ಕಾರ್ಕಳ : ತೋಟಗಾರಿಕೆ ಇಲಾಖೆಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ರೈತರಿಗೆ ಕಂದು ಬಾಳೆ, ಅಂಗಾಂಶ ಬಾಳೆ, ಗೇರು, ಕೊಕೊ, ಕಾಳುಮೆಣಸು, ಜಾಯಿಕಾಯಿ, ಅನಾನಸ್ಸು ಹಾಗೂ ಅಪ್ರಧಾನ ಹಣ್ಣುಗಳಾದ ರಾಂಬೂಟಾನ್, ಹಲಸು ಮತ್ತು ಮ್ಯಾಂಗೋಸ್ಟಿನ್ ಹೊಸ ತೋಟಗಳ ಸ್ಥಾಪನೆಗೆ ಬೆಳೆವಾರು ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಿತಿಗೆ ಒಳಪಟ್ಟು ಸಹಾಯಧನ ಲಭ್ಯವಿದೆ. ಸಣ್ಣ ಸಸ್ಯಾಗಾರಗಳ/ ನರ್ಸರಿಗಳ ಸ್ಥಾಪನೆಗೆ ಶೇ. 50ರ ದರದಲ್ಲಿ ಗರಿಷ್ಠ 10 ಲಕ್ಷ ರೂ. ಸಹಾಯಧನ, ಸಸ್ಯಾಗಾರಗಳ ಉನ್ನತೀಕರಣಕ್ಕಾಗಿ ಶೇ. 50ರ ಸಹಾಯಧನದಲ್ಲಿ ಪ್ರತಿ ಹೆಕ್ಟೇರ್‌ಗೆ ರೂ. 2 ರಂತೆ 2 ಹೆಕ್ಟೇರ್‌ಗಳಿಗೆ 4 ಲಕ್ಷ ರೂ. ಸಹಾಯಧನ, ಅಂಗಾಂಶ ಕೃಷಿ ಘಟಕ ಸ್ಥಾಪನೆಗೆ ಶೇ.40 ರಂತೆ ಗರಿಷ್ಠ 1 ಕೋ. ರೂ. ಸಹಾಯಧನ ಲಭ್ಯವಿದೆ. ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಶೇ. 30ರ ದರದಲ್ಲಿ ಪ್ರತಿ ಎಕರೆಗೆ ಗರಿಷ್ಠ ರೂ. 600 ಸಹಾಯಧನವಿದೆ. ವಿವಿಧ ಜಾತಿಯ ಅಣಬೆಗಳ ಉತ್ಪಾದನೆಗಾಗಿ ಅಣಬೆ ಉತ್ಪಾದನಾ ಘಟಕ, ಸ್ಪಾನ್ ಉತ್ಪಾದನಾ ಘಟಕ ಹಾಗೂ ಕಾಂಪೋಸ್ಟ್ ತಯಾರಿಕ ಘಟಕಗಳ ಸ್ಥಾಪನೆಗಾಗಿ ಶೇ. 40ರ ದರದಲ್ಲಿ ಗರಿಷ್ಠ 8 ರಿಂದ 12 ಲಕ್ಷ ರೂ. ಸಹಾಯಧನ ಲಭ್ಯವಿದೆ.
ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹಾಗೂ ಕ್ಷೇತ್ರ ಹಂತದಲ್ಲಿ ಬಹುಪಯೋಗಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ. 35ರ ದರದಲ್ಲಿ ಗರಿಷ್ಠ 12.25 ಲಕ್ಷ ರೂ.ವರೆಗೆ ಸಹಾಯಧನ ಲಭ್ಯವಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೂ. 2 ಕೋಟಿವರೆಗಿನ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ. 25ರ ದರದಲ್ಲಿ 50 ಲಕ್ಷ ರೂ. ಸಹಾಯಧನ ಅವಕಾಶವಿದೆ. ತೋಟಗಾರಿಕೆ ಬೆಳೆಗಳನ್ನು ಕ್ಷೇತ್ರದ ಹಂತದಲ್ಲಿ ನಿರ್ವಹಿಸಲು ಹಾಗೂ ಶೇಖರಿಸಲು ಪ್ಯಾಕ್ ಹೌಸ್‌ಗಳ ನಿರ್ಮಾಣಕ್ಕೆ ಶೇ. 50ರ ದರದಲ್ಲಿ ಗರಿಷ್ಠ 2.40 ಲಕ್ಷ ಮ ರೂ. ಸಹಾಯಧನ ಲಭ್ಯವಿದೆ. ರೈತರ ಯಾಂತ್ರೀಕರಣ ಅವಶ್ಯಕತೆಗೆ 20 hp ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳಿಗೆ, 8hp ವರೆಗಿನ ಹಾಗೂ ಮೇಲ್ಪಟ್ಟ, ಪವರ್ ಟಿಲ್ಲರ್ ಹಾಗೂ ಸ್ತ್ರೀಯರ್‌ಗಳ ಖರೀದಿಗೆ ಪ.ಜಾತಿ ಹಾಗೂ ಪ.ಪಂಗಡ ರೈತರುಗಳಿಗೆ ಶೇ.50ರ ದರದಲ್ಲಿ ರೂ. 1.76 ಲಕ್ಷದವರೆಗೆ ಹಾಗೂ ಇತರೇ ರೈತರುಗಳಿಗೆ ಶೇ. 40ರ ದರದಲ್ಲಿ 0.75 ಲಕ್ಷದವರೆಗೆ ಸಹಾಯಧನ ಲಭ್ಯವಿದೆ.
ತೋಟಗಾರಿಗೆ ಬೆಳೆಗಳಿಗೆ ಬಳಸುವ ಪ್ಲಾಸ್ಟಿಕ್ ಹೊದಿಕೆ/ಮಲ್ಟಿಂಗ್‌ಗಳಿಗೆ ಶೇ. 50ರ ದರದಲ್ಲಿ ಪ್ರತಿ ಹೆಕ್ಟೇರ್‌ಗೆ 20000 ರೂ. ಸಹಾಯಧನ, ತೋಟಗಳಲ್ಲಿ ಕಳೆ ನಿಯಂತ್ರಣಕ್ಕಾಗಿ ವಿಡ್ ಮ್ಯಾಟ್ ಬಳಕೆಗೆ ಶೇ.50ರ ಸಹಾಯಧನದಲ್ಲಿ ಗರಿಷ್ಠ 1 ಲಕ್ಷ ರೂ. ಪ್ರತಿ ಎಕರೆಗೆ ಸಹಾಯಧನ ಲಭ್ಯವಿದೆ. ಹಸಿರು ಮನೆ/ನೆರಳು ಪರದೆಗಳ ನಿರ್ಮಾಣಕ್ಕಾಗಿ ಪ್ರತಿ ಫಲಾನುಭವಿಗೆ ಗರಿಷ್ಠ 2500 ಚದರ ಮೀಟರ್ ವರೆಗೆ ಶೇ. 50ರ ಸಹಾಯಧನ ಲಭ್ಯವಿದೆ. ಮಳೆ ನೀರು ಸಂಗ್ರಹಿಸಿ ತೋಟದ ಬೆಳೆಗಳಿಗೆ ಬಳಸಲು ಅನುಕೂಲವಾಗುವಂತೆ ಗರಿಷ್ಠ 2268 ಘನ ಮೀಟರ್ ಅಳತೆಯ ಕೃಷಿ ಹೊಂಡ ನಿರ್ಮಾಣಕ್ಕಾಗಿ ಶೇ. 50ರ ಸಹಾಯಧನದಲ್ಲಿ 90000 ರೂ. ಸಹಾಯಧನ ನೀಡಿಕೆಗೆ ಅವಕಾಶವಿರುತ್ತದೆ. ಎರೆಹುಳು ಘಟಕ ನಿರ್ಮಾಣಕ್ಕೆ 50000 ರೂ. ಸಹಾಯಧನ ಪಡೆಯಬಹುದಾಗಿದೆ.

ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ರೈತರಿಗೆ ಅವಶ್ಯವಿರುವ ಬ್ರಶ್ ಕಟ್ಟರ್, ಚೈನ್ ಸಾ, ಏಣಿ, ಕೈಗಾಡಿ, ಮದ್ದು ಸಿಂಪರಣಾ ಯಂತ್ರಗಳು, ಮೋಟಾರು ಚಾಲಿತ ಕೈಗಾಡಿ, ಕಾಳುಮೆಣಸು ಸುಲಿಯುವ ಯಂತ್ರ, ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ಚಾಫ್ ಕಟ್ಟರ್ ಒಳಗೊಂಡಂತೆ ಇಲಾಖಾ ಅನುಮೋದಿತ ಕಂಪನಿಗಳಿಂದ ಖರೀದಿಸಿದ ಗರಿಷ್ಠ 5 ಯಂತ್ರೋಪಕರಣಗಳಿಗೆ ಶೇ. 40/50ರ ದರದಲ್ಲಿ ಗರಿಷ್ಠ 1.25 ಲಕ್ಷ ಸಹಾಯಧನ ಲಭ್ಯವಿದೆ.
ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ಶೇ. 90 ರಷ್ಟು ಸಹಾಯಧನ ಲಭ್ಯವಿದೆ. ಆಸಕ್ತ ರೈತರು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕಾರ್ಯಾದೇಶ ಪಡೆದು ಇಲಾಖೆಯಿಂದ ಅನುಮೋದಿತ ಕಂಪನಿಗಳ ಮೂಲಕ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ. ಹನಿ ನೀರಾವರಿ ಮೂಲಕ ಪೋಷಕಾಂಶಗಳನ್ನು ನೀಡಲು ಅನುಕೂಲವಾಗುವಂತೆ ನೀರಿನಲ್ಲಿ ಕರಗುವ ಪೋಷಕಾಂಶಗಳ ಖರೀದಿಗೆ ಸಹಾಯಧನ ಲಭ್ಯವಿದೆ.
ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಅಭಿವೃದ್ಧಿ ಯೋಜನೆಯಡಿ ಹೊಸದಾಗಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಉಚಿತ ಗಿಡಗಳ ವಿತರಣೆಯೊಂದಿಗೆ 4 ವರ್ಷಗಳ ಕಾಲ ನಿರ್ವಹಣಾ ವೆಚ್ಚ ಪಾವತಿ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಕೊಳವೆ ಬಾವಿ, ತೆರೆದ ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ, ಎರೆಹುಳು ಘಟಕ ಸ್ಥಾಪನೆಗೆ ಸಹಾಯಧನ ಪಡೆಯಬಹುದಾಗಿದೆ. ತಾಳೆ ಉತ್ಪನ್ನಗಳನ್ನು ಸರ್ಕಾರಿ ಅನುಮೋದಿತ ಕಂಪನಿಗಳೊಂದಿಗೆ ರೈತರಿಗೆ ಬೈಬ್ಯಾಕ್ ಒಡಂಬಡಿಕೆಯ ಅನುಕೂಲ ಕಲ್ಪಿಸಲಾಗುವುದು.
ಜೇನು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ದಿನಗಳ ಪ್ರಾಯೋಗಿಕ ತರಬೇತಿ ನೀಡುವುದರೊಂದಿಗೆ ಜೇನು ಕುಟುಂಬ ಸಹಿತ ಗರಿಷ್ಠ 10 ಪೆಟ್ಟಿಗೆ ಖರೀದಿಗೆ ಶೇ. 75 ರಿಂದ 90ರ ಸಹಾಯಧನ ಲಭ್ಯವಿದೆ. ಕೃಷಿ ಭೂಮಿ ಹೊಂದಿರದ ಆಸಕ್ತರಿಗೆ ಗರಿಷ್ಠ 4 ಪೆಟ್ಟಿಗೆಗಳ ಖರೀದಿಗೆ ಸಹಾಯಧನ ಲಭ್ಯವಿರುತ್ತದೆ. ಜೇನು ಕೃಷಿಕರಿಗೆ ಅವಶ್ಯವಿರುವ ಜೇನು ತುಪ್ಪ ತೆಗೆಯುವ ಯಂತ್ರ ಖರೀದಿಗೆ ರೂ. 3375/- ಸಹಾಯಧನ ಲಭ್ಯವಿದೆ. ರೈತರ ಹಂತದಲ್ಲಿ ಮಧುವನ ಸ್ಥಾಪನೆಗೆ ರೂ. 38250/- ಸಹಾಯಧನ ಲಭ್ಯವಿದೆ.
