ಸರಕು ಸಾಗಾಣಿಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ : ಡಿಸಿ ಸ್ವರೂಪ

ಪ್ರಯಾಣಿಕರು ಕಸ, ನೀರಿನ ಬಾಟಲ್‌ ಎಲ್ಲೆಂದರಲ್ಲಿ ಎಸೆಯಬಾರದು

ಉಡುಪಿ : ಸಾರ್ವಜನಿಕ ವಾಹನಗಳು ಸುರಕ್ಷಿತ ಹಾಗೂ ಸುಗಮವಾಗಿ ರಸ್ತೆಗಳಲ್ಲಿ ಸಂಚರಿಸಲು ಅಗತ್ಯವಿರುವ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ನಿರ್ವಹಣೆ ಮಾಡುವುದರ ಜೊತೆಗೆ ಸರಕು ಸಾಗಣೆ ವಾಹನಗಳಿಗೆ 60 ಕಿ.ಮೀ. ಪ್ರತಿ ಗಂಟೆಗೆ ವೇಗದ ಮಿತಿ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜೂ. 29ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಒಳಗೆ ಸಂಚರಿಸುವ 6 ಚಕ್ರ ಮತ್ತು ಮೇಲ್ಪಟ್ಟ ಎಲ್ಲಾ ಸರಕು ಸಾಗಾಣಿಕೆ ವಾಹನಗಳಿಗೆ ಸ್ಪೀಡ್ ಗವರ್ನರ್‌ ಅಳವಡಿಸಬೇಕು. ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ವಾಹನಗಳು ಓವರ್ ಲೋಡ್ ನಿಂದ ರಸ್ತೆ ಮೇಲೆ ಕಾಂಕ್ರೀಟ್ ಎಲ್ಲೆಡೆ ಬಿದ್ದು ರಸ್ತೆ ಹಾಳಾಗುವುದು ಹಾಗೂ ಮರಳು ಸಾಗಾಣಿಕೆ ವಾಹನಗಳ ಓವರ್ ಲೋಡ್‌ನಿಂದ ತೊಂದರೆ ಉಂಟಾಗುವುದರ ಜೊತೆಗೆ ಅಪಘಾತಗಳು ಹೆಚ್ಚುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ್ದು, ಇದರ ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗಿ ನಿರಂತರ ಪ್ರವರ್ತನಾ ಕಾರ್ಯವನ್ನು ನಡೆಸಬೇಕೆಂದು ಸೂಚನೆ ನೀಡಿದರು.

ರಸ್ತೆ ನಿಯಮ ಪಾಲಿಸಿ
ಸಾರ್ವಜನಿಕರು ರಸ್ತೆಯಲ್ಲಿ ವಾಹನವನ್ನು ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದ್ದಲ್ಲಿ ರಸ್ತೆ ಅಪಘಾತ ತಪ್ಪಿಸಲು ಸಾಧ್ಯ. ಅಜಾಗರೂಕತೆ, ನಿರ್ಲಕ್ಷ್ಯ ಹಾಗೂ ವೇಗದ ಚಾಲನೆ ಮಾಡುವುದು ಸರಿಯಲ್ಲ. ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು.

ಕ್ರಮವಹಿಸಿದ್ದ ಕುರಿತು ಮಾಹಿತಿ ನೀಡಿ
ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಸರಕಾರಿ ಬಸ್‌ಗಳಲ್ಲಿ ಕಡ್ಡಾಯವಾಗಿ ಬಾಗಿಲು ಅಳವಡಿಸಿರುವಂತೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿದ್ದರೂ ಸಹ ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿಯವರು ಜಿಲ್ಲೆಯಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ, ಅವುಗಳಲ್ಲಿ ಡೋರ್ ಅಳವಡಿಸಿರುವ ಹಾಗೂ ಅಳವಡಿಸದೇ ಇರುವ ಬಸ್‌ಗಳ ಸಂಖ್ಯೆ ಹಾಗೂ ಅಳವಡಿಸದೇ ಇರುವ ಬಸ್‌ಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಎರಡು ವಾರಗಳ ಒಳಗಾಗಿ ಮಾಹಿತಿ ನೀಡುವಂತೆ, ವಾಹನಗಳ ಫಿಟ್ನೆಸ್ ರಿನೀವಲ್ ಗೆ ಬಂದಂತಹ ಸಂದರ್ಭದಲ್ಲಿ ಅಳಡಿಸಿದ್ದಲ್ಲಿ ಮಾತ್ರ ನವೀಕರಣ ಮಾಡಲು ಕ್ರಮವಹಿಸಬೇಕೆಂದರು.

