಾವ ) ಶೇಷ ಶೆಟ್ಟರು ಯಕ್ಷಗಾನದ ದೊಡ್ಡ ಅರ್ಥದಾರಿಗಳು ಹಾಗೂ ಯಕ್ಷಗಾನ ಪೋಷಕರು . ಹಾಗಾಗಿ ಶೆಟ್ಟರ ಮನೆಯಲ್ಲಿಯೇ ಯಕ್ಷಗಾನದ ಒಂದು ತಂಡವೇ ಇತ್ತಲ್ಲದೇ ಹಿಮ್ಮೇಳದ ಪರಿಕರಗಳೆಲ್ಲವೂ ಇದ್ದವು . ಶೇಷ ಶೆಟ್ಟರ ಮಗಳು ವಾರಿಜ ಅಂದಿನ ಕಾಲದ ಉತ್ತಮ ನಾಟಕ ರಚನೆಗಾರ್ತಿ ಹಾಗೂ ಕಲಾವಿದೆ .ಹೀಗೆ ನಾರಾಯಣ ಶೆಟ್ಟರಿಗೆ ಬಾಲ್ಯದಲ್ಲೇ ಯಕ್ಷಗಾನ ಮತ್ತು ನಾಟಕದ ಅಂಟು ನಂಟಿತು .
ಎತ್ತರದ ದೃಢಕಾಯದ ಶೆಟ್ಟರು ಶಾಟ್ ಪುಟ್ ಮುಂತಾದ ಆಟೋಟ ಸ್ಪರ್ಧೆಯಲ್ಲಿ ಅನೇಕ ಬಹುಮಾನ ಗಳಿಸಿದ್ದರು . ಭಾಷಣ , ಕಾವ್ಯವಾಚನ , ನಾಟಕಗಳಲ್ಲಿ ಭಾಗವಹಿಸಿ ಅಲ್ಲೆಲ್ಲಾ ಪ್ರಥಮ ಬಹುಮಾನ ಗಳಿಸಿ ಮಿಂಚಿದವರು .ಆರನೇ ತರಗತಿಯಲ್ಲಿರುವಾಗಲೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ್ದಲ್ಲದೇ, ಕಬ್ಬಿಣದ ಕಡಲೆ ಎನಿಸಿದ ನಾಗವರ್ಮನ ಛಂದೋಂಬುಧಿ , ಕೇಶಿರಾಜನ ಶಬ್ದಮಣಿ ದರ್ಪಣ , ಹೇಮಚಂದ್ರನ ಶಬ್ದಾನುಶಾಸನ ಮುಂತಾದ ಶಾಸ್ತ್ರ ಗ್ರಂಥಗಳನ್ನು ಅಭ್ಯಸಿಸಿ ಕಂಠಪಾಠ ಮಾಡಿಕೊಂಡಿದ್ದರು . ತಮ್ಮ 12 ನೇ ಹರೆಯದಲ್ಲೇ ಸಂವರ್ತ ಪ್ರತಾಪ , ಪದ್ಮಾವತಿ ಪರಿಣಯ ಎಂಬ ಎರಡು ಪ್ರಸಂಗ ರಚಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು . ಇದನ್ನು ಮೆಚ್ಚಿದ ಅಂದಿನ 6 ನೇ ತರಗತಿಯ ಕನ್ನಡ ಅಧ್ಯಾಪಕರಾದ ಸದಾಶಿವ ಉಪಾಧ್ಯಾಯರು ಪುಟ್ಟ ಬಾಲಕ ನಾರಾಯಣನನ್ನು ಕಟೀಲು ಕ್ಷೇತ್ರದ ಅಂದಿನ ಅಸ್ರಣ್ಣರಾದ ದಿ.