ಕಾರ್ಕಳ : ತನ್ನ 43ನೇ ವಯಸ್ಸಿನಲ್ಲಿ ಕಾರ್ಕಳದ ಆಟೋ ಚಾಲಕರೋರ್ವರು ಪಿಯುಸಿ ಪರೀಕ್ಷೆ ಬರೆದು ತೇರ್ಗಡೆಯಾಗಿ ಸುದ್ದಿಯಾಗಿದ್ದಾರೆ. ನಿಟ್ಟೆ ಗ್ರಾಮದ ಅತ್ತೂರು ನಿವಾಸಿ ಪ್ರಶಾಂತ್ ಪೂಜಾರಿ 43ನೇ ವಯಸ್ಸಿಗೆ ಪಿಯುಸಿ ಮುಗಿಸಿದ ಯುವಕ. ಬಾಲ್ಯದಲ್ಲಿ ಬಡತನದಿಂದಾಗಿ ಓದಲು ಅವಕಾಶ ಸಿಕ್ಕಿರಲಿಲ್ಲ. ಅತ್ತೂರು ಸೈಂಟ್ ಲಾರೆನ್ಸ್ ಹೈಸ್ಕೂಲ್‌ನಲ್ಲಿ 1996-97ನೇ ಸಾಲಿನಲ್ಲಿ 9ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಬಳಿಕ ಶಾಲೆಯತ್ತ ಮುಖ ಮಾಡಿಲ್ಲ. ಮುಂದೆ ಓದಿಸುವ ವಾತಾವರಣವೂ ಮನೆಯಲ್ಲಿ ಇರಲಿಲ್ಲ ಎಂದು ಪ್ರಶಾಂತ್ ಹೇಳಿದರು.
ತಾನು ಪಿಯುಸಿ ಮಾಡಬೇಕೆಂದು ಛಲ ಬಿಡದೆ ಪ್ರಯತ್ನ ಮುಂದುವರಿಸಿದ್ದಾರೆ. ಅತ್ತೂರು ಹೈಸ್ಕೂಲ್‌ನ ಶಿಕ್ಷಕರ ನೆರವಿನಿಂದ 2024-25ನೇ ಸಾಲಿನಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದರು. ಮುಂದೆ ಕಲಿಯಬೇಕೆಂಬ ಹಂಬಲವಿದ್ದ ಕಾರಣ, ಕಾರ್ಕಳ ಯಶಸ್ವಿ ಟ್ಯುಟೋರಿಯಲ್ ನಲ್ಲಿ ಮೂರು ತಿಂಗಳ ಕಾಲ ಪಿಯುಸಿ ಕೋಚಿಂಗ್ ಪಡೆದು ಪರೀಕ್ಷೆ ಬರೆದು, ಕಲಾ ವಿಭಾಗದಲ್ಲಿ 334 ಅಂಕ ಪಡೆದಿರುತ್ತಾರೆ.

ಮುಂಜಾನೆ ಬೇಗ ಎದ್ದು ಓದುವ ಅಭ್ಯಾಸ ರೂಢಿಸಿಕೊಂಡಿದ್ದ ಅವರು ಪಿಯುಸಿ ಕನಸು ಇದೀಗ ಸಾಕಾರಗೊಂಡಿದೆ. ಮುಂದೆ ಡಿಗ್ರಿ ಪಡೆಯಬೇಕೆಂದಿರುವ ಅವರು ಕಲಿತ ವಿದ್ಯೆ ಮುಂದಿನ ಬದುಕಿಗೆ ದಾರಿದೀಪವಾಗುತ್ತದೆ ಎನ್ನುವ ನಂಬಿಕೆ ಅವರಲ್ಲಿದೆ. ಪತ್ನಿ ದೀಪಾ ಸುರತ್ಕಲ್‌ನಲ್ಲಿ ಉದ್ಯೋಗದಲ್ಲಿದ್ದು, ಇಬ್ಬರು ಪುತ್ರರು ಇದ್ದಾರೆ. ಪ್ರಸ್ತುತ ಅತ್ತೂರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ.






























































