ಗೆಳೆಯರ ವ್ಯಾಟ್ಸಪ್‌ನಿಂದಲೇ ಎಪಿಕೆ ಫೈಲ್‌ – ಎಚ್ಚರ ಅವಶ್ಯ

ಕಾರ್ಕಳ : ಇದೀಗ ಸೈಬರ್‌ ವಂಚಕರು ಗೆಳೆಯರ ವ್ಯಾಟ್ಸಪ್‌ ನಂಬರ್‌ನಿಂದಲೇ ಎಪಿಕೆ ಫೈಲ್‌ಗಳನ್ನು ಕಳುಹಿಸಿ ಬ್ಯಾಂಕ್‌ ಖಾತೆಯಲ್ಲಿರುವ ಹಣ ದೋಚಲು ಯತ್ನಿಸುತ್ತಿದ್ದಾರೆ. ವ್ಯಾಟ್ಸಪ್​ ಹ್ಯಾಕ್‌ ಮಾಡುವುದರೊಂದಿಗೆ ವೈಯಕ್ತಿಕ ಹಾಗೂ ಬ್ಯಾಂಕ್‌ ವಿವರ ಪಡೆದು ವಂಚಿಸುವ, ಮಾಹಿತಿ ದುರ್ಬಳಕೆ ಮಾಡುವ ಕೃತ್ಯ ಮತ್ತೆ ಹೆಚ್ಚುತ್ತಿದೆ. ಕಾರ್ಕಳದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಇಂತಹ ಪ್ರಕರಣಗಳು ನಡೆದಿದ್ದು, ಲಕ್ಷಾಂತರ ರೂ. ಕಳೆದುಕೊಂಡವರಿದ್ದಾರೆ.

ಒಮ್ಮೆ ಎಪಿಕೆ ಪೈಲ್‌ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಆದಲ್ಲಿ ಅದು ಮೊಬೈಲ್ ಫೋನ್‌ನಲ್ಲಿರುವ ಎಲ್ಲ ಮಾಹಿತಿ ಹುಡುಕಾಡಿ ಸಂಗ್ರಹಿಸಿಕೊಂಡು ಅದನ್ನು ಸಿದ್ಧಪಡಿಸಿದ ವಂಚಕರಿಗೆ ಅವುಗಳನ್ನೆಲ್ಲ ರವಾನಿಸುತ್ತದೆ. ಒಂದರ್ಥದಲ್ಲಿ ನಮ್ಮ ಮೊಬೈಲ್ ಫೋನ್ ಸಂಪೂರ್ಣ ವಂಚಕರ ಹಿಡಿತಕ್ಕೆ ಕೊಟ್ಟಂತೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವಾಗ ಬರುವ ಒಟಿಪಿ ಸಹ ಅವರಿಗೆ ನಾವು ಹೇಳಬೇಕಿಲ್ಲ ತಮ್ಮಲ್ಲಿರುವ ಕಂಪ್ಯೂಟರ್ ಅಥವಾ ಫೋನ್ ಮೂಲಕವೇ ಅದನ್ನು ಪಡೆಯುತ್ತಾರೆ. ಎಲ್ಲೋ ಕುಳಿತು ಸುಲಭವಾಗಿ ಕ್ಷಣಮಾತ್ರದಲ್ಲಿ ನಮ್ಮ ಬ್ಯಾಂಕ್ ಖಾತೆ ಬರಿದಾಗಿಸುತ್ತಾರೆ.

