ಕಾರ್ಕಳ: ಬುಧವಾರ ಧಾರಾಕಾರ ಮಳೆ- ಅಲ್ಲಲ್ಲಿ ನೆರೆ

ಕಾರ್ಕಳ :  ಕಾರ್ಕಳ ತಾಲೂಕಿನಾದ್ಯಂತ ಕಳೆದ 4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬುಧವಾರ ಎಡೆಬಿಡದೇ ಮಳೆಯಾಗಿದೆ. ತಾಲೂಕಿನ ಬೆಳಿಂಜೆ, ಮುಳಿಕಾರು ಪ್ರದೇಶದಲ್ಲಿ ಮಂಗಳವಾರ ಅತ್ಯಧಿಕ ಮಳೆಯಾಗಿದ್ದರೆ, ಕಾರ್ಕಳ ನಗರದಲ್ಲಿ ಕನಿಷ್ಠ ಮಳೆಯಾಗಿದೆ. ಬೆಳಿಂಜೆ, ಮುಳಿಕಾರು ಪ್ರದೇಶದಲ್ಲಿ 95 ಮಿ.ಮೀ. ಮಳೆ ವರದಿಯಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದೆಯಾದರೂ ಮಳೆ ಹಾನಿ ಕುರಿತು ವರದಿಯಾಗಿಲ್ಲ. ಆದರೂ, ಹಲವೆಡೆ ನೆರೆ ಕಂಡುಬಂದಿದೆ. ಕಾರ್ಕಳ ನಗರದಲ್ಲಿ ಮಂಗಳವಾರ 46.4 ಮಿ.ಮೀ., ಇರ್ವತ್ತೂರು-67.4 ಮಿ.ಮೀ., ಅಜೆಕಾರು-67.4 ಮಿ.ಮೀ., ಸಾಣೂರು-55.4 ಮಿ.ಮೀ., ಕೆದಿಂಜೆ-49.4 ಮಿ.ಮೀ., ಮುಳಿಕಾರು-93.6 ಮಿ.ಮೀ., ಕೆರ್ವಾಶೆ-80.1 ಮಿ.ಮೀ. ಮಳೆಯಾಗಿದೆ.

ನಗರದಲ್ಲಿ ನೆರೆ
ಕಾರ್ಕಳ ನಗರದ ಒಳಚರಂಡಿ ಕಾಮಗಾರಿ ಪೂರ್ಣವಾಗದ ಕಾರಣ ನಗರದ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀರಾ ತೊಡಕಾಗುತ್ತಿದೆ. ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಅಲ್ಲಲ್ಲಿ ನೆರೆ ಕಂಡುಬರುತ್ತಿದೆ. ಮೂರು ಮಾರ್ಗ, ಆನೆಕೆರೆ, ಬಂಡಿಮಠ ಭಾಗದಲ್ಲಿ ರೋಡು ತೋಡಿನಂತಾಗಿದೆ. ದ್ವಿಚಕ್ರ ಸವಾರರು, ಪಾದಚಾರಿಗಳ ಪಾಡು ಹೇಳತೀರದು. ಒಳಚರಂಡಿ ಕಾಮಗಾರಿ ಸಮರ್ಪಕವಾಗಿ, ವ್ಯವಸ್ಥಿತವಾಗಿ ಒಮ್ಮೆ ಮುಗಿಯಲಿ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.error: Content is protected !!
Scroll to Top