ಲಕ್ಷ್ಮಿನಾರಾಯಣ ಅಸ್ರಣ್ಣರ ( ಈಗಿನ ಲಕ್ಷ್ಮೀನಾರಾಯಣ ಅಸ್ರಣ್ಣರ ಪಿತಾಮಹ , ದಿ. ಗೋಪಾಲಕೃಷ್ಣ ಅಸ್ರಣ್ಣರ ತಂದೆ ) ಬಳಿಗೆ ಕರೆದೊಯ್ದಾಗ ಅಸ್ರಣ್ಣರ ಪ್ರೇರಣೆಯಿಂದಾಗಿ ತಮ್ಮ 12 ನೇ ವಯಸ್ಸಿನಲ್ಲೇ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ ರಚಿಸಿದರು . ಅಸ್ರಣ್ಣರು ಪ್ರತೀದಿನ ಕಥೆ ಹೇಳುವುದು , ನಾರಾಯಣ ಅದಕ್ಕೆ ಪದ್ಯ ರಚಿಸುವುದು – ಹೀಗೆ

ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಯಾಯಿತು . ಈ ಸಂದರ್ಭದಲ್ಲಿ ಪ್ರಸಂಗ ರಚಿಸುವಾಗ ಎರಡು ಭ್ರಮರಗಳು ಇವರಿಬ್ಬರ ಮಧ್ಯೆ ಪ್ರದಕ್ಷಿಣಾಕಾರದಲ್ಲಿ ಸುತ್ತುತ್ತಿದ್ದವು . ಇದು ಭ್ರಮರಾಂಬಿಕೆಯ ಅನುಗ್ರಹವೇ ಎಂಬುದು ಖಚಿತವೇ . ಬಹುಶಃ ಯಕ್ಷಗಾನದ ಚರಿತ್ರೆಯಲ್ಲಿ ” ಕ್ಷೇತ್ರ ಮಹಾತ್ಮೆ ” ಗಳ ಹುಟ್ಟಿಗೆ ಶೆಟ್ಟರೇ ಮೂಲ ಕವಿಗಳಿರಬೇಕು . ಇಂದಿಗೂ ಕಟೀಲು ಮೇಳದಲ್ಲಿ ಶೆಟ್ಟರ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವೇ ಚಾಲ್ತಿಯಲ್ಲಿರುವುದು . ದಿ. ಅಗರಿ ಶ್ರೀನಿವಾಸ ಭಾಗವತರನ್ನು ಗುರುಗಳೆಂದು ಮನಸಾ ಸ್ವೀಕರಿಸಿ ಏಕಲವ್ಯನಂತೆ ಸಾಧನೆ ಮಾಡಿದವರು ಶೆಟ್ಟರು . ದಿ.ಶೇಣಿ ಗೋಪಾಲಕೃಷ್ಣ ಭಟ್ ಹಾಗೂ ದಿ.ಮಲ್ಪೆ ರಾಮದಾಸ ಸಾಮಗರಲ್ಲೂ ಗುರುಭಾವನೆ ಹೊಂದಿದ್ದರು . ಯಕ್ಷರಂಗದ ಎಲ್ಲಾ ದಿಗ್ಗಜರ ಒಡನಾಟ ಹೊಂದಿದ್ದ ಶೆಟ್ಟರಲ್ಲಿ ಸಮಾಲೋಚಿಸಲು ಬರುವವರ ಸಂಖ್ಯೆ ಅಪಾರ .
