ಎಂ ಸ್ಯಾಂಡ್ ಮರಳಿಗಾಗಿ ಚಾಲಕರ ಜಗಳ: ಹಲ್ಲೆ

ಕಾರ್ಕಳ: ಸೂಡ ಗ್ರಾಮದ ಓರಿಯಂಟಲ್ ಗ್ರಾನೈಟ್ ಕ್ರಷರ್‌ನಲ್ಲಿ ಎಂ.ಸ್ಯಾಂಡ್ ಲೋಡ್ ಮಾಡುವ ಸರದಿಯ ವಿಚಾರವಾಗಿ ಚಾಲಕರ ನಡುವೆ ಜಗಳ ನಡೆದು, ಓರ್ವ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ. ಶಿವಮೊಗ್ಗ ಮೂಲದ ಟಿಪ್ಪರ್ ಚಾಲಕ ಕನಕ ವಿ. ಹಲ್ಲೆಗೊಳಗಾದವರು. ಹತ್ತನೇ ಸರದಿಯಲ್ಲಿದ್ದ ಕನಕ ಅವರು, ಎರಡನೇ ಸರದಿಯ ವಾಹನ ಚಾಲಕ ಸ್ಥಳದಲ್ಲಿ ಇಲ್ಲದ ಕಾರಣ ತಮ್ಮ ವಾಹನಕ್ಕೆ ಮರಳು ತುಂಬಿಸಲು ಮುಂದಾಗಿದ್ದರು. ಈ ವೇಳೆ ಅಲ್ಲಿಗೆ ಬಂದ ಮತ್ತೋರ್ವ ಚಾಲಕ ಹರೀಶ್ ಎಂಬಾತ ತಕರಾರು ತೆಗೆದು ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ.
ಲೋಡ್ ಮಾಡುವ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಹರೀಶ್ ತನ್ನ ವಾಹನ ಮಾಲೀಕರೊಂದಿಗೆ ಫೋನಿನಲ್ಲಿ ಮಾತನಾಡಿ ಬಳಿಕ ಕನಕ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಚಾಲಕನ ಸೀಟಿನಲ್ಲಿ ಕುಳಿತಿದ್ದ ಕನಕ ಅವರನ್ನು ಕೆಳಕ್ಕೆ ಎಳೆದು ಎದೆ, ತಲೆ ಮತ್ತು ಕೆನ್ನೆಗೆ ಮುಷ್ಠಿಯಿಂದ ಗುದ್ದಿ, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.































error: Content is protected !!
Scroll to Top