ಅಸಂಪ್ರದಾಯಿಕ ಇಂಧನ ಮೂಲಗಳಲ್ಲಿ ಒಂದಾದ ಸೌರಶಕ್ತಿ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಸೌರಶಕ್ತಿ ಚಾಲಿತ ಪಂಪ್ ಸೆಟ್‌ಗಳ ಖರೀದಿಗೆ ಇಲಾಖೆಯಿಂದ ಶೇ. 50ರ ಸಹಾಯಧನ ಲಭ್ಯವಿದೆ. 3 HP ಪಂಪ್‌ಸೆಟ್ ಒಟ್ಟು ವೆಚ್ಚ 2 ಲಕ್ಷ ರೂ. ಇದ್ದು, 1 ಲಕ್ಷ ರೂ. ಸಹಾಯಧನ ಹಾಗೂ 5 HP ಮೇಲ್ಪಟ್ಟ ಪಂಪ್‌ಸೆಟ್‌ಗಳಿಗೆ ಒಟ್ಟು ವೆಚ್ಚ 3 ಲಕ್ಷ ರೂ. ಯಿದ್ದು 1.50 ಲಕ್ಷ ರೂ. ಸಹಾಯಧನ ಲಭ್ಯವಿದೆ. ಈ ವೆಚ್ಚದಲ್ಲಿ ಸೋಲಾರ್ ಪ್ಯಾನಲ್, ಕೇಬಲ್, ನಿಯಂತ್ರಣ ಘಟಕಗಳು ಹಾಗೂ ಪಂಪ್‌ಗಳನ್ನು ಒಳಗೊಂಡಿರುತ್ತದೆ. ಸೌರಶಕ್ತಿ ಬಳಸಿ ತೋಟಗಾರಿಕೆ ಉತ್ಪನ್ನಗಳನ್ನು ಒಣಗಿಸುವ ಸಲುವಾಗಿ ಬಳಸುವ ಸೋಲಾರ್ ಶೆಡ್‌ಗಳ ನಿರ್ಮಾಣಕ್ಕೆ 1 ಲಕ್ಷ ರೂ. ಇಲಾಖಾ ಸಹಾಯಧನ ಲಭ್ಯವಿದೆ.
ಹೊಸ ತಾಂತ್ರಿಕತೆಗಳ ಅಳವಡಿಕೆಗೆ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೈಡೋಪೋನಿಕ್ಸ್ ಘಟಕ ಸ್ಥಾಪನೆಗೆ ಹಾಗೂ ಹನಿ/ತುಂತುರು ನೀರಾವರಿಯಲ್ಲಿ ಆಟೋಮೇಷನ್ ಅಳವಡಿಕೆಗೆ ಸಹಾಯಧನ ಲಭ್ಯವಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ತೆಂಗು, ಕಾಳುಮೆಣಸು, ಗೇರು, ಜಾಯಿಕಾಯಿ, ರಾಮ್‌ಟನ್, ಮಲ್ಲಿಗೆ, ಕೊಕ್ಕೋ, ಶ್ರೀಗಂಧ ಒಳಗೊಂಡಂತೆ ವಿವಿಧ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಟಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿರುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವವರು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಎಲ್ಲಾ ಯೋಜನೆಗಳಿಗೆ ಪ್ರಯೋಜನ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಇತ್ತೀಚಿನ ಪಹಣಿ ಪತ್ರ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಮತ್ತು ಯೋಜನೆಗೆ ಅನುಗುಣವಾಗಿ ಅಗತ್ಯ ದಾಖಲಾತಿಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವುದು. ಇಲಾಖಾ ಮಾರ್ಗಸೂಚಿಯನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್ ಬಿ. ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.



