ನಂತರದಲ್ಲೂ ಶೆಟ್ಟರು ಹಲವಾರು ಪ್ರಸಂಗ ರಚಿಸಿದ್ದಾರೆ . ಸೊರ್ಕುದ ಸಿರಿಗಿಂಡೆ , ಬಿರ್ದ್ ದ ಬೈರವೆರ್ , ಬೆಂಗ್ ದ ಬಾಲೆ ನಾಗಿ ಮುಂತಾದ ತುಳು ಪ್ರಸಂಗಗಳು ಕರ್ಣಾಟಕ ಮೇಳದಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು . ರಾಜಮುದ್ರಿಕೆ , ಶ್ರೀಕೃಷ್ಣ ದೇವರಾಯ , ದೀಕ್ಷಾ ಕಂಕಣ ಮುಂತಾದವು ಪೆರ್ಡೂರು ಮೇಳದಲ್ಲಿ ಜಯಭೇರಿ ಬಾರಿಸಿತ್ತು . ಶ್ರೀಕೃಷ್ಣ ಪಾರಿಜಾತ ಎಂಬ ತುಳು ಪೌರಾಣಿಕ ಪ್ರಸಂಗದೊಂದಿಗೆ ಇಂಗ್ಲಿಷ್ ನಲ್ಲಿ ಮಾಗದ ವಧೆ ಯನ್ನೂ ರಚಿಸಿದ್ದರು . ರಾಣಾ ಪ್ರತಾಪಸಿಂಹ , ಸಾಮ್ರಾಟ್ ಅಶೋಕ , ಗೋವಾ ದುರಂತ , ಕೃಷಿವಿಜಯ , ಪಂಜುರ್ಲಿ ಸಂಧಾನ , ಕಂಡತಪುಣಿ ಕಾಳಗ ಮುಂತಾದ ಸಮಕಾಲೀನ ಸಮಸ್ಯೆಗಳನ್ನು ಬಿಂಬಿಸುವ ಪ್ರಸಂಗವನ್ನೂ ರಚಿಸಿದ್ದರು . ಕನ್ನಡ , ತುಳು , ಇಂಗ್ಲಿಷ್ ಭಾಷೆಯಲ್ಲಿ ಪ್ರಸಂಗ ರಚಿಸಿದ ಸಾಧನೆ ಶೆಟ್ಟರದು . ಇವರ ಪ್ರಸಂಗಗಳ ಪದ್ಯಗಳು ಕೇವಲ ಪದಗಳ ಜೋಡಣೆಯಲ್ಲ . ಶಬ್ದಶಿಲ್ಪ , ಶ್ಲೇಷಾರ್ಥ , ವರ್ಣನೆ , ಗರ್ಭಕವಿತೆ , ಗೂಢ ಚಿತ್ರ ಮುಂತಾದ ಕಾವ್ಯಲಕ್ಷಣ ಹೊಂದಿರುವುದು ಗಮನಾರ್ಹ . ಇಂದಿಗೆ 1030 ವರ್ಷಗಳ ಹಿಂದೆ , ಕ್ರಿ.ಶ.990 ರಲ್ಲಿ ನಾಗವರ್ಮ ಕವಿ ರಚಿಸಿದ ಛಂದೋಂಬುಧಿ ಕನ್ನಡದ ಮೊದಲ ಶಾಸ್ತ್ರ ಗ್ರಂಥ . ನಂತರದಲ್ಲಿ ಯಕ್ಷಗಾನ ಛಂದೋಂಬುಧಿ ಎಂಬ ಶ್ರೇಷ್ಠ ಗ್ರಂಥವನ್ನು ರಚಿಸಿದವರು ಡಾ.ಶಿಮಂತೂರು ನಾರಾಯಣ ಶೆಟ್ಟರು . ಈ ಕೃತಿಗಾಗಿಯೇ ಶೆಟ್ಟರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದ್ದು . ಇದರಿಂದಲೇ ಶೆಟ್ಟರು ಅಭಿನವ ನಾಗವರ್ಮ ಎಂಬ ಅನ್ವರ್ಥ ಬಿರುದಿಗೆ ಮಾನ್ಯರಾದುದು . ಯಕ್ಷಗಾನ ಛಂದೋಂಬುಧಿಯು ಯಕ್ಷಗಾನ ರಂಗ ಸಾಹಿತ್ಯಕ್ಕೊಂದು ಆಕರ ಗ್ರಂಥ ಎನಿಸಿದೆ . ಕನ್ನಡ ಛಂದಸ್ಸಿನ ಕ್ಷೇತ್ರದಲ್ಲಿ ಇದೊಂದು ಅಪೂರ್ವ ಶಾಸ್ತ್ರ ಗ್ರಂಥ .
