ಪ್ರಚಾರದ ಗೀಳಿಗೆ ಕಾಂಗ್ರೆಸ್‌ ನಾಯಕರಿಂದ ನಾನಾ ರೀತಿಯ ಹೇಳಿಕೆ – ನವೀನ್‌ ನಾಯಕ್‌

ಕಾರ್ಕಳ : ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕಾರ್ಕಳ ಶಾಸಕರು ಈಗಾಗಲೇ ಜಿಲ್ಲಾ ಸಹಾಯಕ ಕಮಿಷನರ್, ಜಿಲ್ಲಾ ಯೋಜನಾಧಿಕಾರಿ ಹಾಗೂ ಇತರ ಅಧಿಕಾರಿಗಳ ಸಭೆ ಕರೆದು ಕಾರ್ಕಳದ ಅಭಿವೃದ್ಧಿಯ ಕುರಿತು ಸಭೆ ನಡೆಸಿದ್ದಾರೆ. ಪುರಸಭಾ ವ್ಯಾಪ್ತಿಯ ಅಭಿವೃದ್ಧಿಯ ಕುರಿತಾಗಿಯೇ ಚರ್ಚೆ ನಡೆಸಿ ಕಾರ್ಯಯೋಜನೆ ರೂಪಿಸಿದ್ದಾರೆ. ಇದರ ಪರಿಣಾಮವಾಗಿ ತಕ್ಷಣವೇ ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆ ಬಗೆ ಹರಿಯಲಿದೆ ಎನ್ನುವುದನ್ನರಿತು ಇದರ ಕ್ರೆಡಿಟ್ ಪಡೆದುಕೊಳ್ಳುವ ತರಾತುರಿಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ಪ್ರಚಾರದ ಗೀಳಿಗೆ ನಾನಾ ರೀತಿಯ ಮಾಧ್ಯಮ ಹೇಳಿಕೆಗಳನ್ನು ನೀಡಲು ಶುರು ಮಾಡಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದ್ದುಗೆ ಗುದ್ದಾಟ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅದ್ಯಾವ ರೀತಿ ಕೆಲಸ ಮಾಡುತ್ತಿದೆ ಅನ್ನೋದನ್ನು ಇಡೀ ರಾಜ್ಯದ ಜನತೆ ನೋಡುತ್ತಿದ್ದಾರೆ. ಕಾಂಗ್ರೆಸ್ಸಿನ ಗದ್ದುಗೆ ಗುದ್ದಾಟದಲ್ಲಿ ರಾಜ್ಯದ ಆಡಳಿತ ಯಂತ್ರವೇ ಕುಸಿದಿದೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು 3 ವರ್ಷಗಳಾದರೂ ಯಾವ ಕ್ಷೇತ್ರಕ್ಕೂ ಒಂದು ಬಿಡಿಗಾಸು ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ರಾಜ್ಯ ಸರಕಾರಿ ನೌಕರರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ, ಪುರಸಭಾ ಕಾರ್ಮಿಕರಿಗೂ ವೇತನ ನೀಡುತ್ತಿಲ್ಲ. ಜನ ಸಾಮಾನ್ಯರಿಗೆ ಜೀವನಾಧಾರವಾಗಿರುವ ಮಾಸಿಕ ವೃದ್ಧಾಪ್ಯ ವೇತನ, ವಿಧವಾ ವೇತನದಂತಹ ಪಿಂಚಣಿಯು ಸಹ ಮರೀಚಿಕೆಯಾಗಿಬಿಟ್ಟಿದೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ನಡುವೆಯೂ ಕಾರ್ಕಳದ ಶಾಸಕರು ಮಾತ್ರ ಯಾವುದೇ ಪ್ರಚಾರ ನೀಡದೆ, ತಮ್ಮ ಸುಧೀರ್ಘ ಸೇವಾ ಅನುಭವದ ಆಧಾರದಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸುವ್ಯವಸ್ಥಿತ, ಜನಪರ ಆಡಳಿತ ನೀಡುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ನಿರಂತರವಾಗಿ ಆಡಳಿತಾತ್ಮಕ ಸಭೆಗಳನ್ನು ನಡೆಸಿ ಕ್ಷೇತ್ರದ ಕುಂದು ಕೊರತೆಗಳನ್ನು ನೀಗಿಸುವತ್ತ ಮೌನವಾಗಿಯೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎಂದರು.















































































































































error: Content is protected !!
Scroll to Top