ಉಡುಪಿ, ಆ. 2: ರಾಜ್ಯದಲ್ಲಿ ಪೇಜಾವರ ಮಠಾಧೀಶರಂತಹ ಅನೇಕ ಮಹನೀಯರು ಬಹಳಷ್ಟು ಸಮಯ ಶ್ರಮ ತ್ಯಾಗ ಮಾಡಿ ಗೋರಕ್ಷಣೆಯ ಕಾರ್ಯದಲ್ಲಿ ನಿರತಾಗಿರುವುದು ಸಮಾಜದ ಸಭ್ಯತೆಯ ಲಕ್ಷಣ . ಇಂಥ ಮಾನವೀಯ ಹಾಗೂ ಪುಣ್ಯದ ಕಾರ್ಯಗಳಿಗೆ ಸಹಾಯ ನೀಡುವುದು ಸರಕಾರದ ಕರ್ತವ್ಯವಾಗಿದೆ . ಆದ್ದರಿಂದ ರಾಜ್ಯದ ಎ , ಬಿ ಗ್ರೇಡ್ ದೇವಳಗಳ ವಾರ್ಷಿಕ ಆದಾಯದ ಶೇ.2 ಆದಾಯವನ್ನು ವಾರ್ಷಿಕವಾಗಿ ಆಯಾ ಜಿಲ್ಲೆಗಳ ನೋಂದಾಯಿತ ಗೋಶಾಲೆಗಳಿಗೆ ನೆರವು ನೀಡಲು ಅನುವಾಗುವಂತೆ ಶೀಘ್ರ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಮುಜರಾಯಿ ಇಲಾಖೆಯ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂಬ ತೀರ್ಮಾನವನ್ನು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದ್ದಾರೆ .
ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಕುಶಲೋಪರಿ ವಿಚಾರಿಸಲು ನೀಲಾವರ ಗೋಶಾಲೆಯ ಆವರಣದಲ್ಲಿರುವ ಶಾಖಾ ಮಠಕ್ಕೆ ಭೇಟಿ ದ ಸಚಿವರು ಗೋಶಾಲೆಗಳ ನಿರ್ವಹಣೆಯ ಕುರಿತಾಗಿ ಸಮಾಲೋಚನೆ ನಡೆಸಿದರು .
ಪ್ರಸ್ತುತ ಮನೆಗಳಲ್ಲಿ ಗೋ ಸಾಕಣೆಗೆ ಜನರು ಅನೇಕ ಕಾರಣಗಳಿಂದ ಹಿಂದೇಟು ಹಾಕುತ್ತಿದ್ದಾರೆ . ಆದ್ದರಿಂದ ಗೋಶಾಲೆಗಳಲ್ಲೇ ಗೋವುಗಳಿಗೆ ಆಶ್ರಯ ಎಂಬ ಸ್ಥಿತಿ ನಿರ್ಮಾಣವಾಗಿದೆ . ಆದರೆ ಇವುಗಳ ಸುಸೂತ್ರ ನಿರ್ವಹಣೆ ದೊಡ್ಡ ಸವಾಲಿನ ಕೆಲಸವಾಗಿದೆ .ಆದ್ದರಿಂದ ದೇವಳಗಳಲ್ಲಿನ ಭಕ್ತರ ಕಾಣಿಕೆಯ ಆದಾಯದ ಒಂದು ಭಾಗವನ್ನು ಗೋಶಾಲೆಗಳಿಗೆ ನೀಡುವುದರಿಂದ ಜನರಿಗೆ ಗೋಗ್ರಾಸ ನೀಡಿದ ಪುಣ್ಯವಾದರೆ ದೇವಳಗಳು ಗೋರಕ್ಷಣೆಯ ಕಾರ್ಯಕ್ಕೆ ಕೈಜೋಡಿಸಿದಂತಾಗುತ್ತದೆ . ಹಾಗೂ ಗೋಶಾಲೆಗಳಿಗೆ ಒಂದಷ್ಟು ಆರ್ಥಿಕ ಶಕ್ತಿ ನೀಡಿದಂತಾಗುತ್ತದೆ .
ನೂರಾರು ಗೋವುಗಳನ್ನು ಪೋಷಿಸಲು ದೊಡ್ಡ ಪ್ರಮಾಣದ ಮೇವು ಅಗತ್ಯ ಇದೆ . ಆದ್ದರಿಂದ ಜಿಲ್ಲಾವಾರು ಲಭ್ಯ ಇರುವ ಗೋಮಾಳ ಭೂಮಿಗಳನ್ನು ಮೇವು ಬೆಳೆಸುವ ಉದ್ದೇಶಕ್ಕೆ ನೋಂದಾಯಿತ ಗೋಶಾಲೆಗಳಿಗೆ ನೀಡುವ ಕುರಿತಾಗಿಯೂ ಶೀಘ್ರವೇ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದು ಇದೇ ಸಂದರ್ಭ ಸಚಿವರು ತಿಳಿಸಿದರು . ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು .