ಆನ್ಲೈನ್ ಸಾಧ್ಯತೆ ಬಿಚ್ಚಿಟ್ಟ ಯಕ್ಷಸಾಂಗತ್ಯ ಸಪ್ತಕ

ಸಿಬಂತಿ ಪದ್ಮನಾಭ

ಸಪ್ತಾಹಗಳು ಯಕ್ಷಗಾನ ಕ್ಷೇತ್ರಕ್ಕೆ ಹೊಸತಲ್ಲ. ಆದರೆ ಉಜಿರೆಯ ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ’ಯಕ್ಷಸಾಂಗತ್ಯ ಸಪ್ತಕ’ವು ಅನೇಕ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟಿತು. ಪ್ರಪಂಚವು ಒಂದು ಸಂಕ್ರಮಣ ಕಾಲದಲ್ಲಿರುವಾಗ ಈ ಕಾರ್ಯಕ್ರಮ ಮೂಡಿಬಂದದ್ದು ಇದಕ್ಕೆ ಒಂದು ಕಾರಣವಾದರೆ, ಆ ನೆಪದಿಂದಲೇ ಯಕ್ಷಗಾನದ ನೈಜ ಜಾಗತೀಕರಣ ಸಾಧ್ಯವಾದದ್ದು ಇನ್ನೊಂದು ಕಾರಣ.

ಕೊರೊನಾ ಬಿಕ್ಕಟ್ಟಿನಿಂದ ಯಕ್ಷಗಾನದಂತಹ ಪ್ರದರ್ಶನ ಕಲೆಗಳಿಗೆ ಒದಗಿದ ಸಂಕಷ್ಟ ಎಷ್ಟು ಅನಿರೀಕ್ಷಿತವೋ, ಅದಕ್ಕೊಂದು ಜಾಗತಿಕ ಆನ್ಲೈನ್ ವೇದಿಕೆ ಒದಗಿಬಂದದ್ದೂ ಅಷ್ಟೇ ಅನಿರೀಕ್ಷಿತ. ಡಿಜಿಟಲ್ ತಂತ್ರಜ್ಞಾನ ಜಗತ್ತಿಗೆ ಒದಗಿಸಿದ ಅವಕಾಶವು ಯಕ್ಷಸಾಂಗತ್ಯ ಸಪ್ತಕದ ಮೂಲಕ ಸಮರ್ಥವಾಗಿ ಬಳಕೆಯಾಯಿತು. ಉಜಿರೆ ಅಶೋಕ ಭಟ್ಟರ ಸಂಯೋಜನೆಯಲ್ಲಿ ಸತತ ಏಳು ದಿನ ಮೂಡಿಬಂದ ಕಾಲಮಿತಿಯ ತಾಳಮದ್ದಳೆಗಳು ಹಾಗೂ ಎಂಟನೆಯ ದಿನ ಪ್ರದರ್ಶನಗೊಂಡ ಯಕ್ಷಾವತರಣ ಏಕವ್ಯಕ್ತಿ ಪ್ರಸ್ತುತಿ ಜಗತ್ತಿನುದ್ದಗಲದ ಸಹೃದಯಿಗಳಿಗೆ ರಂಜನೆಯ ರಸಪಾಕವನ್ನೇ ಉಣಬಡಿಸಿದವು.

ಅತಿಕಾಯ ಮೋಕ್ಷ, ಹನುಮಾರ್ಜುನ, ವಾಲಿಮೋಕ್ಷ, ಶಲ್ಯಸಾರಥ್ಯ, ಗುರುದಕ್ಷಿಣೆ, ಶಿವಭಕ್ತ ವೀರಮಣಿ, ಧುರವೀಳ್ಯ ತಾಳಮದ್ದಳೆಗಳು ಎರಡು-ಮೂರು ತಿಂಗಳ ಕೊರೊನಾ ವಿಷಮಸ್ಥಿತಿಯಿಂದ ನಿರಾಸೆಗೊಂಡಿದ್ದ ಕಲಾಭಿಮಾನಿಗಳಿಗೆ ಹೊಸ ಅನುಭವ ನೀಡಿದ್ದು ಸುಳ್ಳಲ್ಲ.

ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬ್, ಫೇಸ್ಬುಕ್ಕಿನಂತಹ ಸಾಮಾಜಿಕ ತಾಣಗಳಲ್ಲಿ ದೊರೆಯುವ ಯಕ್ಷಗಾನದ ಆಡಿಯೋ, ವೀಡಿಯೋಗಳು ಸಾವಿರಾರು. ಆದರೆ ಒಂದು ಸ್ಟುಡಿಯೋ ವ್ಯವಸ್ಥೆಯಲ್ಲಿ ಪ್ರತಿದಿನ ರಸವತ್ತಾದ ತಾಳಮದ್ದಳೆಗಳನ್ನು ಸಂಯೋಜಿಸಿ ಉತ್ಕೃಷ್ಟ ತಾಂತ್ರಿಕ ಗುಣಮಟ್ಟದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೇರಪ್ರಸಾರ ಮಾಡಿದ ವಿಧಾನ ಯಕ್ಷಗಾನಪ್ರಿಯರನ್ನು ವಿಸ್ಮಯಗೊಳಿಸಿದ್ದು ಸತ್ಯ. ಕಾರ್ಯಕ್ರಮ ಪ್ರಸಾರವಾಗುತ್ತಿರುವಂತೆಯೇ ಪ್ರಪಂಚದ ವಿವಿಧ ಭಾಗಗಳಲ್ಲಿ ಕುಳಿತ ಪ್ರೇಕ್ಷಕರು ಆಗಿಂದಾಗ್ಗೆ ತಮ್ಮ ಪ್ರಶಂಸೆ, ಅಭಿಪ್ರಾಯ, ವಿಮರ್ಶೆಗಳನ್ನು ವ್ಯಕ್ತಪಡಿಸಲು ಸಾಧ್ಯವಾದದ್ದು ಆನ್ಲೈನ್ ವೇದಿಕೆಯ ಹೊಸ ಸಾಧ್ಯತೆ.

ಪುತ್ತಿಗೆ ರಘುರಾಮ ಹೊಳ್ಳ, ಸುಬ್ರಹ್ಮಣ್ಯ ಧಾರೇಶ್ವರ, ದಿನೇಶ ಅಮ್ಮಣ್ಣಾಯ, ಬಲಿಪ ಪ್ರಸಾದ ಭಟ್, ಪಟ್ಲ ಸತೀಶ್ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಆಜೇರು ಅವರಂತಹ ಜನಪ್ರಿಯ ಭಾಗವತರು ಸಮರ್ಥ ಹಿಮ್ಮೇಳ-ಮುಮ್ಮೇಳದೊಂದಿಗೆ ಯೂಟ್ಯೂಬ್, ಫೇಸ್ಬುಕ್, ಇನ್‌ಸ್ಟಾಗ್ರಾಂ ಮೂಲಕ ಏಕಕಾಲಕ್ಕೆ ಸಾವಿರಾರು ಮಂದಿಯನ್ನು ವೈಯಕ್ತಿಕವಾಗಿ ತಲುಪಿದ್ದು ಯಕ್ಷಗಾನ ಇತಿಹಾಸದಲ್ಲಿ ಒಂದು ದಾಖಲೆಯೇ.

ಡಾ. ಎಂ. ಪ್ರಭಾಕರ ಜೋಶಿ, ಉಮಾಕಾಂತ ಭಟ್, ವಿಟ್ಲ ಶಂಭು ಶರ್ಮ, ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗ ಭಟ್, ಜಬ್ಬಾರ್ ಸಮೊ, ವಿಷ್ಣುಶರ್ಮ ವಾಟೆಪಡ್ಪು, ಹರೀಶ್ ಬಳಂತಿಮೊಗರು, ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದ ಪ್ರಬುದ್ಧ ಕಲಾವಿದರ ಕೂಡುವಿಕೆ ಒಟ್ಟಾರೆ ಕಾರ್ಯಕ್ರಮಕ್ಕೆ ಒಂದು ಘನತೆಯ ಚೌಕಟ್ಟನ್ನು ಹಾಕಿಕೊಟ್ಟಿತು.

ಸಪ್ತಾಹದ ಕೊನೆಯಲ್ಲಿ ’ಯಕ್ಷಾವತರಣ’ ಹೆಸರಿನಲ್ಲಿ ಪ್ರಸ್ತುತಿಗೊಂಡ ಯುವ ಕಲಾವಿದೆ ರಂಜಿತಾ ಎಲ್ಲೂರು ಅವರ ಏಕವ್ಯಕ್ತಿ ನೃತ್ಯಾಭಿನಯ ತುಣುಕುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಕೊರೋನದಿಂದ ಯಕ್ಷಗಾನದ ಚಟುವಟಿಕೆಗಳೆಲ್ಲ ಒಮ್ಮೆಗೆ ಸ್ಥಗಿತಗೊಂಡು ಸಾಕಷ್ಟು ತೊಂದರೆ ಆಗಿದ್ದರೂ, ಕಲಾವಿದರಿಗೆ, ಮುಖ್ಯವಾಗಿ ಭಾಗವತರುಗಳಿಗೆ, ಇಂತಹದೊಂದು ವಿರಾಮ ಅಗತ್ಯವಿತ್ತೇನೋ ಎಂದು ಬಹುವಾಗಿ ಅನಿಸಿತು.

error: Content is protected !!
Scroll to Top