ಶೆಟ್ಟರು ಭೀಮಕಾಯರು, ಅಷ್ಟೇ ಕೋಮಲ ಮನಸ್ಸಿನವರು . ನಿಷ್ಟುರವಾದಿಗಳಂತೆ ಕಂಡರೂ ಅಷ್ಟೇ ಹಾಸ್ಯಪ್ರಿಯರು . ತಮಗೆ ಸರಿ ಕಾಣದ್ದನ್ನು ಕೂಡಲೇ ಹೇಳುವ ನಿಷ್ಠುರ ಜಾಯಮಾನದವರು ಹೌದಾದರೂ ಅದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಅಷ್ಟೇ ನಿಖರವಾಗಿ ಹೇಳಬಲ್ಲ ಸಮರ್ಥರು . ಶೆಟ್ಟರು ಸನ್ಮಾನಗಳಿಂದ ಮಾರು ದೂರ ಉಳಿಯುತ್ತಿದ್ದರು . ನಾನು ಹತ್ತು ವರ್ಷಗಳ ಹಿಂದೆ ಯಕ್ಷಸಂಗಮ – ಮೂಡಬಿದಿರೆ ವತಿಯಿಂದ ಅವರನ್ನು ಸನ್ಮಾನಿಸಲು ನಿರ್ಧರಿಸಿ ಕರೆ ಮಾಡಿದಾಗ ನನಗೆ ನಿಮ್ಮ ಪರಿಚಯವಿಲ್ಲ . ಆದ ಕಾರಣ ನನಗೆ ಸನ್ಮಾನ ಬೇಡ ಎಂದಿದ್ದರು . ( ಆಗ , ನನಗೆ ಶೆಟ್ಟರ ಬಗ್ಗೆ ಬಹಳಷ್ಟು ತಿಳಿದಿದ್ದರೂ , ಡಾ.ಶೆಟ್ಟರಿಗೆ ನನ್ನ ಪರಿಚಯವಿರಲಿಲ್ಲ .ಅದನ್ನೇ ನೇರವಾಗಿ , ನಿಷ್ಠುರವಾಗಿ ಹೇಳಿದ್ದರು ) ನಾನು ಮತ್ತಷ್ಟು ಒತ್ತಾಯಿಸಿದಾಗ “ನನ್ನ ಶಿಷ್ಯಂದಿರು ಹೇಳಿದರೆ ಮಾತ್ರ ಆಗಬಹುದು ” ಎಂದಾಗ ನಾನು ಅವರ ಶಿಷ್ಯ , ನನ್ನ ಪರಮಾಪ್ತರಾದ ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟ ರ ಮೂಲಕ ಮಾತಾಡಿಸಿದ ಮೇಲೆಯೇ ಶೆಟ್ಟರು ಒಪ್ಪಿದ್ದರು .
ನಂತರ ಶೆಟ್ಟರಿಗೆ ನನ್ನೊಂದಿಗೆ ಬಲವಾದ ಆತ್ಮೀಯತೆ ಬೆಳೆಯಿತು . ನನ್ನೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತಿದ್ದರು . ನಾನು ಡಾ.ಪದ್ಮನಾಭ ಕಾಮತ್ ಹಾಗೂ ಡಾ.ಶೆಟ್ಟರ ಕುರಿತಾದ ಒಂದು , ಸಣ್ಣದಾದರೂ ಮಹತ್ವಪೂರ್ಣವಾದ , ಘಟನೆಯನ್ನು ಆಸ್ಪತ್ರೆಗೆ ಬಂದ ಶ್ರೀಮಂತರು ಎಂಬ ಶೀರ್ಷಿಕೆಯಲ್ಲಿ ಐದು ತಿಂಗಳ ಹಿಂದೊಂದು ಲೇಖನ ಬರೆದಿದ್ದೆ . ಅದನ್ನು ಓದಿದ ಶೆಟ್ಟರು ಕೂಡಲೇ ನನಗೆ ಕರೆ ಮಾಡಿ ಕುಡ್ವರೇ , ನಿಮ್ಮ ಬರವಣಿಗೆಯ ಶೈಲಿ ಅತ್ಯುತ್ತಮವಾಗಿದೆ . ನನಗೆ ತುಂಬಾ ಸಂತೋಷವಾಯಿತು . ನಿಮಗೆ ಸರಸ್ವತಿ ದೇವಿಯ ಅನುಗ್ರಹವಿದೆ , ನಿಮ್ಮ ಬರವಣಿಗೆ ಮುಂದುವರಿಸಿ ಎಂದು ಆಶೀರ್ವದಿಸಿದ್ದರು .
