ಐಎಎಸ್ ಅಧಿಕಾರಿ ಬಿ. ಸದಾಶಿವ ಪ್ರಭು ನಿವೃತ್ತಿ – ಕಾರ್ಕಳದಲ್ಲಿ ಅಭಿನಂದನೆ

ಕಾರ್ಕಳ : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಹುದ್ದೆಯಿಂದ ನಿವೃತ್ತರಾದ ಐಎಎಸ್ ಅಧಿಕಾರಿ ಸದಾಶಿವ ಪ್ರಭು ಬಿ. ಅವರಿಗೆ ಜೂ. 5ರಂದು ಕಾರ್ಕಳ ಪ್ರವಾಸಿ ಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಕಳ ತಾಲೂಕಿನ ಎಳ್ಳಾರೆಯ ಬಿ. ಸದಾಶಿವ ಪ್ರಭು ವಾಯುಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಕಿರಿಯ ವಾರಂಟ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು. ನಂತರ 2005ರಲ್ಲಿ ಮಂಗಳೂರಿನ ಪೊಲೀಸ್ ಸಬ್ ಇನ್ಸೆಕ್ಟರ್ ಆಗಿ ನೇಮಕಾತಿ ಹೊಂದಿದರು. 2006 ಬ್ಯಾಚ್‌ನ ಕೆ.ಎ.ಎಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ, 2008ರಲ್ಲಿ ಸಹಾಯಕ ಅಯುಕ್ತರಾಗಿ ಕೆ.ಎ.ಎಸ್ ಸೇವೆಗೆ ಸೇರ್ಪಡೆಗೊಂಡರು. ಬಿಜಾಪುರದಲ್ಲಿ ಪ್ರಾಯೋಗಿಕ ತರಬೇತಿ ಮುಗಿಸಿದ ಬಳಿಕ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹಾಯಕ ಕಮಿಷನ‌ರ್ ಆಗಿ, ನಂತರ ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ, ಬಳಿಕ ಐಎಎಸ್ ಪದೋನ್ನತಿ ಪಡೆದು ಬೆಂಗಳೂರಿನ ಮೇಲ್ಮನವಿ ನ್ಯಾಯಮಂಡಳಿ ಸದಸ್ಯರಾಗಿ ಅನಂತರ ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಬಳಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡು ಮೇ 31ರಂದು ನಿವೃತ್ತಿ ಹೊಂದಿರುತ್ತಾರೆ.

ಶ್ರೀ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಮಾತನಾಡಿ ಸದಾಶಿವ ಪ್ರಭು ಎಂಬ ಗ್ರಾಮೀಣ ಪ್ರತಿಭೆ ಐಎಎಸ್ ಅಧಿಕಾರಿಯಾಗಿ ವಿವಿಧ ಇಲಾಖೆಗಳಲ್ಲಿ ಮಾದರಿ ಎನ್ನುವಂತೆ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದುತ್ತಿರುವುದು ಸಂತಸದಾಯಕ. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹೇಳಿದರು.
ಸದಾಶಿವ ಪ್ರಭು ಮಾತನಾಡಿ, ಯಾವುದೇ ರೀತಿಯಾಗಿ ಕರ್ತವ್ಯಲೋಪ ಮಾಡದೆ ವೃತ್ತಿ ಜೀವನದಲ್ಲಿ ಜನಪರವಾಗಿ ಕಾರ್ಯನಿರ್ವಹಿಸಿದ್ದೇನೆ ಎನ್ನುವ ಸಂತೃಪ್ತಿಯಿದೆ ಎಂದು ಹೇಳಿದರು.

ಈ ಸಂದರ್ಭ ಉಪತಹಶೀಲ್ದಾರ್ ಮಂಜುನಾಥ್ ಟಿ., ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್, ಪ್ರಧಾನ ಕಾರ್ಯದರ್ಶಿ ಸುರೇಶ್ ಪ್ರಭು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

















































error: Content is protected !!
Scroll to Top