ಕಾರ್ಕಳ : ಸಾಹಿತ್ಯ ಸಂಘ ಕಾರ್ಕಳದ ಆಶ್ರಯದಲ್ಲಿ ನಡೆದ ಎಂ. ರಾಮಚಂದ್ರ ಪ್ರಶಸ್ತಿ ಪ್ರದಾನ ಹಾಗೂ ‘ಗುರು ಎಂದರೆ ಲಘು ಅಲ್ಲ” ಕೃತಿಯ ಬಿಡುಗಡೆ ಸಮಾರಂಭವು ಹೋಟೆಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಜರುಗಿತು. ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮೀ ವೀರೇಶಾನಂದ ಸರಸ್ವತೀ ಅವರು ಕಂಬದಕೋಣೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಮಹಾಬಲ ಮರವಂತೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು ಪ್ರೋ. ಎಂ. ರಾಮಚಂದ್ರ ಅವರು ಸ್ವಚ್ಛ, ನೇರ ನಡೆ ನುಡಿಗಳಿಗೆ ಹೆಸರಾದವರು. ಮೇರು ವ್ಯಕ್ತಿತ್ವದ ಅವರು ಸಾಹಿತ್ಯ ಪರಿಚಾರಿಕರಾಗಿ, ಆದರ್ಶ ಗುರುಗಳಾಗಿ ಪ್ರೇರಣಾದಾಯಕರಾಗಿದ್ದರು ಎಂದರು. ಮಹಾಬಲ ಮರವಂತೆ ಅವರು ಪ್ರಶಸ್ತಿಗೆ ಯೋಗ್ಯವಾದ ಆಯ್ಕೆ ಎಂದರು.
ಇದೇ ವೇಳೆ ಬಿಡುಗಡೆಗೊಂಡ ತನ್ನ ಕೃತಿ ʼಗುರು ಎಂದರೆ ಲಘು ಅಲ್ಲʼ ಕುರಿತು ಮಾತನಾಡಿದ ಅವರು ಕೃತಿಯು ಎಂ. ರಾಮಚಂದ್ರರ ವ್ಯಕ್ತಿತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಪ್ರಕಟವಾದ ಒಂದು ತಿಂಗಳಲ್ಲಿಯೇ 27 ಸಾವಿರ ಪುಸ್ತಕಗಳು ಸಾಹಿತ್ಯ ಆಸಕ್ತರ ಕೈಸೇರಿರುವುದು ಸಂತಸದಾಯಕ ಎಂದರು.
ಡಯಟ್ ಪ್ರಾಚಾರ್ಯ ಅಶೋಕ ಕಾಮತ್ ಮಾತನಾಡಿ, ಪ್ರಶಸ್ತಿ ಪುರಸ್ಕೃತ ಮಹಾಬಲ ಮರವಂತೆಯವರು ಬಹುಮುಖ ಪ್ರತಿಭಾವಂತರು. ರಾಜ್ಯಮಟ್ಟದ ಮಕ್ಕಳ ಸೃಜನಶೀಲ ಕಲಿಕೆಯ ಕೈಪಿಡಿ ‘ಮಳೆಬಿಲ್ಲು’ ಪ್ರಕಟಿಸುವಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದ್ದ ಅವರು ಮಕ್ಕಳ ಕತೆ, ಕವನ ರಚಿಸುತ್ತಾ ವಿದ್ಯಾರ್ಥಿಗಳಲ್ಲಿಯೂ ಸಾಹಿತ್ಯಾಸಕ್ತಿಯನ್ನು ಮೂಡಿಸುವಲ್ಲಿ ವಿಶೇಷವಾಗಿ ಶ್ರಮಿಸಿದವರು ಎಂದರು.

ಕಾರ್ಕಳ ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಕೆ.ಪಿ. ಶೆಣೈ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಗೌರವಾಧ್ಯಕ್ಷ ಆರ್. ತುಕಾರಾಮ ನಾಯಕ್, ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ, ಆಯ್ಕೆ ಸಮಿತಿ ಅಧ್ಯಕ್ಷರಾದ ರಾಜೇಶ್ ರೆಂಜಾಳ, ರಾಮಚಂದ್ರ ಅವರ ಪುತ್ರ ರಾಜ್ ವೇಹನ್, ಪ್ರಶಸ್ತಿ ಪುರಸ್ಕೃತರ ಪತ್ನಿ ರತ್ನಾ, ಪುತ್ರ ಶ್ರೀಹರ್ಷ, ಕೋಶಾಧಿಕಾರಿ ನಿತ್ಯಾನಂದ ಪೈ, ಉಪಸ್ಥಿತರಿದ್ದರು. ವೈ ಅನಂತ ಪದ್ಯನಾಭ ಭಟ್ ಭಾವಗೀತೆಗಳನ್ನು ಹಾಡಿದರು. ಕಾರ್ಯದರ್ಶಿ ಬಿ.ಕೆ. ಈಶ್ವರ ಮಂಗಲ ಸ್ವಾಗತಿಸಿದರು. ಕೊಂಡಳ್ಳಿ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವ ಸುಬ್ರಹ್ಮಣ್ಯ ಭಟ್ ಸಹಕರಿಸಿದರು.
