ಸುಮಾರು 200 ಕ್ಕೂ ಮಿಕ್ಕಿದ ಗಿಡಮೂಲಿಕೆಗಳ ಕುರಿತಾದ ಅಪೂರ್ವ ಜ್ಞಾನ ಹೊಂದಿದ್ದ ಶೆಟ್ಟರು ಹಲವಾರು ರೋಗಿಗಳಿಗೆ ಔಷಧಿ ನೀಡಿ , ಪ್ರಸಿದ್ಧ ವೈದ್ಯರಿಂದಲೂ ಸರಿಪಡಿಸಲಾಗದ ರೋಗಗಳನ್ನು
ಗುಣಪಡಿಸಿದ್ದರು .ಉತ್ತಮ ಕೃಷಿಕರೂ ಆಗಿದ್ದು , ಕಸಿ ಕಟ್ಟುವುದರಲ್ಲಿ ಅಪರಿಮಿತ ಶ್ರಮ ವಹಿಸಿ ಹಲವಾರು ಹೊಸ ಬೆಳೆಗಳನ್ನೂ ಕೃಷಿ ಲೋಕಕ್ಕೆ ಕೊಟ್ಟಿದ್ದಾರೆ . ಶೆಟ್ಟರು ನೂಲುವಿಕೆಯಲ್ಲೂ ನಿಷ್ಣಾತರಾಗಿದ್ದರು . ವೃಕ್ಷ ಪ್ರಿಯರಾಗಿದ್ದು , ಶಿಮಂತೂರು – ಪಂಜಿನಡ್ಕ ರಸ್ತೆಯಲ್ಲಿ 500 ಕ್ಕಿಂತಲೂ ಹೆಚ್ಚು ವೃಕ್ಷ ನೆಟ್ಟಿದ್ದು , ಅದರಲ್ಲಿ ಬಹ್ವಂಶ ಈಗಲೂ ನಳನಳಿಸಿ ಶೆಟ್ಟರ ಸಾರ್ಥಕ ನೆನಪನ್ನು ಹುಟ್ಟಿಸುತ್ತಿವೆ . ಶೆಟ್ಟರ ಶಿಷ್ಯ ಸಂಪತ್ತೂ ದೊಡ್ಡದೇ . ದಿ .ದಾಮೋದರ ಶೆಟ್ಟಿಗಾರ್ , ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ , ಅನಂತರಾಮ ಬಂಗಾಡಿ , ಗಣೇಶ್ ಕೊಲೆಕಾಡಿ , ಗುರುವಪ್ಪ ಬಾಯಾರು , ತಾರಾನಾಥ ವರ್ಕಾಡಿ , ಪಟ್ಲ ಸತೀಶ್ ಶೆಟ್ಟಿ , ಶರತ್ ಕುಮಾರ್ ಕದ್ರಿ , ದಿನಕರ ಎಸ್ .ಪಚ್ಚನಾಡಿ ಸಹಿತ ನೂರಾರು ಪ್ರಮುಖರು ಇವರ ಶಿಷ್ಯರಾಗಿದ್ದಾರೆ . ಪ್ರಸ್ತುತ ಸುಪ್ರಸಿದ್ಧ ಛಾಂದಸರಾದ ಗಣೇಶ್ ಕೊಲೆಕಾಡಿಯವರಂತೂ ಶೆಟ್ಟರ ಪಟ್ಟಶಿಷ್ಯ ಎನಿಸಿಕೊಂಡಿದ್ದಾರೆ .ಇದನ್ನು ಶೆಟ್ಟರು ಸಾರ್ವಜನಿಕ ಸಭೆಯಲ್ಲೂ ಉಲ್ಲೇಖಿಸಿದ್ದಾರೆ . ಶೆಟ್ಟರು ತಮ್ಮದೇ ಆದ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಸಂಘ , ಕಿನ್ನಿಗೋಳಿಯನ್ನು ಕಟ್ಟಿ ಆ ಮೂಲಕ ನೂರಾರು ಯಕ್ಷಗಾನ ಪ್ರದರ್ಶನ ನೀಡಿದ್ದಲ್ಲದೇ ಹಲವಾರು ಕಲಾವಿದರನ್ನೂ ಬೆಳೆಸಿದ್ದರು . ಈ ಸಂಘದ ಮೂಲಕವೇ ಶೆಟ್ಟರು ರಚಿಸಿದ ” ಕಟೀಲು ಕ್ಷೇತ್ರ ಮಹಾತ್ಮೆ ” ಪ್ರಥಮವಾಗಿ ಪ್ರದರ್ಶನಗೊಂಡದ್ದು . ಅಂದು ಶೆಟ್ಟರು ಜಾಬಾಲಿ ಹಾಗೂ ಉಗ್ರ ಭ್ರಾಮರಿಯ ಪಾತ್ರ ಮಾಡಿದ್ದರು .