ಆರ್‌ಟಿಓ ಚಲನ್‌ ಮೇಸೆಜ್‌ – 50 ಲಕ್ಷ ರೂ. ವಂಚನೆ
ಎರಡು ದಿನಗಳ ಹಿಂದೆ ನೀರೆ ಗ್ರಾಮದ ಜಡ್ಡಿನಕಟ್ಟ ನಿವಾಸಿ ವಾಸುದೇವ ಶೆಟ್ಟಿಗಾರ್‌ ಎಂಬವರ ವ್ಯಾಟ್ಸಾಪ್‌ಗೆ ಸ್ನೇಹಿತರೊಬ್ಬರ ನಂಬರಿನಿಂದ RTO Challan ಎನ್ನುವ ಎಪಿಕೆ ಫೈಲ್‌ ಬಂದಿದ್ದು, ಈ ಫೈಲ್‌ ಓಪನ್‌ ಮಾಡಿದ ಕೂಡಲೇ ವಂಚನೆಗೆ ಒಳಗಾಗಿದ್ದಾರೆ. ಈ ಮೂಲಕ ಮೊಬೈಲ್‌ನಲ್ಲಿದ್ದ ಮಾಹಿತಿ ಪಡೆದ ವಂಚಕರು ವಾಸುದೇವ ಅವರ ಬ್ಯಾಕ್‌ ಖಾತೆ ಹ್ಯಾಕ್‌ ಮಾಡುವ ಮೂಲಕ 5,63,117 ರೂ. ಹಣವನ್ನು ದೋಚಿದ್ದಾರೆ.

ಇನ್ನು ಕಳೆದ ಕೆಲ ದಿನಗಳ ಹಿಂದೆ ಕಾರ್ಕಳದ ವ್ಯಕ್ತಿಯೊಬ್ಬರ ವ್ಯಾಟ್ಸಪ್​ ಹ್ಯಾಕ್‌ ಮಾಡಿದ ವಂಚಕರು ಅವರ ವಾಟ್ಸ್​ಆ್ಯಪ್​ ಮೂಲಕ ಅವರ ಸಂಪರ್ಕದಲ್ಲಿರುವವರಿಗೆ ‘RTO Challan.apk’ ಎಂಬ ನಕಲಿ ಚಲನ್‌ ಸಂದೇಶಗಳನ್ನು ಕಳುಹಿಸುವ ಮೂಲಕ ವಂಚಿಸಲು ಪ್ರಯತ್ನಿಸಿದ್ದಾರೆ. ಆದರೆ ಕೂಡಲೇ ಎಚ್ಚೆತ್ತುಕೊಂಡ ಅವರು ತಮ್ಮ ಮೊಬೈಲ್‌ ನಿಯಂತ್ರಣ ವಂಚಕರ ಕೈಗೆ ಸಿಗದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗೆಳೆಯರ, ಪರಿಚಯಸ್ಥರ ಮೊಬೈಲ್‌ ನಿಂದ ಮಾತ್ರವಲ್ಲದೇ ಅಪರಿಚಿತ ಸಂಖ್ಯೆಗಳಿಂದ ನಕಲಿ ‘RTO ಚಲನ್’ ಸಂದೇಶಗಳೂ ರವಾನೆಯಾಗುತ್ತಿದೆ. ಆದ್ದರಿಂದ APK ಫೈಲ್ ಹೊಂದಿರುವ ಯಾವುದೇ ಸಂದೇಶವನ್ನು, ವಿಶೇಷವಾಗಿ ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶವನ್ನು ಅನುಮಾನಾಸ್ಪದವೆಂದು ಪರಿಗಣಿಸಬೇಕು. ಅಲ್ಲದೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಂದಿಗೂ ವಾಟ್ಸ್​ಆ್ಯಪ್ ಅಥವಾ SMS ಲಿಂಕ್‌ಗಳ ಮೂಲಕ ಚಲನ್ ಎಚ್ಚರಿಕೆಗಳನ್ನು ಕಳುಹಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಟ್ರಾಫಿಕ್ ಚಲನ್ ಬಾಕಿ ಇದೆಯೇ ಎಂದು ಪರಿಶೀಲಿಸಲು ಏಕೈಕ ಕಾನೂನುಬದ್ಧ ಮಾರ್ಗವೆಂದರೆ ಅಧಿಕೃತ ಪರಿವಾಹನ್ ವೆಬ್‌ಸೈಟ್ ಅಥವಾ ರಾಜ್ಯದ RTO ಪೋರ್ಟಲ್.