ಶಾಲಾ-ಕಾಲೇಜುಗಳ ಪರಿಮಿತಿಯ ರಸ್ತೆಗಳಲ್ಲಿ ಸೂಚನಾ ಫಲಕ, ಹಂಪ್ಸ್‌, ವೇಗ ತಡೆ, ಬ್ಯಾರಿಕೇಡ್, ಝೀಬ್ರಾ ಪಟ್ಟಿ ಸೇರಿದಂತೆ ಮತ್ತಿತರ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಡಿಸಿಯವರು ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಇಲಾಖೆಯ ಹಂತದಲ್ಲಿಯೇ ನಿರ್ಣಯ ಕೈಗೊಂಡು ಅನುಷ್ಠಾನಗೊಳಿಸಬೇಕು ಎಂದರು.

ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುವಾಗ ಕಸ ಸೇರಿದಂತೆ ನೀರಿನ ಬಾಟೆಲ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದ ನಗರದ ಸ್ವಚ್ಛತೆಗೆ ಮಾರಕವಾಗುತ್ತದೆ. ಪ್ರಯಾಣಿಕರು ಕಸವನ್ನು ಹಾಕಲು ಅನುಕೂಲವಾಗುವಂತೆ ಬಸ್ಸಿನಲ್ಲಿಯೇ ಕಸದ ಬುಟ್ಟಿಗಳನ್ನು ಅಳವಡಿಸಲು ಸೂಚಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನ ಆಗಿರುವುದಿಲ್ಲ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಜಿಲ್ಲೆಯ ರಾಷ್ಟೀಯ ಹೆದ್ದಾರಿಗಳಲ್ಲಿ ಈಗಾಗಲೇ ಗುರುತಿಸಿರುವ 18 ಕಪ್ಪು ಚುಕ್ಕೆ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು ಉಳಿದ ಪ್ರದೇಶಗಳಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು.

ಜನಸಂಚಾರ ದಟ್ಟಣೆ ಭಾಗದಲ್ಲಿ ಪಾರ್ಕಿಂಗ್‌ ಬೇಡ
ಜನಸಂಚಾರ ದಟ್ಟಣೆ ಇರುವ ನಗರ ಭಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಬಾರದು ಜೊತೆಗೆ ರಸ್ತೆ ಬದಿಯಲ್ಲಿರುವ ಅನಧೀಕೃತ ಗೂಡಂಗಡಿ, ಫಾಸ್ಟ್ ಫುಡ್ ಅಂಗಡಿ, ತಳ್ಳುಗಾಡಿಗಳನ್ನು ತೆರವುಗೊಳಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ವೆಂಡಿಗ್ ಝೋನ್‌ಗಳನ್ನು ಗುರುತಿಸಿ, ಬದಲಿ ವ್ಯವಸ್ಥೆಯನ್ನು ಮಾಡಲು ಮುಂದಾಗಬೇಕು ಎಂದು ನಗರಸಭಾ ಆಯುಕ್ತರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಂಚರಿಸುವ ಬಸ್‌ಗಳು ಬಸ್ ನಿಲ್ದಾಣವನ್ನು ಹೊರತುಪಡಿಸಿ ಇತರೆಡೆ ಜನರನ್ನು ಹತ್ತಿಸಿಕೊಳ್ಳಲು ಬಸ್‌ಗಳನ್ನು ನಿಲ್ಲಿಸಿದ್ದಲ್ಲಿ ಅಂತಹ ಬಸ್‌ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದ ಡಿಸಿಯವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುವರಿ ಮೀಡಿಯನ್ ಓಪನಿಂಗ್ ಗಳನ್ನು ಕೈಗೊಳ್ಳುವಾಗ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗಳು ಜಂಟಿ ಸಮೀಕ್ಷೆ ಮಾಡಿ, ನಿಯಮಾನುಸಾರ ಅವಶ್ಯಕತೆಗಳನ್ನು ಆಧರಿಸಿ, ನಿರ್ಧರಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಅಭಿಯಂತರರುಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.















































































































































error: Content is protected !!
Scroll to Top