” ಅಂದಿನ ಭ್ರಾಮರಿಯ ಪಾತ್ರ ಚಿತ್ರಣವಂತೂ ಅದ್ಭುತ ” ಎಂದು ಅಂದು ಸಂಘದ ಪಾತ್ರಧಾರಿಯಾಗಿದ್ದ , ಸುಪ್ರಸಿದ್ಧ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿಯವರು ಈಗಲೂ ಜ್ಞಾಪಿಸುತ್ತಿದ್ದಾರೆ . ಶೆಟ್ಟರು ಹಲವಾರು ಪತ್ರಿಕೆ , ಸ್ಮರಣ ಸಂಚಿಕೆಗಳಲ್ಲಿ ನೂರಾರು ಪ್ರಬುದ್ಧ ಲೇಖನ ಬರೆದಿದ್ದಾರೆ . ನೂರಾರು ಛಂದೋಬದ್ಧ ಸನ್ಮಾನ ಪತ್ರ ಬರೆದಿದ್ದಾರೆ . ಅಂಶ ಝಂಪೆ , ನಾಗವರ್ಮನ ಚೌಪದಿಕೆ , ಮದನವತಿ , ಚಿತ್ರಾ – ವಿಚಿತ್ರ ತ್ರಿಪದಿ , ಧ್ರುವತಾಲ ಬಂಧಗಳು , ಉದ್ಧಂಡ ಷಟ್ಪದಿ , ಚೌತಾಲ , ತಿಶ್ರತ್ರಿಪುಟ ಮುಂತಾದ ವಿಷಯಗಳಲ್ಲಿ ಅಪರಿಮಿತ ಸಾರಸ್ವತ ಮೌಲ್ಯವುಳ್ಳ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ .ಒಂದು ಕಾಲದಲ್ಲಿ ತಮ್ಮ ಅಮೂಲ್ಯವಾದ ಗ್ರಂಥಗಳ ಬಗ್ಗೆ , ಶಿಷ್ಯಂದಿರ ಹೊರತು ಯಾರೂ ಆಸಕ್ತಿ ವಹಿಸದ ಕಾರಣ ಭ್ರಮ ನಿರಸನಗೊಂಡ ಶೆಟ್ಟರು ತಮ್ಮ ಅಮೂಲ್ಯವಾದ ವಿಚಾರಧಾರೆಗಳನ್ನೊಳಗೊಂಡ ಅಮೂಲ್ಯವಾದ ಪುಸ್ತಕಗಳನ್ನು ಮನೆಯ ಅಟ್ಟದ ಮೇಲಕ್ಕೆ ಅಟ್ಟಿದ್ದರು . ಹಲವಾರು ವರ್ಷಗಳ ನಂತರ ಈ ಅಪೂರ್ವ ಗ್ರಂಥಗಳ ಬಗ್ಗೆ ವಿಷಯ ತಿಳಿದ ಸುಪ್ರಸಿದ್ಧ ವಿದ್ವಾಂಸರಾದ ಶತಾವಧಾನಿ ಆರ್ .ಗಣೇಶ್ ರವರು ಶೆಟ್ಟರ ಮನ ಒಲಿಸಿ ಆ ಗ್ರಂಥಗಳ ಬಗ್ಗೆ ಅಧ್ಯಯನ ನಡೆಸಿದ ಕಾರಣ ಆ ಅಮೂಲ್ಯ ಶಾಸ್ತ್ರಸಿದ್ಧ ಎನಿಸಿದ ವಿಚಾರಗಳು ಅಟ್ಟದಿಂದ ಕೆಳಗಿಳಿದು ಪುನಃ ಬೆಳಕಿಗೆ ಬಂತು . ಈ ಘಟನೆ ಸಾಹಿತ್ಯಲೋಕಕ್ಕೊಂದು ಅಮೂಲ್ಯವಾದ ಕೊಡುಗೆ ನೀಡಿತು ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲೇಬೇಕು . ಈ ನಿಟ್ಟಿನಲ್ಲಿ ಶತಾವಧಾನಿ ಆರ್ .