ಒಂದು ವೇಳೆ ಇಂತಹ ಸನ್ನಿವೇಶ ಎದುರಾದರೆ, ಫೈಲ್‌ ಡೌನ್‌ಲೋಡ್‌ ಆಗಿದ್ದಲ್ಲಿ ಮೊಬೈಲ್‌ settings ನಲ್ಲಿ search ಲೈನ್‌ನಲ್ಲಿ .apk ಅಂತ ಸರ್ಚ್‌ ಕೊಟ್ಟಲ್ಲಿ ಕಾಣಸಿಗುವುದು. ಅಲ್ಲಿ .apk file ಕಂಡುಬಂದಲ್ಲಿ remove ಮಾಡಬೇಕಿದೆ.
ತಕ್ಷಣ 1930 ನಂಬರ್‌ಗೆ ಕರೆ ಮಾಡಿ ತಿಳಿಸಬೇಕು.
ಸಂಬಂಧಪಟ್ಟ ಬ್ಯಾಂಕ್‌ನ ಕಸ್ಟಮರ್‌ ಕೇರ್‌ ನಂಬರ್‌ಗೆ ಕರೆ ಮಾಡಿ ಅಕೌಂಟ್‌ ಬ್ಲಾಕ್‌ ಮಾಡಿಸುವುದು ಉತ್ತಮ.

ವಂಚನೆಗಳನ್ನು ತಪ್ಪಿಸುವುದು ಹೇಗೆ ?
-ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಯಿಂದ ಬಂದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ.
-ಯಾರಾದರೂ ವ್ಯಾಟ್ಸಪ್‌ನಲ್ಲಿ ಅಂತಹ ಸಂದೇಶಗಳನ್ನು ಕಳುಹಿಸುತ್ತಿದ್ದರೆ, ಅವರನ್ನು ವರದಿ ಮಾಡಿ ಮತ್ತು ನಿರ್ಬಂಧಿಸಿ.
-ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ.

ಕಠಿಣ ಶಿಕ್ಷೆ ಜಾರಿಯಾಗಲಿ
ಸೈಬರ್‌ ವಂಚನೆಯಿಂದಾಗಿ ಇದೀಗ ಬ್ಯಾಂಕ್‌ ಗ್ರಾಹಕರು ನಿಶ್ಚಿಂತೆಯಿಂದ ಇರದಂತಾಗಿದೆ. ಬ್ಯಾಂಕ್‌ ಅಧಿಕಾರಿಗಳು ತಮಗೆ ಸಂಬಂಧಪಟ್ಟ ವಿಚಾರವೇ ಅಲ್ಲ ಎಂಬಂತಿರುತ್ತಾರೆ. ಸರಕಾರ ಇದರ ಮೂಲವನ್ನು ಪತ್ತೆ ಹಚ್ಚಿ ಖದೀಮರಿಗೆ ಕಠಿಣ ಶಿಕ್ಷೆ ವಿಧಿಸಿದಲ್ಲಿ ಮಾತ್ರವೇ ಇಂತಹ ಪ್ರಕರಣ ತಡೆಗಟ್ಟಬಹುದಾಗಿದೆ. ದುಡ್ಡು ಕಳೆದುಕೊಂಡವನ ನೋವು ಆತನಿಗೆ ಮಾತ್ರ ತಿಳಿಯುವುದು. ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್‌ ಖಾತೆಯಲ್ಲಿರುವ ಹಣ ಸುರಕ್ಷಿತವಲ್ಲ ಎಂದು ಗ್ರಾಹಕರು ಮನೆಯಲ್ಲೇ ಹಾರ್ಡ್‌ ಕ್ಯಾಶ್‌ ಇಟ್ಟುಕೊಳ್ಳುವುದೇ ಸೇಫ್‌ ಎಂಬ ನಿಲುವಿಗೆ ಬರಬೇಕಾದೀತು.















































































































































error: Content is protected !!
Scroll to Top