ಬಂಗಾಳದ ಮೇಲೆ ಕಣ್ಣಿಟ್ಟರೆ ಮನೆಗೆ ನುಗ್ಗಿ ಕೊಲ್ಲುತ್ತೇವೆ – ಪಾಕ್‌ಗೆ ಅಭಿಷೇಕ್ ಬ್ಯಾನರ್ಜಿ ತಿರುಗೇಟು

ಕೋಲ್ಕತ್ತಾ : ಪಾಕಿಸ್ತಾನದ ಸಚಿವ ಕೊಲ್ಕತ್ತಾವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೌನಕ್ಕೆ ಶರಣಾಗಿದ್ದಾರೆ. ಬಂಗಾಳದ ಮೇಲೆ ಕಣ್ಣಿಟ್ಟರೆ ಮನೆಗೆ ನುಗ್ಗಿ ಕೊಲ್ಲುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಖವಾಜಾ ಆಸಿಫ್ ಅವರ ಹೆಸರನ್ನು ನಾನು ಬರೆದಿಟ್ಟಿದ್ದೇನೆ. ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ. ಕೇಂದ್ರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ದಿನ ನಾವು ಪಾಕಿಸ್ತಾನಿಯರ ಮನೆಗೇ ನುಗ್ಗಿ ಕೊಲ್ಲುತ್ತೇವೆ ಎಂದು ಸಿಲಿಗುರಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಭಿಷೇಕ್ ಬ್ಯಾನರ್ಜಿ ಗುಡುಗಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಭಾರತದೊಂದಿಗೆ ಸಂಘರ್ಷವೇನಾದರೂ ಸಂಭವಿಸಿದರೆ ಕೊಲ್ಕತ್ತಾವನ್ನು ಗುರಿಯಾಗಿಸಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದರು. ಪಾಕಿಸ್ತಾನದ ಈ ಹೇಳಿಕೆಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಕಿಡಿಕಾರಿದ್ದಾರೆ. ಕೇಂದ್ರದ ನಾಯಕರು ಬಂಗಾಳಕ್ಕೆ ಬಂದು ಟಿಎಂಸಿ ವಿರುದ್ಧ ಭಾಷಣ ಮಾಡುವುದರಲ್ಲಿ ಮತ್ತು ನಮ್ಮನ್ನು ಬಾಂಗ್ಲಾದೇಶಿಗಳು ಅಥವಾ ಪಾಕಿಸ್ತಾನಿಗಳು ಎಂದು ಕರೆಯುವುದರಲ್ಲಿ ನಿರತರಾಗಿದ್ದಾರೆ. ಆದರೆ, ನೆರೆ ರಾಷ್ಟ್ರದಿಂದ ನೇರ ಬೆದರಿಕೆ ಬಂದಾಗ ಅವರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಬ್ಯಾನರ್ಜಿ ಆರೋಪಿಸಿದರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.































































































error: Content is protected !!
Scroll to Top