ಗಣೇಶ್ ರವರು ಸದಾ ಸ್ಮರಣೀಯರು . ಇಲ್ಲದಿದ್ದಲ್ಲಿ ಅಮೂಲ್ಯವಾದ ವಿಚಾರಗಳು ಸಾಹಿತ್ಯ ಲೋಕದಿಂದಲೇ ಮರೆಯಾಗುವ ಅಪಾಯವಿತ್ತು .
ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಪಟ್ಲ ಪ್ರಶಸ್ತಿ 2018 , ಅಗರಿ ಪ್ರಶಸ್ತಿ , ಕುಕ್ಕಿಲ ಪ್ರಶಸ್ತಿ , ದೇರಾಜೆ ಸ್ಮ್ರತಿ ಗೌರವ , ಸ್ಕಂದ ಪ್ರಶಸ್ತಿ , ಯಕ್ಷಸಂಗಮ – ಮೂಡಬಿದಿರೆ ಪ್ರಶಸ್ತಿ , ಆಳ್ವಾಸ್ ನುಡಿಸಿರಿ ಪ್ರಶಸ್ತಿ , ತಲ್ಲೂರು ಕನಕ ಅಣ್ಣಯ್ಯ ಪ್ರಶಸ್ತಿ ಸಹಿತ ನೂರಾರು ಸನ್ಮಾನ ಸ್ವೀಕರಿಸುವ ಶೆಟ್ಟರು , ಛಂದೋಂಬುಧಿ ಚಾರುಚಂದ್ರ , ಅಭಿನವ ನಾಗವರ್ಮ , ಛಂದೋವತಂಸ , ಛಂದೋಬ್ರಹ್ಮ , ಛಂದೋವಾರಿಧಿ ಚಂದ್ರ , ಯಕ್ಷಪಾಣಿನಿ , ಛಂದಶ್ಚತುರಾನನ , ಯಕ್ಷ ಛಂದೋ ಭಾರ್ಗವ ಮುಂತಾದ ಬಿರುದಿನೊಂದಿಗೆ ಗೌರವ ಪಡೆದ ಮಹನೀಯರಾಗಿದ್ದಾರೆ . ಆದರೂ , ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ಇನ್ನೂ ದೊರಕದಿದ್ದುದು ಅತ್ಯಂತ ಖೇದಕರ . ಶೆಟ್ಟರಿಗೆ ಈ ಬಗ್ಗೆ ಆಸಕ್ತಿ ಇಲ್ಲದಿದ್ದರೂ , ಶೆಟ್ಟರ ಸಾಧನೆಗೆ ಈ ಪ್ರಶಸ್ತಿ ಸಂದಿದ್ದರೆ ಆ ಪ್ರಶಸ್ತಿ ಅರ್ಥಪೂರ್ಣವಾಗುತ್ತಿತ್ತು . ಆ ಪ್ರಶಸ್ತಿಗೊಂದು ಮೌಲ್ಯ ದೊರಕುತ್ತಿತ್ತು . ಈ ಸಂದರ್ಭದಲ್ಲಿ ಇಬ್ಬರು ವಿದ್ವಾಂಸರು ಡಾ.ಶೆಟ್ಟರ ಬಗ್ಗೆ ಹೇಳಿದುದನ್ನು ಉಲ್ಲೇಖಿಸಲೇಬೇಕು .
