ಉಡುಪಿ : ಜೆ.ಇ.ಇ ಮೈನ್ಸ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಪ್ರಶ್ನೆ ಪತ್ರಿಕೆ ಪೋಟೋ ತೆಗೆದು ಪ್ರಸಾರ ಮಾಡಲು ಯತ್ನಿಸಿದ ಘಟನೆ ಎ. 5ರಂದು ಮಣಿಪಾಲದಲ್ಲಿ ನಡೆದಿದೆ. ಉತ್ತರಖಂಡದ ವಿದ್ಯಾರ್ಥಿ ಅರೀದಮಾನ್ ಸಿಂಗ್ ಸಾಂಗ್ ಪ್ರಶ್ನೆ ಪತ್ರಿಕೆ ಪ್ರಸಾರ ಮಾಡಲು ಯತ್ನಿಸಿದ ಆರೋಪಿ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸುವ ಜೆ.ಇ.ಇ ಮೈನ್ಸ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ನಡೆಸಿದ್ದು ಬೆಳಿಗ್ಗೆ ಸುಮಾರು 149 ವಿದ್ಯಾರ್ಥಿಗಳು, ಮಧ್ಯಾಹ್ನ 133 ಮಕ್ಕಳು ಹಾಜರಾಗಿರುತ್ತಾರೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ವಿಳಾಸದ ಮಾಹಿತಿ ಬಗ್ಗೆ ಮೂಲ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹಾಗೂ ಪರೀಕ್ಷೆಯ ಹಾಲ್ ಟಿಕೆಟ್ ತೆಗೆದುಕೊಂಡು ಬರಲು ಅನುಮತಿ ಇರುತ್ತದೆ. ಅರೀದಮಾನ್ ಸಿಂಗ್ ಸಾಂಗ್ ಪರೀಕ್ಷೆಯ ಸಮಯ ಲ್ಯಾಬ್ ಎ ಕೇಂದ್ರದ ಸಿಸ್ಟಮ್ ಸಿ-018 ರಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದ. ಆತ ಮೊಬೈಲ್ ಪೋನ್ ಬಳಸಿ ಪರೀಕ್ಷಾ ಹಾಲ್ ನಲ್ಲಿ ಕಂಪ್ಯೂಟರ್ ಸಿಸ್ಟಂನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ಆತನ ಮೊಬೈಲಿನಿಂದ ಪೋಟೋ ತೆಗೆದು ಅದನ್ನು ಹೊರಗಡೆ ಕಳುಹಿಸಿ ಪ್ರಸಾರ ಮಾಡಲು ಯತ್ನಿಸಿದ್ದಾನೆ. ಈ ಕುರಿತು ಪರೀಕ್ಷಾ ಕೇಂದ್ರದ ಪರಿವೀಕ್ಷಕರಾಗಿದ್ದ ಹೆಬ್ರಿ ನವೋದಯ ವಿದ್ಯಾಸಂಸ್ಥೆಯ ಸಹಾಯಕ ಪ್ರಾಂಶುಪಾಲ ವಿ.ಕೆ. ಮನೋಹರ್ ಕುಮಾರ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೆಇಇ ಮೈನ್ಸ್ ಪ್ರಶ್ನೆ ಪತ್ರಿಕೆ ಪ್ರಸಾರಕ್ಕೆ ಯತ್ನಿಸಿದ ವಿದ್ಯಾರ್ಥಿ























