ನಮ್ಮ ದೇಶದಲ್ಲಿ ವಿವಾಹಿತ ಮಹಿಳೆಯ ವಿರುದ್ಧ ಆಕೆಯ ಪತಿ ಮಾನಸಿಕ, ದೈಹಿಕ ಹಿಂಸೆ, ಕಿರುಕುಳ ನೀಡಿದ ಅಥವಾ ದೌರ್ಜನ್ಯ ನಡೆಸಿದ ಸಂದರ್ಭದಲ್ಲಿ ಆಕೆಯ ರಕ್ಷಣೆಗಾಗಿ ವಿವಿಧ ರೀತಿಯ ಕಾನೂನುಗಳು ಚಾಲ್ತಿಯಲ್ಲಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇಂತಹ ಕಾನೂನುಗಳನ್ನು ವಿವಾಹಿತ ಮಹಿಳೆಯು ತನ್ನ ಪತಿಯ ವಿರುದ್ಧ ದುರುಪಯೋಗ ಪಡಿಸಿ ಆತನಿಗೆ ಕಿರುಕುಳ ನೀಡುವ ಅಥವಾ ದೌರ್ಜನ್ಯ ನಡೆಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಪತ್ನಿಯಿಂದ ಪತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಿರುಕುಳ ಅಥವಾ ದೌರ್ಜನ್ಯ ಉಂಟಾದಾಗ ಆತನ ರಕ್ಷಣೆಗಾಗಿ ನೇರವಾದ ಯಾವುದೇ ವಿಶೇಷ ಕಾಯ್ದೆಗಳಿರುವುದಿಲ್ಲ. ಆದರೂ ಪತ್ನಿಯ ಹಿಂಸೆ, ಕಿರುಕುಳ ಅಥವಾ ದೌರ್ಜನ್ಯದಿಂದ ನೊಂದ ಪತಿಯು ಭಾರತೀಯ ನ್ಯಾಯ ಸಂಹಿತ, 2023 ಮತ್ತು ಇತರ ವೈವಾಹಿಕ ಕಾನೂನುಗಳಲ್ಲಿ ಉಲ್ಲೇಖಿಸಿರುವ ಕಾನೂನಾತ್ಮಕ ಕ್ರಮಗಳನ್ನು ಆರೋಪಿತ ಪತ್ನಿಯ ವಿರುದ್ಧ ಕೈಗೊಂಡು ಆಕೆಯ ವಿರುದ್ಧ ಕಾನೂನುಬದ್ಧ ರಕ್ಷಣೆಗಳನ್ನು ಪಡೆಯಬಹುದಾಗಿದೆ.
ಉದಾಹರಣೆಗೆ ಪತ್ನಿಯು ಆಕೆಯ ಪತಿಗೆ ಮಾನಸಿಕ ಶಾಂತಿ ಅಥವಾ ದೈಹಿಕ ಸುರಕ್ಷತೆಗೆ ಧಕ್ಕೆ ತರುವಂತಹ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆ ಅಥವಾ ಕಿರುಕುಳ ನೀಡುತ್ತಿದ್ದರೆ ಪತಿಯು ಆಕೆಯ ವಿರುದ್ಧ ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13(1)(i-ಚಿ) ಪ್ರಕಾರ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿಯಾಗಿ ಪತ್ನಿಯು ಪತಿಗೆ ದೈಹಿಕವಾಗಿ ಹಲ್ಲೆ ಮಾಡಿದರೆ ಅಥವಾ ಜೀವ ಬೆದರಿಕೆ ಹಾಕಿದರೆ ಪತಿಯು ಭಾರತೀಯ ನ್ಯಾಯ ಸಂಹಿತ, 2023 ರ ಅನ್ವಯ ಆಕೆಯ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ. ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದಾಗಿದೆ. ಪತ್ನಿಯು ಪತಿಯ ವಿರುದ್ಧ ವರದಕ್ಷಿಣೆ ಅಥವಾ ವೈವಾಹಿಕ ಕಿರುಕುಳದಂತಹ ಸುಳ್ಳು ಪ್ರಕರಣವನ್ನು ಪತಿಯ ವಿರುದ್ಧ ದಾಖಲಿಸಿದರೆ ಅಂತಹ ಸುಳ್ಳು ಪ್ರಕರಣವನ್ನು ಸಂಬಂಧಪಟ್ಟ ನ್ಯಾಯಾಲಯದ ಮೂಲಕ ರದ್ದುಪಡಿಸಲು ಸಹಾ ಭಾರತೀಯ ನ್ಯಾಯ ಸಂಹಿತ, 2023 ರ ಕಾನೂನಿನಲ್ಲಿ ಅವಕಾಶ ಇರುತ್ತದೆ. ಇಷ್ಟು ಮಾತ್ರವಲ್ಲದೇ ಪತ್ನಿಯ ಸುಳ್ಳು ದೂರುಗಳಿಂದ ಪತಿಯ ಗೌರವಕ್ಕೆ ಧಕ್ಕೆ ಬಂದಿದ್ದರೆ, ಪತಿಯು ಆತಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದಾಗಿದೆ. ಕರ್ನಾಟಕ ಹೈಕೋರ್ಟ್‌ನ ಕೆಲವು ತೀರ್ಪುಗಳ ಪ್ರಕಾರ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯು ಕೇವಲ ಮಹಿಳೆಯರಿಗೆ ಮಾತ್ರವಲ್ಲ. ಪತ್ನಿಯು ಪತಿಯ ವಿರುದ್ಧ ದೌರ್ಜನ್ಯ ಎಸಗಿದರೆ, ಪತಿಯು ಕೂಡ ಪತ್ನಿ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದೂರು ದಾಖಲಿಸಬಹುದಾಗಿದೆ. ಪತ್ನಿಯು ಉದ್ದೇಶಪೂರ್ವಕವಾಗಿ ತನ್ನ ಪತಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ದೂರು ದಾಖಲಿಸಿದರೆ, ಪತಿಯು ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತ, 2023 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದಾಗಿದೆ.







