ಸುಪ್ರಸಿದ್ಧ ವಿದ್ವಾಂಸರು ಹಾಗೂ ಡಾ .ಶೆಟ್ಟರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು ಹೇಳಿದಂತೆ ,
ನಾರಾಯಣ ಶೆಟ್ಟರಿಗೆ ಮನೆಯಲ್ಲಿ ಅಕ್ಕಿ ಕಮ್ಮಿಯಾಗಿದೆ ಎಂಬುದು ಗೊತ್ತಾಗುವುದಿಲ್ಲ . ಆದರೆ , ಛಂದಸ್ಸಿನಲ್ಲಿ ಒಂದು ಮಾತ್ರೆ ಕಮ್ಮಿಯಾಗಿದೆ ಎಂದು ಕೂಡಲೇ ಗೊತ್ತಾಗುತ್ತದೆ . ಯಾಕೆಂದರೆ , ಅವರ ಮನೆಯಲ್ಲಿ ಅನ್ನಪೂರ್ಣೆ ಎನಿಸಿದ ಸುಶೀಲಮ್ಮ ಇದ್ದಾರೆ .
ಯಕ್ಷಗಾನದ ಸುಪ್ರಸಿದ್ಧ ವಿಮರ್ಶಕರಾದ ಡಾ. ಪ್ರಭಾಕರ ಜೋಷಿಯವರು ಹೇಳಿದಂತೆ ,
ನನಗೊಮ್ಮೆ ಡಾ.ಶಿಮಂತೂರು ನಾರಾಯಣ ಶೆಟ್ಟರು ಕಿನ್ನಿಗೋಳಿ ಪೇಟೆಯಲ್ಲಿ ಸಿಕ್ಕಾಗ ,ಜೋಷಿಯವರೇ ನನಗೆ ಆ ಮಾತ್ರೆ ಸಿಕ್ಕಿತು ಎಂದರಂತೆ . ಡಾ. ಜೋಷಿಯವರು , ಬಹುಶಃ ಅವರ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಮಾತ್ರೆ ಎಂದು ಎಣಿಸಿದಾಗ , ಡಾ.ಶೆಟ್ಟರು , ಛಂದಸ್ಸಿಗೆ ಸಂಬಂಧಿಸಿದ ಮಾತ್ರೆಯ ಬಗ್ಗೆ ಹೇಳಿದರಂತೆ
.ಡಾ.ಶೆಟ್ಟರು ಸದಾ ಕಾಲ ಛಂದಸ್ಸಿನ ಬಗ್ಗೆ ಮಾತ್ರ ಆಲೋಚಿಸುವವರು ಎಂಬುದನ್ನು ಡಾ.ಜೋಷಿಯವರು ಉಲ್ಲೇಖಿಸಿ ಈ ಮಾತನ್ನು ಹೇಳಿದ್ದರು .
ಶೆಟ್ಟರ ಪತ್ನಿಯಾಗಿ ಬಂದ ಸುಶೀಲಾರು ನಿಜಾರ್ಥದಲ್ಲೇ ಸುಶೀಲರೇ . ಇವರ ಸುಮಧುರ ದಾಂಪತ್ಯದಲ್ಲಿ ಲೋಕದ ಬೆಳಕು ಕಂಡವರೇ ಸೌದಾಮಿನಿ , ಚೂಡಾಮಣಿ , ತ್ರಿವೇಣಿ , ದೇವಿಪ್ರಸಾದ್ ಹಾಗೂ ಚೇತನ್ ಎಂಬ ವಂಶೋದ್ಧಾರಕರು .
ಎಂ.ಶಾಂತರಾಮ ಕುಡ್ವ, ಮೂಡಬಿದಿರೆ



































































